HomeKarnatakaಉದ್ಯೋಗಖಾತ್ರಿ ಹಣ ಪಾವತಿ ವಿಳಂಬ ಕ್ರಮಕ್ಕೆ ಖಂಡ್ರೆ ಸೂಚನೆ 308 ಪಿಡಿಓ, 74 ಇಓ,...

ಉದ್ಯೋಗಖಾತ್ರಿ ಹಣ ಪಾವತಿ ವಿಳಂಬ ಕ್ರಮಕ್ಕೆ ಖಂಡ್ರೆ ಸೂಚನೆ 308 ಪಿಡಿಓ, 74 ಇಓ, 12 ಡಿ.ಎಸ್.ಗಳಿಗೆ ಕಾರಣ ಕೇಳಿ ನೋಟಿಸ್

ಬೆಂಗಳೂರು-ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ -ವಿಬಿಜಿ ರಾಮ್ ಜಿಯಡಿ ಕಾರ್ಮಿಕರಿಗೆ ಕೂಲಿ ಹಣ ಪಾವತಿಸುವಲ್ಲಿ ವಿಳಂಬ ಹಾಗೂ ನಿರ್ಲಕ್ಷ್ಯ ತೋರಿದ 308 ಪಿಡಿಓ, 12 ಉಪ ಕಾರ್ಯದರ್ಶಿ ಮತ್ತು 74 ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ಇಲಾಖೆಯ ಕಾರ್ಯದರ್ಶಿ ಮತ್ತು 12 ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಈ ಸಂಬಂಧ ಲಿಖಿತ ಸೂಚನೆ ನೀಡಿರುವ ಸಚಿವರು, ವಿಬಿಜಿ ರಾಮ್ ಜಿ ಅಡಿ ಕೆಲಸ ಮಾಡುವ ಫಲಾನುಭವಿಗಳಿಗೆ 15 ದಿನಗಳ ಒಳಗಾಗಿ ಕೂಲಿ ಹಣ ಪಾವತಿ ಮಾಡದಿದ್ದರೆ ಸಂಬಂಧಿತ ಪಿಡಿಓಗಳನ್ನೇ ಹೊಣೆ ಮಾಡಲಾಗುವುದು ಎಂಬ ಸ್ಪಷ್ಟ ಸೂಚನೆ ನೀಡಿದ್ದರೂ 12 ಜಿಲ್ಲೆಗಳ 311 ಗ್ರಾಮ ಪಂಚಾಯತಿಗಳಲ್ಲಿ ವಿಳಂಬ ಆಗಿರುವ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯತಿಗಳಿಗೆ ವಿಬಿಜಿ ರಾಮ್ ಜಿ ಕೂಲಿ ಹಣ ಬಿಡುಗಡೆ ಆಗಿದ್ದರೂ ಕೆಲಸ ಮಾಡಿದ ಅಕುಶಲ ಕಾರ್ಮಿಕರಿಗೆ ಕೂಲಿ ಹಣ ಪಾವತಿಸದಿರುವುದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸಚಿವರು, ಅಧಿಕಾರಿಗಳ ಇಂತಹ ನಿರ್ಲಕ್ಷ್ಯದಿಂದಾಗಿ, ಬರ ಪರಿಸ್ಥಿತಿಯಲ್ಲೂ ಜನ ವಿಬಿಜಿ ರಾಮ್ ಜಿ ಕೆಲಸಕ್ಕೆ ಬರಲು ಹಿಂದೇಟು ಹಾಕಿ, ಗುಳೆ ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಳಂಬ

ಬಾಗಲಕೋಟೆ ಜಿಲ್ಲೆಯಲ್ಲಿ 23, ಬೆಳಗಾವಿಯಲ್ಲಿ 52, ಚಾಮರಾಜನಗರದಲ್ಲಿ 13, ಚಿಕ್ಕಮಗಳೂರು ಜಿಲ್ಲೆಯಲ್ಲಿ 14, ದಕ್ಷಿಣ ಕನ್ನಡದಲ್ಲಿ 15, ಹಾಸನ ಜಿಲ್ಲೆಯಲ್ಲಿ 47, ಕೊಡಗು ಜಿಲ್ಲೆ 25, ಮಂಡ್ಯ ಜಿಲ್ಲೆ 13, ಮೈಸೂರು ಜಿಲ್ಲೆಯಲ್ಲಿ 53, ಶಿವಮೊಗ್ಗ ಜಿಲ್ಲೆ 14, ಉಡುಪಿ ಜಿಲ್ಲೆಯಲ್ಲಿ 23, ವಿಜಯಪುರ ಜಿಲ್ಲೆಯಲ್ಲಿ 16 ಸೇರಿ ಒಟ್ಟು 311 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೆಲಸ ಮಾಡಿದ ಅಕುಶಲ ಕಾರ್ಮಿಕರಿಗೆ ಕೂಲಿ ಹಣ ಪಾವತಿ ಮಾಡುವಲ್ಲಿ ವಿಳಂಬ ಆಗಿರುವ ಹಿನ್ನೆಲೆಯಲ್ಲಿ ಈ ಎಲ್ಲ ಗ್ರಾ.ಪಂ.ಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಮೇಲ್ವಿಚಾರಣೆ ಮಾಡಬೇಕಾದ ಜವಾಬ್ದಾರಿ ಹೊತ್ತ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ಹಾಗೂ 12 ಜಿಲ್ಲಾ ಪಂಚಾಯತಿಗಳ ಉಪ ಕಾರ್ಯದರ್ಶಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ, ಸಮಜಾಯಿಷಿ ಪಡೆಯುವಂತೆ ಸೂಚಿಸಿದ್ದಾರೆ.

ಇನ್ನು ಮುಂದೆ ಈ ರೀತಿ ಯಾವುದೇ ಪಂಚಾಯತಿಯಲ್ಲಿ ಕೂಲಿ ಹಣ ಪಾವತಿಯಲ್ಲಿ ವಿಳಂಬ ಆಗದಂತೆ ಕ್ರಮ ವಹಿಸಲು ಇಲಾಖೆಯ ಕಾರ್ಯದರ್ಶಿ ಮತ್ತು 12 ಜಿಲ್ಲೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಈಶ್ವರ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಯೋಜನೆಯ ಉದ್ದೇಶ ಮತ್ತು ಸಮಸ್ಯೆಗಳು

ಕೇಂದ್ರ ಸರ್ಕಾರ ಮನ್ರೇಗಾದಲ್ಲಿದ್ದ 90:10ರ ಅನುಪಾತವನ್ನು ವಿಬಿಜಿ ರಾಮ್ ಜಿಯಲ್ಲಿ 60:40ಕ್ಕೆ ಬದಲಾಯಿಸಿದ ಪರಿಣಾಮ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾದರೂ, ಗ್ರಾಮೀಣ ಬಡವರು, ಹಿಂದುಳಿದವರು, ಪರಿಶಿಷ್ಟ ಜಾತಿ ಪಂಗಡದ ಬಡವರು, ಭೂರಹಿತ ಕೂಲಿ ಕಾರ್ಮಿಕರಿಗೆ ತೊಂದರೆಯಾಗಿ ಅವರು ಗುಳೆ ಹೋಗಬಾರದು ಹಾಗೂ ಗ್ರಾಮೀಣ ಬಡವರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಜುಲೈ 1ರಿಂದ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ವಿಳಂಬ ಧೋರಣೆಯಿಂದ ಯೋಜನೆಯ ಉದ್ದೇಶವೇ ನಾಶವಾಗುತ್ತದೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular