HomeKarnatakaಕನ್ನಡ ಜ್ಞಾನ, ವಿಜ್ಞಾನ ಮತ್ತು ಉದ್ಯೋಗದ ಭಾಷೆಯಾಗಲಿ: ಸಚಿವ ಚಲುವರಾಯಸ್ವಾಮಿ

ಕನ್ನಡ ಜ್ಞಾನ, ವಿಜ್ಞಾನ ಮತ್ತು ಉದ್ಯೋಗದ ಭಾಷೆಯಾಗಲಿ: ಸಚಿವ ಚಲುವರಾಯಸ್ವಾಮಿ

ಮಂಡ್ಯ – ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ ಇಂದಿನ ಆಧುನಿಕ ಯುಗದಲ್ಲಿ ಕನ್ನಡವು ಕೇವಲ ಮನೆಯ ಭಾಷೆಯಾಗಿ ಉಳಿಯದೆ ಜ್ಞಾನ, ವಿಜ್ಞಾನ ಮತ್ತು ಉದ್ಯೋಗದ ಭಾಷೆಯಾಗಿ ಬೆಳೆಯಬೇಕು ಎಂದು ಬೃಹತ್ ಮತ್ತು ಮಧ್ಯಮ ನೀರಾವರಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ತಿಳಿಸಿದರು.

ಮಂಡ್ಯದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.

ರಾಜ್ಯದಲ್ಲಿಯೇ ಅತಿ ಹೆಚ್ಚು ಕನ್ನಡ ಮಾತನಾಡುವ ಜನರಿರುವ ಮಂಡ್ಯ ಜಿಲ್ಲೆಯು ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಸ್ಮರಿಸಿದ ಸಚಿವರು, ನಾಡು, ನುಡಿ, ಜಲ ಮತ್ತು ಸಂಸ್ಕೃತಿಯ ರಕ್ಷಣೆಗೆ ಪ್ರತಿಯೊಬ್ಬರೂ ಕಟಿಬದ್ಧರಾಗಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 30 ಸಾಧಕರಿಗೆ ‘ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಂಡ್ಯ ಜಿಲ್ಲೆಗೆ ₹1,793 ಕೋಟಿ ವೆಚ್ಚದ ಅಭಿವೃದ್ಧಿ ಕೊಡುಗೆ

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಅಕ್ಟೋಬರ್ 31ರಂದು ಮಾನ್ಯ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಜಿಲ್ಲೆಯಾದ್ಯಂತ ಒಟ್ಟು ₹1,793 ಕೋಟಿ ವೆಚ್ಚದ 57 ಪ್ರಮುಖ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಪ್ರಮುಖ ಕಾಮಗಾರಿಗಳ ವಿವರ:

* ನೀರಾವರಿ ಅಭಿವೃದ್ಧಿ: ಕೆ.ಆರ್.ಪೇಟೆ, ನಾಗಮಂಗಲ ಹಾಗೂ ಪಾಂಡವಪುರ ವ್ಯಾಪ್ತಿಯ ಕೆರೆ ತುಂಬಿಸುವ ಯೋಜನೆ, ರಸ್ತೆ ಹಾಗೂ ಕಾಲುವೆ ದುರಸ್ತಿಗಾಗಿ ₹806 ಕೋಟಿ; ಕಾವೇರಿ, ಕೆರಗೋಡು, ಶಿಂಷಾ, ಲೋಕಸರ ಹಾಗೂ ಮದ್ದೂರು ಶಾಖಾ ನಾಲೆಗಳ ಅಭಿವೃದ್ಧಿಗೆ ₹224 ಕೋಟಿ ಅನುದಾನ.

* ಮೈಷುಗರ್ ಆಧುನೀಕರಣ: ಮಂಡ್ಯದ ಐತಿಹಾಸಿಕ ಮೈಷುಗರ್ ಕಾರ್ಖಾನೆಯ ಬಾಯಿಲಿಂಗ್ ಹೌಸ್ ಆಧುನೀಕರಣಕ್ಕೆ ₹60 ಕೋಟಿ.

* ಗುಣಮಟ್ಟದ ವಿದ್ಯುತ್ ಪೂರೈಕೆ: ಹಂಪಾಪುರದಲ್ಲಿ 400 ಕೆ.ವಿ. ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ₹402.92 ಕೋಟಿ ಹಾಗೂ ನಾಗಮಂಗಲದ ಇರುಬ್ಬನಹಳ್ಳಿಯಲ್ಲಿ 66/11 ಕೆ.ವಿ. ಉಪಕೇಂದ್ರ ನಿರ್ಮಾಣಕ್ಕೆ ₹17.91 ಕೋಟಿ.

* ಆರೋಗ್ಯ ಮತ್ತು ಶಿಕ್ಷಣ: ಬಿ. ಹೊಸೂರು ಕಾಲೋನಿಯಲ್ಲಿ 100 ಹಾಸಿಗೆಗಳ ತಾಯಿ-ಮಕ್ಕಳ ಆಸ್ಪತ್ರೆ, ಮಹಾದೇವಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಔಷಧ ಉಗ್ರಾಣ ನಿರ್ಮಾಣ (ಒಟ್ಟು ₹34.23 ಕೋಟಿ); ದುದ್ದ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಹಾಗೂ ಹಲಗೂರಿನಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯ (ಒಟ್ಟು ₹28.50 ಕೋಟಿ) ಉದ್ಘಾಟನೆಗೊಂಡಿವೆ.

* ಕ್ರೀಡೆ ಮತ್ತು ಸಂಸ್ಕೃತಿ: ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಒಳಾಂಗಣ ಬ್ಯಾಸ್ಕೆಟ್‌ಬಾಲ್ ಕೋರ್ಟ್‌ಗೆ ₹3.50 ಕೋಟಿ ಹಾಗೂ ಶ್ರೀರಂಗಪಟ್ಟಣ ಕ್ರೀಡಾಂಗಣಕ್ಕೆ ₹1 ಕೋಟಿ ಮಂಜೂರು ಮಾಡಲಾಗಿದೆ.

ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ

ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಶಯದೊಂದಿಗೆ ಸರ್ಕಾರ ಜಾರಿಗೆ ತಂದಿರುವ ಐದೂ ಗ್ಯಾರಂಟಿ ಯೋಜನೆಗಳು ಮಂಡ್ಯ ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ತಲುಪಿವೆ ಎಂದು ಸಚಿವರು ಅಂಕಿ-ಅಂಶಗಳನ್ನ ಹಂಚಿಕೊಂಡರು

* ಶಕ್ತಿ ಯೋಜನೆ: ಜಿಲ್ಲೆಯಲ್ಲಿ ಮಹಿಳೆಯರು 25.55 ಕೋಟಿ ಉಚಿತ ಪ್ರಯಾಣದ ಟಿಕೆಟ್ ಪಡೆದಿದ್ದು, ಸರ್ಕಾರ ₹691 ಕೋಟಿ ವೆಚ್ಚ ಭರಿಸಿದೆ.

* ಗೃಹಲಕ್ಷ್ಮಿ: ಕುಟುಂಬದ ಯಜಮಾನಿ ಮಹಿಳೆಯರ ಖಾತೆಗೆ ಈವರೆಗೆ ಒಟ್ಟು ₹1,762 ಕೋಟಿ ನೆರವು ನೇರವಾಗಿ ಜಮೆಯಾಗಿದೆ.

* ಗೃಹಜ್ಯೋತಿ: ಜಿಲ್ಲೆಯ 5,05,893 ಕುಟುಂಬಗಳು ಉಚಿತ ವಿದ್ಯುತ್ ಸೌಲಭ್ಯ ಪಡೆದಿದ್ದು, ಸರ್ಕಾರದಿಂದ ₹700 ಕೋಟಿ ಸಬ್ಸಿಡಿ ಭರಿಸಲಾಗಿದೆ.

* ಅನ್ನಭಾಗ್ಯ: ಜಿಲ್ಲೆಯ 4,59,694 ಪಡಿತರ ಚೀಟಿದಾರರಿಗೆ ಉಚಿತ ಆಹಾರಧಾನ್ಯ ಒದಗಿಸಲಾಗುತ್ತಿದೆ.

