ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿಗಳ ಹುದ್ದೆ ನೇಮಕಾತಿ ಅಕ್ರಮದ ಕಿಂಗ್‌ಪಿನ್ ಬಸವರಾಜ್ ಕನ್ನಾಳೆಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಮಗುವಿನ ನಾಮಕರಣ ಹಿನ್ನೆಲೆಯಲ್ಲಿ ಐದು ದಿನಗಳ ವರೆಗೆ ಜಾಮೀನು ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ಮಗುವಿನ ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಸವರಾಜ್ ಕನ್ನಾಳೆಗೆ ಅಕ್ಟೋಬರ್ 15 ರಿಂದ 20 ರವರೆಗೆ ಬೀದರ್‌ಗೆ ತೆರಳಲು ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.
ಬಸವರಾಜ್ ಕನ್ನಾಳೆ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದು, ಕನ್ನಾಳೆ ಪತ್ನಿ ಮಗುವಿಗೆ ಜನ್ಮ ನೀಡಿದ್ದಾರೆ. 12 ದಿನದ ಮಗುವಿಗೆ ನಾಮಕರಣ ಶಾಸ್ತ್ರ ಮಾಡಬೇಕಿದೆ. ಹೀಗಾಗಿ ಮಾನವೀಯತೆ ಮೇಲೆ ಒಂದು ವಾರದ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಇತ್ತ ಸರ್ಕಾರದ ಪರ ಎಸ್‌ಪಿಪಿ ಬಿ.ಎನ್.ಜಗದೀಶ್ ಪ್ರತಿವಾದ ಮಂಡಿಸಿದ್ದು, ಕನ್ನಾಳೆ ಹಲವು ಅಭ್ಯರ್ಥಿಗಳಿಂದ ಹಣ ಸಂಗ್ರಹಿಸಿದ್ದಾನೆ. ಸಿಐಡಿ ಕಸ್ಟಡಿಯಲ್ಲಿಯೇ ಬೀದರ್‌ಗೆ ತೆರಳಲು ಷರತ್ತು ವಿಧಿಸಬೇಕು ಎಂದಿದ್ದಾರೆ.
ಈ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಹೈಕೋರ್ಟ್ ಪೀಠ, ಅ.15ರಿಂದ ಅ.20ರವರೆಗೆ ಬಸವರಾಜ ಕನ್ನಾಳೆಗೆ ಷರತ್ತಿನ ಅನ್ವಯ ಮಧ್ಯಂತರ ಜಾಮೀನು ನೀಡಿದ್ದು, ಪೊಲೀಸರೇ ಎಸ್ಕಾರ್ಟ್‌ನಲ್ಲಿ ಕರೆದೊಯ್ದು ಕರೆತರಲು ಸೂಚನೆ ನೀಡಿದೆ.
2024ರಲ್ಲಿ ಪಶು ವೈದ್ಯಾಧಿಕಾರಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಅಭ್ಯರ್ಥಿಗಳೊಂದಿಗೆ ಡೀಲ್ ಕುದುರಿಸುವಲ್ಲಿ ಕನ್ನಾಳೆ ಯಶಸ್ವಿಯಾಗಿದ್ದ. ಪ್ರತಿ ಹುದ್ದೆಯನ್ನು ಸುಮಾರು 80 ಲಕ್ಷ ರೂ.ಗಳಿಗೆ ಮಾರಾಟ ಮಾಡುವ ಯೋಜನೆ ರೂಪಿಸಿದ್ದ. ಈ ಪೈಕಿ ಸುಮಾರು 15ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಮುಂಗಡವಾಗಿ 1.50 ಕೋಟಿ ರೂ. ಸಂಗ್ರಹಿಸಲಾಗಿತ್ತು. ಇದೇ ಮೊತ್ತದಲ್ಲಿ ಕನ್ನಾಳೆಯು ಐಎ ಎಸ್ ಅಧಿಕಾರಿ ಜ್ಞಾನೇಶ್ ಕುಮಾರ್ ಗಂಗ್ವಾರ್‌ಗೆ 1.30 ಕೋಟಿ ರೂ. ನಗದು ತಲುಪಿಸಿದ್ದ. ಈ ಹಣದ ಪೈಕಿ ಓಂ ಶ್ರೀ ಲಕ್ಷ್ಮೀ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್‌ಗೆ 80 ಲಕ್ಷ ರೂ. ಜಮೆ ಆಗಿತ್ತು. ಅಷ್ಟೇ ಅಲ್ಲದೆ, ಐಎಎಸ್ ಅಧಿಕಾರಿ ಗಂಗ್ವಾರ್ ಸಂಬಂಧಿಕರಿಗೂ ಅಕ್ರಮ ಹಣ ತಲುಪಿದೆ. ಪ್ರಮುಖವಾಗಿ ಗಂಗ್ವಾರ್ ಸಹೋದರನ ಖಾತೆಗೆ 10.94 ಲಕ್ಷ ರೂ. ಹಾಗೂ ಅತ್ತಿಗೆಯ ಖಾತೆಗೆ 15.39 ಲಕ್ಷ ರೂ. ಜಮೆ ಮಾಡಲಾಗಿತ್ತು ಎಂದು ಇಡಿ ತನಿಖಾ ಮೂಲಗಳು ತಿಳಿಸಿವೆ.
ಇನ್ನು ಈ ಬಗ್ಗೆ ಇಡಿ ಅಧಿಕಾರಿಗಳ ತನಿಖೆ ಮುಂದುವರೆದಿದೆ. ಈ ನಡುವೆ ಕೆಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಗೀತಾಳನ್ನು ಸಹ ಇಡಿ ಅಧಿಕಾರಿಗಳು ಬಂಧಿಸಿ ತನಿಖೆ ನಡೆಸಿದ್ದಾರೆ.

