ಭಾರತದಲ್ಲಿ ಶ್ರೀಮಂತ ಹಾಗೂ ಬಡವರ ನಡುವಿನ ಅಂತರ ದಿನೇ ದಿನೇ ಹೆಚ್ಚಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಶ್ರೀಮಂತರ ಸಂಪತ್ತಿನಲ್ಲಿ ಏರಿಕೆಯಾಗುತ್ತಿದ್ದು, ಭಾರತದ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿ ಈಗ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಅತಿ ಸಿರಿವಂತ ವ್ಯಕ್ತಿಗಳ ಕುರಿತು ಜನಸಾಮಾನ್ಯರಿಗೆ ಸಹಜವಾಗಿ ಕುತೂಹಲವಿರುತ್ತದೆ. ಅವರ ಐಷಾರಾಮಿ ಜೀವನ ಶೈಲಿಯ ಬಗ್ಗೆ ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇರುತ್ತದೆ. ಇಂತಹ ಸಿರಿವಂತರ ಮನೆಗಳು ಹೇಗಿರಬಹುದೆಂಬ ಕುತೂಹಲಕ್ಕೆ ಚಿಕ್ಕದೊಂದು ಮಾಹಿತಿ ಇಲ್ಲಿದೆ.
ಭಾರತದ 5 ದುಬಾರಿ ಮನೆಗಳ ಪೈಕಿ ದೇಶದ ಅತಿ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯವರ ‘ಅಂಟಿಲ್ಲಾ’ ನಿವಾಸ ಪ್ರಥಮ ಸ್ಥಾನದಲ್ಲಿದೆ. ದಕ್ಷಿಣ ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ ಈ ನಿವಾಸದ ಅಂದಾಜು ಮೌಲ್ಯ 2 ಬಿಲಿಯನ್ ಡಾಲರ್ ಗಳೆಂದು ಹೇಳಲಾಗಿದೆ. ವಿಶ್ವದ ಎರಡನೇ ದುಬಾರಿ ನಿವಾಸವೆಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.
ಮುಕೇಶ್ ಅಂಬಾನಿಯವರ ಸಹೋದರ ಅನಿಲ್ ಅಂಬಾನಿಯವರ ನಿವಾಸವೂ ದುಬಾರಿ ಮನೆಗಳ ಪೈಕಿ ಒಂದಾಗಿದೆ. ಮುಂಬೈನ ಬಾಂದ್ರಾದ ಪಾಲಿಹಿಲ್ ಪ್ರದೇಶದಲ್ಲಿರುವ ಈ ಮನೆಯ ಮೌಲ್ಯ 5 ಸಾವಿರ ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ.
ಖ್ಯಾತ ಬಾಲಿವುಡ್ ನಟ ಶಾರೂಕ್ ಖಾನ್ ರ ಮನ್ನತ್’ ನಿವಾಸವೂ ದುಬಾರಿ ಮನೆಗಳ ಪೈಕಿ ಒಂದಾಗಿದೆ. ಪ್ರತಿಷ್ಟಿತ ಬಾಂದ್ರಾ ಪ್ರದೇಶದಲ್ಲಿರುವ ಈ ಮನೆಯ ಮೌಲ್ಯ 125 ರಿಂದ 150 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ.
ಖ್ಯಾತ ಉದ್ಯಮಿ ರತನ್ ಟಾಟಾರ ಮುಂಬೈನ ಕೊಲಬಾದಲ್ಲಿರುವ ನಿವಾಸವೂ ದುಬಾರಿ ಮನೆಗಳ ಪೈಕಿ ಒಂದಾಗಿದೆ. 15 ಸಾವಿರ ಚದರಡಿ ವಿಸ್ತೀರ್ಣವಿರುವ ಈ ಮನೆಯ ಮೌಲ್ಯ 125 ರಿಂದ 150 ಕೋಟಿ ರೂಪಾಯಿಗಳೆಂದು ಹೇಳಲಾಗಿದೆ.
ಉದ್ಯಮಿ- ರಾಜಕಾರಣಿ ನವೀನ್ ಜಿಂದಾಲ್ ಅವರ ದೆಹಲಿ ನಿವಾಸವೂ ದುಬಾರಿ ಮನೆಗಳಲ್ಲಿ ಒಂದೆನಿಸಿದೆ. ಇದರ ಮೌಲ್ಯವೂ 125 ರಿಂದ 150 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ.