HomeKarnatakaಕಾಲ ಉತ್ತರಿಸುತ್ತದೆ ಎನ್ನುವುದು ತನಿಖೆಗೆ ಪರ್ಯಾಯವಲ್ಲ ಎಂದ ಹೆಚ್.ಡಿ.ಕುಮಾರಸ್ವಾಮಿ

ಕಾಲ ಉತ್ತರಿಸುತ್ತದೆ ಎನ್ನುವುದು ತನಿಖೆಗೆ ಪರ್ಯಾಯವಲ್ಲ ಎಂದ ಹೆಚ್.ಡಿ.ಕುಮಾರಸ್ವಾಮಿ

ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಸ್ಟಿಂಗ್ ಆಪರೇಷನ್ ನಡೆಸಲಾಗಿದೆ ಎಂಬ ಆರೋಪದ ಸತ್ಯಾಸತ್ಯತೆ ಹೊರಬರಲು ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.

ಇದರ ಹಿಂದೆ ಯಾರಿದ್ದಾರೆ, ಯಾರು ಈ ಕಾರ್ಯಾಚರಣೆ ನಡೆಸಿದ್ದಾರೆ ಎಂಬುದನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ತನಿಖೆ ನಡೆಸದೆ ‘ಕಾಲವೇ ಉತ್ತರಿಸುತ್ತದೆ’ ಎಂದು ಹೇಳುವುದು ಸರಿಯಲ್ಲ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಅವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆದಿರುವ ವಿಚಾರವನ್ನು ಲಘುವಾಗಿ ಪರಿಗಣಿಸಬಾರದು. ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ, ಯಾರಿಗೆ ಯಾವ ಪಾತ್ರವಿದೆ, ಸರ್ಕಾರ ಇದುವರೆಗೆ ಏನು ಕ್ರಮ ಕೈಗೊಂಡಿದೆ ಎಂಬುದಕ್ಕೆ ಉತ್ತರ ನೀಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿದ್ದರಾಮಯ್ಯನವರೇ ಈ ಪ್ರಕರಣದ ತನಿಖೆ ನಡೆಯಬೇಕು ಮತ್ತು ಸತ್ಯ ಹೊರಬರಬೇಕು ಎಂದು ಹೇಳಿದ್ದಾರೆ; ಹಾಗಿದ್ದರೂ ಸರ್ಕಾರ ತನಿಖೆಗೆ ಮುಂದಾಗದಿರುವುದೇಕೆ ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ನಾನು ಸಿದ್ದರಾಮಯ್ಯ ಅವರ ವಿರುದ್ಧ ರಾಜಕೀಯವಾಗಿ ಹೋರಾಟ ಮಾಡಿದ್ದೇನೆ. ನಮ್ಮ ಪಕ್ಷ ಬಿಟ್ಟ ನಂತರವೂ ಹಲವು ವಿಷಯಗಳಲ್ಲಿ ಅವರ ವಿರುದ್ಧ ಮಾತನಾಡಿದ್ದೇನೆ. ಆದರೆ ಮಾಜಿ ಮುಖ್ಯಮಂತ್ರಿ ಅವರ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಇಂತಹ ಕಾರ್ಯಾಚರಣೆ ನಡೆದಿದ್ದರೆ ಅದರ ಬಗ್ಗೆ ಮೌನವಾಗಿರಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಇದು ಅನುಕಂಪಕ್ಕಾಗಿ ಮಾಡುತ್ತಿರುವ ಆಗ್ರಹವಲ್ಲ; ತಪ್ಪು ಮಾಡಿದವರು ಯಾರು ಎಂಬುದು ತಿಳಿದು ಅವರ ವಿರುದ್ಧ ಕ್ರಮವಾಗಬೇಕು ಎಂಬುದು ತಮ್ಮ ನಿಲುವು ಎಂದು ಅವರು ಹೇಳಿದರು.

ಸಚಿವ ಸಂಪುಟದ ಮಾಹಿತಿ ಸೋರಿಕೆ ಬಗ್ಗೆ ಪ್ರಶ್ನೆ

*ಸಚಿವ ಸಂಪುಟದ ಕಡತ ಮತ್ತು ಮಾಹಿತಿ ಸೋರಿಕೆ ಬಗ್ಗೆ ಪ್ರಶ್ನೆ:*

ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದ ಕಡತವನ್ನು ಮುಖ್ಯಮಂತ್ರಿ ಸಚಿವ ಸಂಪುಟದ ಸಭೆಗೆ ತೆಗೆದುಕೊಂಡು ಹೋಗಿರುವುದನ್ನು ಮಾಧ್ಯಮದವರು ತೋರಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಸಂಪುಟದಲ್ಲಿ ನಡೆದ ಚರ್ಚೆಗಳು ಸಾಮಾನ್ಯವಾಗಿ ಹೊರಗೆ ಸೋರಿಕೆಯಾಗುವುದಿಲ್ಲ; ಕೇಂದ್ರದಲ್ಲಿಯೂ ಸಚಿವರಿಗೆ ವಿವಿಧ ವಿಷಯಗಳ ಬಗ್ಗೆ ಸಲಹೆ ಮತ್ತು ಚರ್ಚೆ ನಡೆಯುತ್ತದೆ, ಆದರೆ ಅವು ಹೊರಗೆ ಬರುವುದಿಲ್ಲ ಎಂದು ಹೋಲಿಕೆ ಮಾಡಿದರು.

ರಾಜ್ಯದಲ್ಲಿ ಮಾತ್ರ ಈ ವಿಷಯದ ಚರ್ಚೆ ಹೊರಗೆ ಬಂದಿರುವುದೇಕೆ, ಮಾಹಿತಿ ಸೋರಿಕೆ ಮಾಡಿದವರು ಯಾರು ಎಂಬುದನ್ನು ತನಿಖೆ ನಡೆಸುವುದರ ಮೂಲಕ ಪತ್ತೆಹಚ್ಚಬೇಕು ಎಂದು ಆಗ್ರಹಿಸಿದರು.

ಸ್ಟಿಂಗ್ ಆಪರೇಷನ್ ಕುರಿತು ತನಿಖೆ ನಡೆಸುವ ಕಡತವನ್ನು ಮುಖ್ಯಮಂತ್ರಿ ಸಂಪುಟಕ್ಕೆ ತೆಗೆದುಕೊಂಡು ಹೋಗಿದ್ದರೆ, ಪ್ರಕರಣದ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇತ್ತು ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಅವರು ಹೇಳಿದರು. ಒಂದು ಕಡೆ ಕಡತವನ್ನು ಸಂಪುಟಕ್ಕೆ ತೆಗೆದುಕೊಂಡು ಹೋಗಿ ಚರ್ಚಿಸಿ, ಮತ್ತೊಂದು ಕಡೆ ತನಿಖೆಗೆ ಅವಕಾಶ ನೀಡದಿರುವುದೇಕೆ ಎಂದು ಪ್ರಶ್ನಿಸಿದರು. ಈ ವಿಷಯವನ್ನು ರಾಜಕೀಯವಾಗಿ ಪ್ರಚಾರ ಮಾಡುವುದಕ್ಕಿಂತ ತನಿಖೆ ನಡೆಸಿ ಸತ್ಯವನ್ನು ಜನರ ಮುಂದೆ ಇಡಬೇಕು ಎಂದು ಹೇಳಿದರು.

ತಮ್ಮ ಬಳಿ ಇರುವ ಪೆನ್‌ಡ್ರೈವ್ ಅಸಲಿಯದ್ದು ಮತ್ತು ಅದನ್ನು ಇತರರು ನಕಲಿ ಮಾಡುತ್ತಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದರು. ಸ್ಟಿಂಗ್ ಆಪರೇಷನ್ ನಡೆದಿರುವುದು ನಿಜವೇ ಆಗಿದ್ದರೆ ಅದರಲ್ಲಿರುವವರನ್ನು ಗುರುತಿಸಿ ತನಿಖೆ ನಡೆಸಬೇಕು; ಉತ್ತರ ಪ್ರದೇಶದಿಂದ ಬಂದವರು, ಕೇಂದ್ರ ಸಚಿವರು ಅಥವಾ ಬಿಜೆಪಿಯ ನಾಯಕರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಮಾತುಗಳಿದ್ದರೆ ಅವುಗಳನ್ನೂ ತನಿಖೆಯಿಂದ ಪರಿಶೀಲಿಸಬೇಕು ಎಂದು ಹೇಳಿದರು. ಸ್ಟಿಂಗ್‌ಗೆ ಸಂಬಂಧಿಸಿದ ವ್ಯಕ್ತಿಗೆ ಪೊಲೀಸ್ ರಕ್ಷಣೆ ಮತ್ತು ತುಕಡಿಗಳನ್ನು ಒದಗಿಸಿರುವುದೇಕೆ ಎಂಬುದನ್ನೂ ಪ್ರಶ್ನಿಸಿದರು.

ಎಸ್‌ಐಆರ್‌ ಸುಪರಿರೀಕ್ಷಣೆ

*ಎಸ್‌ಐಆರ್‌ ಮತ್ತು ಫಲಾನುಭವಿಗಳ ಪರಿಶೀಲನೆ ಬಗ್ಗೆ ಕಾಂಗ್ರೆಸ್‌ಗೆ ಪ್ರಶ್ನೆ:*

ಮತದಾರರ ಪಟ್ಟಿಗೆ ಸಂಬಂಧಿಸಿದ ಎಸ್‌ಐಆರ್‌ ಪ್ರಕ್ರಿಯೆ ಹೊಸದಲ್ಲ; ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ಕುಮಾರಸ್ವಾಮಿ ಹೇಳಿದರು.

ಮತದಾರರ ಹೆಸರುಗಳನ್ನು ಕಡಿತಗೊಳಿಸಲಾಗುತ್ತಿದೆ, ಕೆಲವು ಸಮುದಾಯಗಳ ಮತದಾರರ ಸಂಖ್ಯೆ ಉದ್ದೇಶಪೂರ್ವಕವಾಗಿ ಇಳಿಸಲಾಗುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಮತದಾನದ ಹಕ್ಕು ಮಹತ್ವದ್ದೆಂಬುದನ್ನು ಒಪ್ಪಿಕೊಂಡರೂ, ಈ ವಿಚಾರವನ್ನು ರಾಜಕೀಯವಾಗಿ ಬಳಸುವ ಮೊದಲು ರಾಜ್ಯದ ಜನರ ಬದುಕು ಮತ್ತು ಸರ್ಕಾರದ ಯೋಜನೆಗಳ ಅನುಷ್ಠಾನದ ಬಗ್ಗೆಯೂ ಮಾತನಾಡಬೇಕು ಎಂದು ಅವರು ಹೇಳಿದರು.

ಕಾಂಗ್ರೆಸ್ ನಾಯಕರು ಸಂವಿಧಾನದ ಬಗ್ಗೆ ಮಾತನಾಡುವಾಗ ಸಂವಿಧಾನಾತ್ಮಕ ಸಂಸ್ಥೆಗಳ ಶಿಷ್ಟಾಚಾರವನ್ನೂ ಗೌರವಿಸಬೇಕು ಎಂದು ಹೇಳಿದ ಅವರು, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಬಳಿ ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸಲು ಸಮಯ ಕೇಳಿರುವ ಕ್ರಮದ ಉದ್ದೇಶವೇನು ಎಂದು ಪ್ರಶ್ನಿಸಿದರು. ಯಾವ ವಿಷಯ ಚರ್ಚಿಸಲು ಸಮಯ ಕೋರಲಾಗಿದೆ, ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿರುವ ಶಿಷ್ಟಾಚಾರವನ್ನು ಹೇಗೆ ಪಾಲಿಸಬೇಕು ಎಂಬ ಕನಿಷ್ಠ ಅರಿವು ಇರಬೇಕು ಎಂದು ಟೀಕಿಸಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ನಿಜವಾದ ಫಲಾನುಭವಿಗಳಿಗೆ ಹಣ ತಲುಪುವಲ್ಲಿ ಲೋಪಗಳಿವೆ ಹಾಗೂ ಅರ್ಹರಲ್ಲದವರೂ ಹಣ ಪಡೆಯುತ್ತಿದ್ದಾರೆ ಎಂಬ ಕಾರಣಕ್ಕೆ ಸಮೀಕ್ಷೆ ಮತ್ತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು. ಗೃಹಲಕ್ಷ್ಮಿ ಯೋಜನೆ, ವಿಧವಾ ವೇತನ, ಅಂಗವಿಕಲರ ವೇತನ ಮತ್ತು ವೃದ್ಧಾಪ್ಯ ವೇತನಗಳ ಫಲಾನುಭವಿಗಳ ಸಂಖ್ಯೆಯಲ್ಲಿ 16ರಿಂದ 20 ಲಕ್ಷದಷ್ಟು ಕಡಿತ ಮಾಡಿರುವುದೇಕೆ, ಯಾವ ಆಧಾರದ ಮೇಲೆ ಕಡಿತ ಮಾಡಲಾಗಿದೆ ಎಂಬುದಕ್ಕೆ ಸರ್ಕಾರ ಉತ್ತರಿಸಬೇಕು ಎಂದು ಕೇಳಿದರು.

79 ಮಂದಿ ಮೃತಪಟ್ಟವರ ಖಾತೆಗಳಿಗೆ ₹79 ಕೋಟಿ ಹಣ ಜಮೆಯಾಗಿದ್ದು, ಅದನ್ನು ವಾಪಸು ಪಡೆಯಲಾಗುತ್ತಿದೆ ಎಂಬ ಹೇಳಿಕೆಯನ್ನು ಉಲ್ಲೇಖಿಸಿದ ಕುಮಾರಸ್ವಾಮಿ, ಅನರ್ಹರು ಅಥವಾ ಮೃತರ ಹೆಸರಿನಲ್ಲಿ ಹಣ ಪಡೆಯುವುದನ್ನು ತಡೆಯಲು ಫಲಾನುಭವಿಗಳ ಪರಿಶೀಲನೆ ಅಗತ್ಯವೆಂದರು. ಇದೇ ರೀತಿಯ ಪರಿಶೀಲನಾ ಕ್ರಮವನ್ನು ಎಸ್‌ಐಆರ್‌ ವಿಚಾರದಲ್ಲಿ ಮಾತ್ರ ರಾಜಕೀಯ ವಿವಾದವನ್ನಾಗಿ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಮೈಸೂರು ಅರಮನೆಯ ಫೋಟೋಶೂಟ್‌ ಬಗ್ಗೆ ಟೀಕೆ

*ಮೈಸೂರು ಅರಮನೆಯ ಫೋಟೋಶೂಟ್‌ ಬಗ್ಗೆ ಟೀಕೆ:*

ಸ್ಟಿಂಗ್ ಪ್ರಕರಣದ ಬಗ್ಗೆ ಉತ್ತರ ನೀಡುವುದರ ಬದಲು ಮುಖ್ಯಮಂತ್ರಿ ಮೈಸೂರು ಅರಮನೆಯಲ್ಲಿ ಫೋಟೋಶೂಟ್‌ ಮಾಡಿಸಿಕೊಳ್ಳುತ್ತಾ ಸಮಯ ಕಳೆಯುತ್ತಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದರು. ಸಿಂಹಾಸನದ ಮುಂದೆ ಕುಳಿತು ಚಿತ್ರ ತೆಗೆಸಿಕೊಂಡಿರುವುದನ್ನು ಉಲ್ಲೇಖಿಸಿ, ಇದನ್ನು ಹೊಸ ಸಂಸ್ಕೃತಿಯಂತೆ ಪ್ರದರ್ಶಿಸಲಾಗುತ್ತಿದೆ ಎಂದು ವ್ಯಂಗ್ಯವಾಡಿದರು. “ಅತಿವಿನಯಂ ದುರ್ಲಕ್ಷಣಂ” ಎಂಬ ಮಾತನ್ನೂ ಅವರು ನೆನಪಿಸಿದರು.

ಮಾಜಿ ಮುಖ್ಯಮಂತ್ರಿ ವಿರುದ್ಧದ ಸ್ಟಿಂಗ್ ಆರೋಪ

*ಮಾಜಿ ಮುಖ್ಯಮಂತ್ರಿ ವಿರುದ್ಧದ ಸ್ಟಿಂಗ್ ಆರೋಪವನ್ನು ಲಘುವಾಗಿ ಪರಿಗಣಿಸಬೇಡಿ:*

ರಾಜ್ಯದಲ್ಲಿ ಇಂತಹ ಘಟನೆಗಳು ಮುಂದುವರಿದರೆ ಸಾಮಾನ್ಯ ಜನರು ಬದುಕುವುದು ಹೇಗೆ ಎಂಬುದು ತಮ್ಮ ಕಳವಳ ಎಂದು ಕುಮಾರಸ್ವಾಮಿ ಹೇಳಿದರು. ಸ್ಟಿಂಗ್ ಆರೋಪದ ಸತ್ಯಾಸತ್ಯತೆ ಹೊರತಂದು, ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ತನಿಖೆಯಿಂದ ನಿರ್ಧರಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಪುನರುಚ್ಚರಿಸಿದರು.

*ಮುಖ್ಯ ನ್ಯಾಯಾಧೀಶರನ್ನು ರಾಜಕೀಯಕ್ಕೆ ಎಳೆಯುವುದು ತಪ್ಪು:*

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನು ರಾಜಕೀಯಕ್ಕೆ ಎಳೆಯುವುದು ತಪ್ಪು. ರಾಹುಲ್ ಗಾಂಧಿ ಪ್ರಬುದ್ಧತೆಯ ರಾಜಕಾರಣ ಮಾಡಬೇಕು. ಸುಪ್ರೀಂ ಕೋರ್ಟ್ ವರೆಗೂ ಪಡೆದುಕೊಂಡು ಹೋಗಿ ನಿಮ್ಮನ್ನು ಭೇಟಿಯಾಗುತ್ತೇನೆ ನ್ಯಾಯಮೂರ್ತಿಗಳು ಭೇಟಿಯಾಗಲು ಹೇಗೆ ಸಾಧ್ಯ? ರಾಹುಲ್ ಗಾಂಧಿಗೆ ಸಾಂವಿಧಾನಿಕ ಸಂಸ್ಥೆಗಳು ಮತ್ತು ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿರುವ ವ್ಯಕ್ತಿಗಳ ಬಗ್ಗೆ ಗೌರವ ಇಲ್ಲ ಎಂದು ಕೇಂದ್ರ ಸಚಿವರು ಕಟುವಾಗಿ ಟೀಕಿಸಿದರು.

.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular