ತಿರುವನಂತಪುರಂ: ಎಸ್ಐಆರ್ ಅಕ್ರಮ ಖಂಡಿಸಿ ಹಾಗೂ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಕೇರಂಅ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.
ಮತದಾರರ ಪಟ್ಟಿಯ ಅಕ್ರಮಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಹಾಅಗೂ ಸಿಇಸಿ ಜ್ಞಾಅನೇಶ್ ಕುಮಾರ್ ಅವರನ್ನು ತಕ್ಷಣ ವಜಾಗೊಳಿಸಬೇಕು ಎಂದು ಒತ್ತಾಯಿಸಿ 140 ಸದಸ್ಯ ಬಲದ ಕೇರಳ ವಿಧಾನಸಭೆಯು ಇಂದು ಬೃಹತ್ ಬೆಂಬಲದೊಂದಿಗೆ ನಿರ್ಣಯವನ್ನು ಅಂಗೀಕರಿಸಿದೆ. ಕಾಂಗ್ರೆಸ್ ನೇತೃತ್ವದಲ್ಲಿ ‘ವೋಟ್ ಚೋರಿ’ ಹಾಗೂ ಕೇಂದ್ರ ಸರ್ಕಾರದೊಂದಿಗಿನ ಚುನಾವಣಾ ಆಯೋಗದ ಕೈಜೋಡಿಸುವಿಕೆಯ ಕುರಿತು ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಕೇರಳ ಶಾಸನಸಭೆಯ ಎರಡನೇ ಅಧಿವೇಶನದ ಆರಂಭಿಕ ದಿನದಲ್ಲೇ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿ ತೀವ್ರ ಅನುಮಾನಕ್ಕೆ ಎಡೆಮಾಡಿಕೊತ್ತಿದ್ದು. ಚುನಾವಣಾ ಆಯೋಗದ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸಲು ಅವರನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ನಿರ್ಣಯದಲ್ಲಿ ಸ್ಪಷ್ಟಪಡಿಸಲಾಗಿದೆ.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಹೆಸರಿನಲ್ಲಿ ನಡೆದಿರುವ ಅಕ್ರಮಗಳನ್ನು ತನಿಖೆಗೊಳಪಡಿಸಬೇಕು ಮತ್ತು ಅಕ್ರಮವಾಗಿ ಮತದಾನದ ಹಕ್ಕಿನಿಂದ ವಂಚಿತರಾದ ಪ್ರತಿಯೊಬ್ಬ ಅರ್ಹ ನಾಗರಿಕನ ಹೆಸರನ್ನು ಪುನಃ ಪಟ್ಟಿಗೆ ಸೇರಿಸಬೇಕು. ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕವಾಗಿರಬೇಕು. ಇದಕ್ಕಾಗಿ ಪ್ರಧಾನಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿ ಅವರನ್ನು ಒಳಗೊಂಡ ಆಯ್ಕೆ ಸಮಿತಿಯನ್ನು ತಕ್ಷಣವೇ ಪುನಾರಚಿಸಬೇಕು ಎಂದು ನಿರ್ಣಯ ಅಂಗೀಕರಿಸಲಾಗಿದೆ.
ಕೇರಳಂ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ ಮಾಡಿರುವ ಬಗ್ಗೆ ಎಕ್ಸ್ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಕೇರಳದ ಮುಖ್ಯಮಂತ್ರಿ ವಿ. ಡಿ. ಸತೀಶನ್, ಮತದಾನದ ಹಕ್ಕು ನಮ್ಮ ಪ್ರಜಾಪ್ರಭುತ್ವದ ಅಡಿಪಾಯ. ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ಹತ್ತಿಕ್ಕಲು ಅಥವಾ ಧಕ್ಕೆ ತರಲು ಯಾವುದೇ ಸಂಸ್ಥೆಗೆ ಅವಕಾಶ ನೀಡಲಾಗುವುದಿಲ್ಲ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಕೇರಳ ವಿಧಾನಸಭೆಯು ಗಟ್ಟಿಯಾಗಿ ನಿಲ್ಲುತ್ತದೆ ಎಂದು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಚಲೋ ಬೃಹತ್ ಪ್ರತಿಭಟನಾ ಮೆರವಣಿಗೆ: ದೆಹಲಿಯ 6 ಮೆಟ್ರೋ ನಿಲ್ದಾಣಗಳು ಬಂದ್
ನವದೆಹಲಿ: ಎಸ್ ಐಆರ್ ಅಕ್ರಮ ಖಂಡಿಸಿ ಹಾಗೂ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟ ಪಕ್ಷಗಳು ಸುಪ್ರೀಂ ಕೋರ್ಟ್ ಚಲೋ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಕೇಂದ್ರ ದೆಹಲಿಯ ಪ್ರಮುಖ ಆರು ಮೆಟ್ರೋ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಬಂದ್ ಮಾಡಲಾಗಿದೆ.
