ಕ್ರಿಕೆಟ್ ನಲ್ಲಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡು, ಪಾಕಿಸ್ತಾನ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಇಮ್ರಾನ್ ಖಾನ್, ಈಗ ಪಾಕಿಸ್ತಾನದ ಪ್ರಧಾನ ಮಂತ್ರಿ. ಕ್ರೀಡಾ ಪಟುಗಳು, ರಾಜಕಾರಣಿಯಾಗಿದ್ದು ಇದು ಮೊದಲೇನಲ್ಲ. ಈ ಹಿಂದೆಯೂ ಇಂತಹ ಪ್ರಯತ್ನಗಳು ನಡೆದಿವೆ. ಅಂತಹ ಪ್ರಮುಖ ವ್ಯಕ್ತಿಗಳ ಪರಿಚಯ ಇಲ್ಲಿದೆ.
ಟೀಮ್ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಜಾರ್ಜ್ ವೀಹ್ ಸಹ ಕ್ರೀಡಾ ಜಗತ್ತಿಗೆ ಗುಡ್ ಬೈ ಹೇಳಿದ ಬಳಿಕ ಸಾಮಾಜಿಕ ಸೇವೆಯತ್ತ ಮುಖ ಮಾಡಿದ್ರು. ದಕ್ಷಿಣ ಆಫ್ರಿಕಾದ ಸ್ಟಾರ್ ಫುಟ್ಬಾಲ್ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದ ಆಟಗಾರ ಜಾರ್ಜ್ ವೀಹ್. ಇನ್ನು ಯೂರೋಪ್ ನ ಬಲಿಷ್ಠ ಫುಟ್ಬಾಲ್ ಕ್ಲಬ್ ಪರ ತಮ್ಮ ಕಾಲ್ಚೆಳಕ ಪ್ರದರ್ಶಿಸಿದ ಆಟಗಾರ. ಜಾರ್ಜ್ ವೀಹ್ ಲಿಬೇರಿಯಾ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ರು.
ಜಗತ್ತಿನ ಶ್ರೇಷ್ಠ ದೇಹದಾರ್ಡ್ಯ ಪಟು ಆರ್ನಾಲ್ಡ್ ಶ್ವಾರ್ಜಿನೆಗ್ಗರ್. ಚಿಕ್ಕ ವಯಸ್ಸಿನಲ್ಲೇ ಮಿಸ್ಟರ್ ಯುನಿವರ್ಸ್ ಪಟ್ಟ ಅಲಂಕರಿಸಿದ ಸಾಧಕ. ವೃತ್ತಿಯಿಂದ ನಿವೃತ್ತಿ ಹೊಂದಿದ ಬಳಿಕ ಆರ್ನಾಲ್ಡ್ ಬೆಳ್ಳಿ ತೆರೆಯ ಮೇಲೂ ತಮ್ಮ ಝಲಕ್ ಮೂಡಿಸಿದ್ದಾರೆ. ನಂತರ ರಾಜಕೀಯದ ಮೋಹಕ್ಕೆ ಒಳಗಾದ್ರು. ಪರಿಣಾಮ 2003ರಲ್ಲಿ ಕ್ಯಾಲಿಫೋರ್ನಿಯಾದ ಗವರ್ನರ್ ಹುದ್ದೆ ಅಲಂಕರಿಸಿದ್ರು.
ವಿಟಾಲಿ ಕ್ಲಿಟ್ಸ್ಕೊ ಬಾಕ್ಸಿಂಗ್ ನಲ್ಲಿ ತಮ್ಮ ನಿಖರ ಕಿಕ್ ಗಳಿಂದ ಎದುರಾಳಿಗಳನ್ನು ಕಂಗಾಲಾಗಿಸುತ್ತಿದ್ದ ಸ್ಟಾರ್, ಈಗ ರಾಜಕೀಯ ಎದುರಾಳಿಗಳಿಗೆ ತಮ್ಮ ಪ್ರಖರ ಮಾತಿನ ಶೈಲಿಯಿಂದ ಎಲ್ಲರ ಮನ ಗೆದ್ದಿದ್ದಾರೆ. ವಿಟಾಲಿ ಕೀವ್ ನ ಮೇಯರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
12 ಅಂತಾರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಶಿಪ್ ವಿಜೇತ, ಮ್ಯಾನ್ನಿ ಪ್ಯಾಕ್ವಿಯೊ ಸದ್ಯ ಫಿಲಿಪೈನ್ಸ್ ನಲ್ಲಿ ರಾಜಕಾರಣಕ್ಕೆ ಎಂಟ್ರಿ ನೀಡಿದ್ದಾರೆ. ಮ್ಯಾನ್ನಿ ಪ್ಯಾಕ್ವಿಯೊ 2016ರಲ್ಲಿ ಫಿಲಿಪೈನ್ಸ್ ನ ಸೆನೆಟ್ ಗೆ ಆಯ್ಕೆ ಆಗಿದ್ದಾರೆ. ಇವರನ್ನು ಬಿಟ್ಟರೆ ಶ್ರೀಲಂಕಾ ತಂಡಕ್ಕೆ 1996ರಲ್ಲಿ ವಿಶ್ವ ಕಪ್ ಮುಕುಟ ತೊಡಿಸಿದ ನಾಯಕ ಅರ್ಜುನ್ ರಣತುಂಗ ಸಹ ರಾಜಕೀಯ ಅಂಗಳದಲ್ಲಿ ಒಂದು ಕೈ ನೋಡಿದ್ದಾರೆ. ನಿವೃತ್ತಿಯ ಬಳಿಕ ರಾಜಕೀಯಕ್ಕೆ ಎಂಟ್ರಿ ನೀಡಿದ ಅರ್ಜುನ್, 2015ರಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ರು. ಈ ಮೂಲಕ ಶ್ರೀಲಂಕಾ ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಮೊದಲ ಮಾಜಿ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದ್ರು. ಇನ್ನು ಭಾರತದಲ್ಲಿ ಮಹಮ್ಮದ್ ಅಜರುದ್ದೀನ್, ನವಜೋತ್ ಸಿಂಗ್ ಸಿದ್ದು, ರಾಜವರ್ಧನ್ ಸಿಂಗ್ ರಾಥೋಡ್ ಮೊದಲಾದವರು ರಾಜಕೀಯದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.