ಬೇಸಿಗೆಯಲ್ಲಿ ಹೆಚ್ಚೇನೂ ಬೆವರದೇ, ಸುಸ್ತಾಗದೆ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಸಾಹಸ ಮಾಡಬೇಕು ಅಂದರೆ ಪ್ರಯಾಣ ಶುರು ಮಾಡಿ. ಪ್ರವಾಸಿಗರಿಗೆ ವಿಶೇಷ ಅನುಭೂತಿ ನೀಡುವ ತಾಣಗಳ ಮಾಹಿತಿ ಇಲ್ಲಿದೆ.
ಮೋಹಕ ರಾಣಿ ಮಸ್ಸೂರಿ
ಮಸ್ಸೂರಿಯ ಮನಮೋಹಕ ದೃಶ್ಯ ಮೋಡಿ ಮಾಡುತ್ತದೆ. ಸಮುದ್ರ ಮಟ್ಟದಿಂದ ಸುಮಾರು 8500 ಅಡಿ ಎತ್ತರದಲ್ಲಿದ್ದು, ಸುತ್ತಲಿನ ಹಸಿರು ಪ್ರದೇಶ, ಹಿಮದ ರಾಶಿಯನ್ನು ಹೊದಿಕೆಯಾಗಿ ಮಾಡಿಕೊಂಡಿರುವ ಬೆಟ್ಟ, ನದಿಗಳು ಇದರ ಸೌಂದರ್ಯವನ್ನು ಹೆಚ್ಚಿಸುತ್ತವೆ. ಇಲ್ಲಿ ಗಂಗಾ ದಸರಾ ಹಬ್ಬವನ್ನು ವಿಶಿಷ್ಟ ಪೂರ್ಣವಾಗಿ ಆಚರಿಸಲಾಗುತ್ತದೆ.
ಇಲ್ಲಿನ ತೆಹರಿ ಡ್ಯಾಮ್ ಇಡೀ ವಿಶ್ವದಲ್ಲೇ ಅತ್ಯಂತ ಎತ್ತರ ಪ್ರದೇಶದಲ್ಲಿರುವ ಡ್ಯಾಮ್ ಎಂದು ಪ್ರಸಿದ್ಧಿ ಪಡೆದಿದೆ. ಇಲ್ಲಿಂದ ಸ್ವಲ್ಪ ದೂರ ಹೋದರೆ ಕೋಡಿಯ ಜಂಗಲ್ ಸಿಗುತ್ತದೆ. ಇಲ್ಲಿ ಟ್ರಕ್ಕಿಂಗ್ ಮಾಡುವಾಗ ಪ್ರಾಕೃತಿಕ ಜಲ ಬುಗ್ಗೆಗಳನ್ನು ಕಾಣಬಹುದು. ಇನ್ನೂ ಹಲವಾರು ಪ್ರದೇಶಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಬೇಸಿಗೆಯಲ್ಲೂ ಚಳಿಗಾಲದ ಅನುಭವ ನೀಡುವ ಇಲ್ಲಿನ ವಾತಾವರಣ ಖುಷಿ ನೀಡುತ್ತದೆ.
ಮೆಕ್ಲಿಯೋಡ್ ನಲ್ಲಿ ಜಲಪಾತ ನೋಡಿ
ಹಿಮಾಚಲ ಪ್ರದೇಶದಲ್ಲಿರುವ ಈ ಮೆಕ್ಲಿಯೋಡ್ ಶಾಂತಿ, ನೆಮ್ಮದಿ ಹಾಗೂ ಬೌದ್ಧರ ಆಧ್ಯಾತ್ಮ ಕೇಂದ್ರ. ವರ್ಷದಿಂದ ವರ್ಷಕ್ಕೆ ಈ ಪ್ರದೇಶಕ್ಕೆ ಪ್ರವಾಸಿಗರು ಹೆಚ್ಚು ಭೇಟಿ ನೀಡುತ್ತಿದ್ದಾರೆ. ಇಲ್ಲಿ ಹೆಚ್ಚಾಗಿ ಬೌದ್ಧ ಶಿಕ್ಷಣ, ಸಂಸ್ಕೃತಿ, ಕಲೆ ಕುರಿತ ಶಿಕ್ಷಣ ಪಡೆಯಲು ಆಗಮಿಸುತ್ತಾರೆ. ಇಲ್ಲಿ ಭೇಟಿ ನೀಡಿದ ಪ್ರತಿಯೊಬ್ಬ ಪ್ರವಾಸಿಗರು ಜಲಪಾತ ನೋಡದೆ ಹೋಗಲಾರರು. ಬೌದ್ಧರ ಶಿಲ್ಪ, ಕಲಾಕೃತಿಗಳು, ಕೆತ್ತನೆಗಳು ಕಣ್ಮನ ಸೆಳೆಯುತ್ತವೆ. ಕಡಿಮೆ ದರದಲ್ಲಿ ಸುಂದರ ಕಲಾಕೃತಿಗಳನ್ನು ಕೊಳ್ಳಬಹುದು.
ಅನಾನಸ್ ಗೆ ಹಫ್ಲೊಂಗ್ ಫೇಮಸ್
ಇದು ಅಸ್ಸಾಂನಲ್ಲಿರುವ ಸುಂದರ ಪ್ರದೇಶ. ಕಿತ್ತಳೆ, ಅನಾನಸ್ ಗೆ ಪ್ರಸಿದ್ಧ. ಅಷ್ಟೇ ಅಲ್ಲ, ಬ್ರಿಟಿಷರ ಕಾಲದ ಸುಂದರ ಬಂಗಲೆಗಳನ್ನು ಇಲ್ಲಿ ನೋಡಬಹುದು. ಇಲ್ಲಿನ ಸರೋವರ, ಜಲಪಾತ, ನೂರಾರು ಪಕ್ಷಿಗಳ ಚಿಲಿಪಿಲಿ ನಾದ ಮನಸ್ಸಿಗೆ ಮುದ ನೀಡುತ್ತದೆ. ಇದನ್ನು ಭಾರತದ ಸ್ವಿಜರ್ಲ್ಯಾಂಡ್ ಎಂದು ಕರೆಯುತ್ತಾರೆ. ಅಷ್ಟೊಂದು ಸುಂದರವಾಗಿದೆ ಈ ಹಫ್ಲೊಂಗ್. ಬೇಸಿಗೆಯಲ್ಲೂ ಈ ಪ್ರದೇಶಕ್ಕೆ ಭೇಟಿ ನೀಡಬಹುದು. ಯಾಕಂದರೆ ಇದು ತಂಪಾದ ಪ್ರದೇಶ. ಸುಂದರ ಬೆಟ್ಟಗಳು ಮನಸ್ಸಿಗೆ ನಿರಾಳತೆ ನೀಡುತ್ತವೆ.