* ಯುವನಿಧಿ: 9,645 ಅರ್ಹ ನಿರುದ್ಯೋಗಿ ಯುವಜನರಿಗೆ ₹3.32 ಕೋಟಿ ಭತ್ಯೆ ವಿತರಿಸಲಾಗಿದೆ.

ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ರಾಜ್ಯಕ್ಕೆ ಪ್ರಥಮ

* ಕಂದಾಯ ಸುಧಾರಣೆ: ಕಳೆದ ಮೂರೂವರೆ ವರ್ಷಗಳಲ್ಲಿ 27 ಸಾವಿರ ಕಂದಾಯ ವ್ಯಾಜ್ಯಗಳನ್ನ ಇತ್ಯರ್ಥಪಡಿಸುವ ಮೂಲಕ ಹಾಗೂ 1.72 ಲಕ್ಷ ಪೌತಿ ಖಾತೆಗಳನ್ನ ಮಾಡುವ ಮೂಲಕ ಮಂಡ್ಯ ಜಿಲ್ಲೆಯು ಇಡೀ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ಜೊತೆಗೆ 18 ಲಕ್ಷ ಪಹಣಿಗಳಿಗೆ ಆಧಾರ್ ಜೋಡಣೆ ಹಾಗೂ 3.80 ಕೋಟಿ ಪುಟಗಳ ದಾಖಲೆಗಳ ಗಣಕೀಕರಣ ಪೂರ್ಣಗೊಂಡಿದೆ.

* ವಸತಿ ರಹಿತರಿಗೆ ನಿವೇಶನ: ‘ಮುಖ್ಯಮಂತ್ರಿಗಳ ಗ್ರಾಮ ನಿವಾಸ’ ಯೋಜನೆಯಡಿ 450 ಎಕರೆ ಜಮೀನು ಗುರುತಿಸಲಾಗಿದ್ದು, 15 ಸಾವಿರ ಕುಟುಂಬಗಳಿಗೆ ನಿವೇಶನ ವಿತರಿಸಲಾಗುವುದು.

* ಮಹಿಳಾ ಸಬಲೀಕರಣ: ಮೈಸೂರು ದಸರಾ ಜಂಬೂಸವಾರಿಯಲ್ಲಿ ಪ್ರದರ್ಶಿತವಾದ ಜಿಲ್ಲಾ ಪಂಚಾಯಿತಿಯ ‘ಸ್ತ್ರೀ ಶಕ್ತಿ ಅನಾವರಣ’ ಸ್ತಬ್ದಚಿತ್ರವು ಪ್ರಥಮ ಬಹುಮಾನ ಗಳಿಸಿದೆ. ಜಿಲ್ಲೆಯಲ್ಲಿ ಪಾಂಡವಪುರ ಮತ್ತು ಶ್ರೀರಂಗಪಟ್ಟಣದಲ್ಲಿ ಯಶಸ್ವಿಯಾಗಿರುವ ಮಹಿಳೆಯರೇ ನಿರ್ವಹಿಸುವ ‘ಅಕ್ಕ ಕೆಫೆ’ಯನ್ನು ಇತರ ತಾಲ್ಲೂಕುಗಳಿಗೂ ವಿಸ್ತರಿಸಲಾಗುವುದು.

* ಆರೋಗ್ಯ ನಾವೀನ್ಯತೆ: ರಾಜ್ಯದಲ್ಲೇ ಮೊದಲ ಬಾರಿಗೆ ಗ್ರಾಮೀಣ ಜನರಿಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತ ದಂತ ಚಿಕಿತ್ಸೆ ನೀಡುವ “ಮುಗುಳ್ನಗೆ ಸಿಂಚನ” ಕಾರ್ಯಕ್ರಮವನ್ನ ಮಂಡ್ಯ ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ.

ಕಾರ್ಯಕ್ರಮದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಪಿ ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಎಲ್ಲಾ ಶಿಕ್ಷಕರು ಕಾರ್ಯನಿರ್ವಾಹಣಾಧಿಕಾರಿ ಡಾ. ಕೆ ಆರ್ ನಂದಿನಿ, ಪೋಲಿಸ್ ವರಿಷ್ಠಾಧಿಕಾರಿ ಶೋಭರಾಣಿ, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular