HomeEntertainment"ನ್ಯಾಯಾಲಯವನ್ನು ಹಗುರವಾಗಿ ಪರಿಗಣಿಸಬೇಡಿ": ನೋರಾ ಫೇಟೇಹಿಗೆ ದೆಹಲಿ ಕೋರ್ಟ್ ತರಾಟೆಯೊಂದಿಗೆ ಹೊಸ ಸಮನ್ಸ್!

“ನ್ಯಾಯಾಲಯವನ್ನು ಹಗುರವಾಗಿ ಪರಿಗಣಿಸಬೇಡಿ”: ನೋರಾ ಫೇಟೇಹಿಗೆ ದೆಹಲಿ ಕೋರ್ಟ್ ತರಾಟೆಯೊಂದಿಗೆ ಹೊಸ ಸಮನ್ಸ್!

ಸುಕೇಶ್ ಚಂದ್ರಶೇಖರ್ ಗೆ ಸಂಬಂಧಿಸಿದ 200 ಕೋಟಿ ರೂಪಾಯಿ ಸುಲಿಗೆ ಪ್ರಕರಣದಲ್ಲಿ ಬಾಲಿವುಡ್ ನಟಿ ಹಾಗೂ ನರ್ತಕಿ ನೋರಾ ಫೇಟೇಹಿಗೆ ದೆಹಲಿಯ ರೌಸ್ ಅವೆನ್ಯೂ ವಿಶೇಷ ನ್ಯಾಯಾಲಯ ಹೊಸ ಸಮನ್ಸ್ ಜಾರಿ ಮಾಡಿದೆ. ಪ್ರಕರಣದ ಅಭಿಯೋಜನೆಯ ಸಾಕ್ಷಿಯಾಗಿ (Prosecution Witness) ಹೇಳಿಕೆ ದಾಖಲಿಸಲು ನವೆಂಬರ್ 6 ರಂದು ಖುದ್ದಾಗಿ ಹಾಜರಾಗುವಂತೆ ವಿಶೇಷ ನ್ಯಾಯಾಧೀಶ ಗಗನ್‌ದೀಪ್ ಸಿಂಗ್ ಆದೇಶಿಸಿದ್ದಾರೆ.

ಸೋಮವಾರ ನಡೆದ ವಿಚಾರಣೆ ವೇಳೆ ನೋರಾ ಫೇಟೇಹಿ ಪರ ವಕೀಲರು ಕೋರ್ಟ್‌ಗೆ ಗೈರುಹಾಜರಿಯ ವಿನಾಯಿತಿ ಅರ್ಜಿ ಸಲ್ಲಿಸಿದರು. ಇದರಿಂದ ಅಸಮಾಧಾನಗೊಂಡ ನ್ಯಾಯಾಲಯವು ವಕೀಲರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. “ಅವರು ಈ ಪ್ರಕರಣದಲ್ಲಿ ಸಾಕ್ಷಿಯಾಗಿದ್ದು, ಇಂದು ನ್ಯಾಯಾಲಯದಲ್ಲಿ ಹಾಜರಿರಬೇಕಿತ್ತು. ಅವರ ನಡವಳಿಕೆ ಸೂಕ್ತವಾಗಿಲ್ಲ. ನ್ಯಾಯಾಲಯವನ್ನು ಯಾರೂ ಹಗುರವಾಗಿ ಪರಿಗಣಿಸಬಾರದು” ಎಂದು ನ್ಯಾಯಾಧೀಶರು ಖಡಕ್ ಎಚ್ಚರಿಕೆ ನೀಡಿದರು. ನಟಿಗೆ ಅಕ್ಟೋಬರ್ 29 ರಂದೇ ಮಾಹಿತಿ ನೀಡಲಾಗಿತ್ತು ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ದೆಹಲಿಯ ರೋಹಿಣಿ ಜೈಲಿನಲ್ಲಿದ್ದ ಶಂಕಿತ ಕೋಟಿಗಳ ವಂಚಕ ಸುಕೇಶ್ ಚಂದ್ರಶೇಖರ್, ಹಿರಿಯ ಸರ್ಕಾರಿ ಅಧಿಕಾರಿಯಂತೆ ನಟಿಸಿ ಮಾಜಿ ರಾನ್‌ಬ್ಯಾಕ್ಸಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಿಂದ ಸುಮಾರು 200 ಕೋಟಿ ರೂಪಾಯಿ ಸುಲಿಗೆ ಮಾಡಿದ್ದ ಆರೋಪ ಎದುರಿಸುತ್ತಿದ್ದಾನೆ. ಈ ಪ್ರಕರಣವನ್ನು ದೆಹಲಿ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ತನಿಖೆ ನಡೆಸಿದ್ದು, ಮಕೋಕಾ (MCOCA) ಕಾಯ್ದೆಯಡಿ ಚಾರ್ಜ್‌ಶೀಟ್ ಸಲ್ಲಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆ ಸುಕೇಶ್ ಹಾಗೂ ಆತನ ಪತ್ನಿ ಲೀನಾ ಮರಿಯಾ ಪೌಲೋಸ್ ಜೊತೆಗಿನ ಸಂಪರ್ಕದ ಕುರಿತು ಇಒಡಬ್ಲ್ಯೂ ನಟಿಯನ್ನು ವಿಚಾರಣೆಗೆ ಒಳಪಡಿಸಿತ್ತು. ಸಿಆರ್‌ಪಿಸಿ ಸೆಕ್ಷನ್ 164 ರ ಅಡಿಯಲ್ಲಿ ನೋರಾ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು, ನಂತರ ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿ ಅವರನ್ನು ಸಾಕ್ಷಿಯನ್ನಾಗಿ ಹೆಸರಿಸಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular