HomeKarnatakaದೀಪಾವಳಿ ಪಟಾಕಿ ಸಿಡಿಸುವ ಮುನ್ನ ಎಚ್ಚರ: ರಾತ್ರಿ 8ರಿಂದ 10ರವರೆಗೆ ಮಾತ್ರ ಅವಕಾಶ; ಪೊಲೀಸರಿಂದ 19...

ದೀಪಾವಳಿ ಪಟಾಕಿ ಸಿಡಿಸುವ ಮುನ್ನ ಎಚ್ಚರ: ರಾತ್ರಿ 8ರಿಂದ 10ರವರೆಗೆ ಮಾತ್ರ ಅವಕಾಶ; ಪೊಲೀಸರಿಂದ 19 ಮಾರ್ಗಸೂಚಿ ಬಿಡುಗಡೆ

ಬೆಂಗಳೂರು-ದೀಪಾವಳಿ ಹಬ್ಬ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ಪರಿಸರ ಸ್ನೇಹಿ ಹಾಗೂ ಸುರಕ್ಷಿತ ರೀತಿಯಲ್ಲಿ ಹಬ್ಬವನ್ನು ಆಚರಿಸಲು ಅನುಕೂಲವಾಗುವಂತೆ ರಾಜ್ಯ ಪೊಲೀಸ್ ಇಲಾಖೆಯಿಂದ 19 ಅಂಶಗಳ ಮಾರ್ಗದರ್ಶಿ ಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

​ಮಾಲಿನ್ಯ ನಿಯಂತ್ರಣ, ಅಗ್ನಿ ಅವಘಡಗಳ ತಡೆ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ಮಾರ್ಗದರ್ಶನಗಳನ್ನು ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುಪ್ರೀಂ ಕೋರ್ಟ್ ಆದೇಶದಂತೆ, ರಾತ್ರಿ 8.00 ರಿಂದ 10.00 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿರುತ್ತದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

ಆಸ್ಪತ್ರೆಗಳು, ಪೆಟ್ರೋಲ್ ಬಂಕ್‌ಗಳು, ಗ್ಯಾಸ್ ಸ್ಟೇಷನ್‌ಗಳು, ಧಾರ್ಮಿಕ ಕೇಂದ್ರಗಳು, ವೃದ್ಧಾಶ್ರಮಗಳು ಮತ್ತು ಶಿಶುಪಾಲನಾ ಕೇಂದ್ರಗಳ ಸುತ್ತಮುತ್ತ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಸಾರ್ವಜನಿಕರು ಜನನಿಬಿಡ ಪ್ರದೇಶಗಳು, ರಸ್ತೆಗಳು ಹಾಗೂ ನಿಲ್ಲಿಸಿದ ವಾಹನಗಳ ಬಳಿ ಪಟಾಕಿ ಸಿಡಿಸಬಾರದು. ತೆರೆದ ಮೈದಾನಗಳು ಹಾಗೂ ಕಡಿಮೆ ಜನರಿರುವ ಸ್ಥಳಗಳನ್ನು ಬಳಸಬೇಕು.

ಅಧಿಕೃತ ಪರವಾನಗಿ (Licence) ಹೊಂದಿರುವ ಅಂಗಡಿಗಳಿಂದ ಮಾತ್ರ ಗುಣಮಟ್ಟದ ಹಸಿರು ಪಟಾಕಿಗಳನ್ನು (Green Crackers) ಖರೀದಿಸಬೇಕು. ಪಟಾಕಿಯ ಅಸಲೀಯತೆಯನ್ನು ಖಚಿತಪಡಿಸಿಕೊಳ್ಳಲು ಪ್ಯಾಕೇಟ್‌ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಿ ಪರಿಶೀಲಿಸುವುದು ಕಡ್ಡಾಯ.

ಅನಧಿಕೃತ ಅಂಗಡಿಗಳಲ್ಲಿ ಪಟಾಕಿ ಖರೀದಿಸಬಾರದು. ಯಾವುದೇ ರೀತಿಯ ಅಕ್ರಮ ಮಾರಾಟ ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು.

ಅತಿಯಾದ ಶಬ್ದ ಮತ್ತು ವಾಯು ಮಾಲಿನ್ಯ ಉಂಟುಮಾಡುವ ಪಟಾಕಿಗಳನ್ನು ನಿಷೇಧಿಸಲಾಗಿದೆ. ಹಿರಿಯ ನಾಗರಿಕರು, ರೋಗಿಗಳು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಡಿಮೆ ಶಬ್ದದ ಹಸಿರು ಪಟಾಕಿಗಳನ್ನು ಬಳಸುವುದು‌ ಸೂಕ್ತ.

ಪಟಾಕಿ ಸಿಡಿಸುವಾಗ ಸುರಕ್ಷಿತ ಕಣ್ಣಿನ ಕನ್ನಡಕ (goggles) ಹಾಗೂ ಕೈಗವಸುಗಳನ್ನು (gloves) ಧರಿಸುವುದು ಸೂಕ್ತ. ಪಟಾಕಿ ಸಿಡಿಸುವಾಗ ಹತ್ತಿ (Cotton) ಉಡುಪುಗಳನ್ನೇ ಧರಿಸಬೇಕು, ನೈಲಾನ್, ಸಿಂಥೆಟಿಕ್ ಅಥವಾ ಪಾಲಿಯೆಸ್ಟರ್ ಬಟ್ಟೆಗಳನ್ನು ಧರಿಸಬಾರದು.

ಪಟಾಕಿಯನ್ನು ಕೈಯಲ್ಲಿ ಹಿಡಿದುಕೊಂಡು ಸಿಡಿಸುವುದು ತೀವ್ರ ಅಪಾಯಕಾರಿ. ವಿಶೇಷವಾಗಿ ಮುಖ, ಕಣ್ಣು ಹಾಗೂ ಕಿವಿಗಳಿಗೆ ಹಾನಿಯಾಗದಂತೆ ಜಾಗ್ರತೆ ವಹಿಸಬೇಕು.

ಪಟಾಕಿ ಸಿಡಿಸುವ ಸ್ಥಳದಲ್ಲಿ ನೀರು, ಮರಳು, ಅಗ್ನಿಶಾಮಕ ಉಪಕರಣಗಳು ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು (First-aid kit) ಸಿದ್ಧವಾಗಿಟ್ಟುಕೊಳ್ಳಬೇಕು. ಸಣ್ಣ ಮಕ್ಕಳು ಹಿರಿಯರ ಮೇಲ್ವಿಚಾರಣೆಯಿಲ್ಲದೆ ಪಟಾಕಿ ಸಿಡಿಸದಂತೆ ಪೋಷಕರು ಗಮನಹರಿಸಬೇಕು.

ಹಬ್ಬದ ಸಂಭ್ರಮದಲ್ಲಿ ಮೂಕ ಪ್ರಾಣಿಗಳಿಗೆ ತೊಂದರೆ ಅಥವಾ ಹಾನಿ ಉಂಟಾಗದಂತೆ ಜಾಗರೂಕರಾಗಿರಬೇಕು.

ಪಟಾಕಿ ಸಿಡಿಸಿದ ನಂತರ, ಉಳಿದ ಸುಟ್ಟ ಭಾಗಗಳನ್ನು ಬಕೆಟ್‌ನಲ್ಲಿ ಸಂಗ್ರಹಿಸಿ ಮರಳು ಹಾಕಿ ಅಥವಾ ನೀರು ಹೊಯ್ದು ಸಂಪೂರ್ಣವಾಗಿ ಆರಿಸಬೇಕು. ಆಟದ ಮೈದಾನಗಳು, ರಸ್ತೆಗಳು ಮತ್ತು ಮನೆಯ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಬೇಕು.

ಯಾವುದೇ ರೀತಿಯ ಅಗ್ನಿ ಅವಘಡ ಅಥವಾ ತುರ್ತು ಪರಿಸ್ಥಿತಿಯಲ್ಲಿ ತಕ್ಷಣವೇ 112 (ಪೊಲೀಸ್/ಅಗ್ನಿಶಾಮಕ) ಅಥವಾ 108 (ಆಂಬ್ಯುಲೆನ್ಸ್) ಸಂಖ್ಯೆಯನ್ನು ಸಂಪರ್ಕಿಸಿ ವೈದ್ಯಕೀಯ ನೆರವು ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಿದೆ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular