ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಸಾಗುವ ಮಾರ್ಗ ಮಧ್ಯೆ ಇರುವ ಮಂಡಗದ್ದೆ ಪಕ್ಷಿಧಾಮ ಪಕ್ಷಿಪ್ರಿಯರಿಗೆ ಹೆಚ್ಚು ಇಷ್ಟವಾಗುತ್ತದೆ. ವಿವಿಧ ಕಡೆಗಳಿಂದ ವಲಸೆ ಬರುವ ಪಕ್ಷಿಗಳು ಇಲ್ಲಿ ಸಂತಾನೋತ್ಪತ್ತಿ ಮಾಡಿಕೊಂಡು ಮತ್ತೆ ತಮ್ಮ ಮೂಲ ಸ್ಥಾನ ಸೇರುತ್ತವೆ.
ಮಳೆಗಾಲದ ಆರಂಭದವರೆಗೂ ಇಲ್ಲಿದ್ದು, ಅವು ಹೊರಟು ಹೋಗುತ್ತವೆ. ಕೆಲವು ಪಕ್ಷಿಗಳು ಇಲ್ಲಿಯೇ ಬೀಡು ಬಿಡುತ್ತವೆ. ಗಾಜನೂರು ತುಂಗಾ ಜಲಾಶಯ ಎತ್ತರಿಸಿದ ನಂತರ ನೀರಿನಮಟ್ಟ ಏರಿಕೆಯಾಗಿ ಪಕ್ಷಿಧಾಮಕ್ಕೆ ಹಾನಿಯಾಗಿತ್ತು. ನಂತರದಲ್ಲಿ ಪಕ್ಷಿಗಳ ಸುರಕ್ಷತೆಗೆ ಒತ್ತು ನೀಡಲಾಗಿದ್ದು, ಸುತ್ತಲೂ ಕಟ್ಟೆಯನ್ನು ಎತ್ತರಿಸಲಾಗಿದೆ. ಇಲ್ಲಿಯೇ ಪಕ್ಷಿಗಳು ಬೀಡುಬಿಟ್ಟಿರುತ್ತವೆ. ಪಕ್ಷಿಧಾಮದ ಜೊತೆಗೆ ಜಲಾಶಯ, ತುಂಗಾನದಿ ಸೊಬಗನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಶಿವಮೊಗ್ಗದಿಂದ ತೀರ್ಥಹಳ್ಳಿ ರಸ್ತೆಯಲ್ಲಿ ಸಾಗಿದಾಗ, ಹರಕೆರೆ ಶಿವಾಲಯ, ಗಾಜನೂರು ಜಲಾಶಯ, ಮಂಡಗದ್ದೆ ಪಕ್ಷಿಧಾಮ, ಸಕ್ರೆಬೈಲು ಆನೆ ಬಿಡಾರ ಸಿಗುತ್ತದೆ. ಆನೆ ಬಿಡಾರದಲ್ಲಿ ಆನೆಗಳನ್ನು ನೋಡಬಹುದಾಗಿದೆ. ಸಾಧ್ಯವಾದರೆ ಕೊರೊನಾ ಲಾಕ್ ಡೌನ್ ಜಂಜಾಟ ಮುಗಿದ ಬಳಿಕ ಒಮ್ಮೆ ಹೋಗಿಬನ್ನಿ.