ಸೋಮವಾರ ಬೆಳಗ್ಗೆ 6 ರಿಂದ ಸಂಜೆ 4 ಗಂಟೆಯವರೆಗೆ ದೆಹಲಿಯ ಆರು ಮೆಟ್ರೋ ನಿಲ್ದಾಣಗಳು ತಾತ್ಕಾಲಿಕವಾಗಿ ಬಂದ್ ಆಗಿರಲಿವೆ. ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ವೇಳೆ 45 ಮೆಟ್ರೋ ನಿಲ್ದಾಣಗಳನ್ನು ಮುಚ್ಚಿದ ಕೇವಲ ಎರಡು ದಿನಗಳ ಬೆನ್ನಲ್ಲೇ ದೆಹಲಿ ಮೆಟ್ರೋ ರೈಲು ನಿಗಮ (DMRC) ಈ ಹೊಸ ಆದೇಶ ಹೊರಡಿಸಿದೆ.
ಪಟೇಲ್ ಚೌಕ್, ಜನಪಥ್, ರಾಜೀವ್ ಚೌಕ್, ಮಂಡಿ ಹೌಸ್, ಸೆಂಟ್ರಲ್ ಸೆಕ್ರೆಟರಿಯೇಟ್, ಬಾರಾಖಂಬಾ ರಸ್ತೆಯಲ್ಲಿರುವ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಈ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನವನ್ನು ನಿರ್ಬಂಧಿಸಲಾಗಿದ್ದರೂ, ಮೆಟ್ರೋ ಮಾರ್ಗ ಬದಲಾವಣೆ ಸೌಲಭ್ಯವು ಎಂದಿನಂತೆ ಲಭ್ಯವಿರಲಿದೆ.
ಮೆಟ್ರೋ ನಿರ್ಬಂಧ ಹಾಗೂ ಬಿಗಿ ಪೊಲೀಸ್ ಭದ್ರತೆಯಿಂದಾಗಿ ದೆಹಲಿಯ ಪ್ರಮುಖ ರಸ್ತೆಗಳಲ್ಲಿ ತೀವ್ರ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಇದಕ್ಕೆ ಪೂರಕವಾಗಿ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ನೀರು ನಿಂತಿದ್ದು, ಕಚೇರಿಗಳಿಗೆ ತೆರಳುವ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುವ ಸಾಧ್ಯತೆಯಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳ ‘ಇಂಡಿಯಾ’ (INDIA) ಒಕ್ಕೂಟ ಸುಪ್ರೀಂ ಕೋರ್ಟ್ ಚಲೋ ನಡೆಸುತ್ತಿದೆ.
ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ನಂಬುವ ಪ್ರತಿಯೊಬ್ಬ ಭಾರತೀಯನೂ ನಮ್ಮೊಂದಿಗೆ ಹೆಜ್ಜೆ ಹಾಕಲಿದ್ದಾನೆ. ‘ವೋಟ್ ಚೋರಿ’ ನಿಲ್ಲಿಸಲು, ಎಸ್ಐಆರ್ ಪ್ರಕ್ರಿಯೆ ರದ್ದುಗೊಳಿಸಲು ಹಾಗೂ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಾವು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ಕಾಅಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಇಂಡಿಯಾ ಮೈತ್ರಿಕೂಟದ ಪ್ರತಿಭಟನೆ ಆರಂಭವಾಗಿದ್ದು, ದೆಹಲಿ ಪೊಲೀಸರು ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದಾರೆ.

