ಬೆಂಗಳೂರು: ಪ್ರೌಢಶಾಲಾ ಸಹ ಶಿಕ್ಷಕರ ವೃಂದದಿಂದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಬಡ್ತಿ ಪಡೆಯಲು ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಸೂಚನೆ ನೀಡಿದೆ. ಅರ್ಹ ಶಿಕ್ಷಕರು ಅಗತ್ಯ ದಾಖಲೆಗಳನ್ನು ಅಕ್ಟೋಬರ್ 9, 2026ರೊಳಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಇಲಾಖೆ ತಿಳಿಸಿದೆ.
ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಿಂದ ಅಕ್ಟೋಬರ್ 6, 2026ರಂದು ಅತಿ ತುರ್ತು ಜ್ಞಾಪನಾ ಪತ್ರ ಹೊರಡಿಸಲಾಗಿದೆ. ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಶಿಕ್ಷಕರ ಪಟ್ಟಿಯನ್ನು ಈಗಾಗಲೇ ಎಲ್ಲಾ ಜಿಲ್ಲೆಗಳಿಗೆ ಇ-ಮೇಲ್ ಮೂಲಕ ಕಳುಹಿಸಲಾಗಿದ್ದು, ಸಂಬಂಧಪಟ್ಟ ಶಿಕ್ಷಕರನ್ನು ವೈಯಕ್ತಿಕವಾಗಿ ಸಂಪರ್ಕಿಸಿ ದಾಖಲೆಗಳನ್ನು ಸಂಗ್ರಹಿಸುವಂತೆ ಸೂಚಿಸಲಾಗಿದೆ.
ಯಾವ ದಾಖಲೆಗಳನ್ನು ಸಲ್ಲಿಸಬೇಕು?
ಉಪನ್ಯಾಸಕರ ಹುದ್ದೆಗೆ ಬಡ್ತಿ ಪಡೆಯಲು ಅರ್ಹರಾಗಿರುವ ಶಿಕ್ಷಕರು ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕಾಗಿದೆ:
-
ಕಳೆದ 5 ವರ್ಷಗಳ ಕಾರ್ಯನಿರ್ವಹಣಾ ವರದಿ — 2021-22ರಿಂದ 2025-26ರವರೆಗೆ — ಹಾಗೂ ಆಯಾ ವರ್ಷದ ಚರಾಸ್ತಿ ಮತ್ತು ಸ್ಥಿರಾಸ್ತಿ ವಿವರ.
-
ಸಹ ಶಿಕ್ಷಕರ ನೇಮಕಾತಿ ಆದೇಶದ ಪ್ರತಿ.
-
ಖಾಯಂ ಸೇವಾ ದೃಢೀಕರಣದ ಪ್ರತಿ.
-
ತೃಪ್ತಿಕರ ಸೇವಾ ದೃಢೀಕರಣ ಪತ್ರ.
-
ಯಾವುದೇ ಇಲಾಖಾ ವಿಚಾರಣೆ ಇಲ್ಲದಿರುವ ಪ್ರಮಾಣ ಪತ್ರ.
-
ಯಾವುದೇ ನ್ಯಾಯಾಂಗ ಪ್ರಕರಣ, ತನಿಖೆ ಅಥವಾ ಕ್ರಿಮಿನಲ್ ಪ್ರಕರಣ ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ.
-
ಸಾಧಾರಣ ರಜೆ/ವೇತನರಹಿತ ರಜೆ ಪಡೆದಿಲ್ಲ ಹಾಗೂ ಅನಧಿಕೃತ ಗೈರುಹಾಜರಿ ಇಲ್ಲದಿರುವ ಪ್ರಮಾಣ ಪತ್ರ.
-
ಸ್ನಾತಕೋತ್ತರ ಪದವಿ ಮತ್ತು ಬಿ.ಇಡಿ ಪದವಿಯ ನೈಜತೆ ಪ್ರಮಾಣ ಪತ್ರ.
-
ಇಲಾಖಾ ಪರೀಕ್ಷೆಗಳ ಪ್ರಮಾಣ ಪತ್ರ.
-
ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕರಿಗೆ 371J ಪ್ರಮಾಣ ಪತ್ರ.
-
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶಿಕ್ಷಕರು ಸಿಂಧುತ್ವ ಪ್ರಮಾಣ ಪತ್ರ.
-
ಜನ್ಮ ದಿನಾಂಕ, ಸೇವೆಗೆ ಸೇರಿದ ದಿನಾಂಕ ಹಾಗೂ ಪ್ರಸ್ತುತ ವೃಂದದಲ್ಲಿ ಕನಿಷ್ಠ ಅರ್ಹತಾದಾಯಕ ಸೇವೆ ಸಲ್ಲಿಸಿರುವ ಬಗ್ಗೆ ಮಾಹಿತಿ ಮತ್ತು ಇತರೆ ಸೇವಾ ವಿವರಗಳು.
-
ವಿಕಲಚೇತನ ಶಿಕ್ಷಕರಾಗಿದ್ದಲ್ಲಿ UDID ಪ್ರಮಾಣ ಪತ್ರ ಅಥವಾ ದೃಢೀಕರಿಸಿದ ಇತರೆ ಪ್ರಮಾಣ ಪತ್ರ.
ಅ.9ರ ಬಳಿಕ ದಾಖಲೆ ಸಲ್ಲಿಕೆಗೆ ಅವಕಾಶ ಇಲ್ಲ!
ಇಲಾಖೆ ನೀಡಿರುವ ಸೂಚನೆಯಂತೆ, 2026ರ ಅಕ್ಟೋಬರ್ 9ರೊಳಗೆ ಸ್ವೀಕೃತವಾಗುವ ದಾಖಲೆಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ನಿಗದಿತ ಅವಧಿಯಲ್ಲಿ ದಾಖಲೆಗಳನ್ನು ಸಲ್ಲಿಸದ ಶಿಕ್ಷಕರ ಹೆಸರನ್ನು ಉಪನ್ಯಾಸಕರ ಹುದ್ದೆಯ ಆಯ್ಕೆ ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಅಲ್ಲದೆ, ಮುಂದಿನ ಯಾವುದೇ ಆಗುಹೋಗುಗಳಿಗೆ ಸಂಬಂಧಿಸಿದ ಶಿಕ್ಷಕರೇ ನೇರ ಹೊಣೆಗಾರರಾಗಿರುತ್ತಾರೆ. ಹೀಗಾಗಿ ಅರ್ಹ ಶಿಕ್ಷಕರು ಯಾವುದೇ ವಿಳಂಬ ಮಾಡದೆ ಅಗತ್ಯ ದಾಖಲೆಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಜಿಲ್ಲೆಗಳಿಗೆ ವಿಶೇಷ ಸೂಚನೆ
ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿರುವ 13 ಅಂಶಗಳ ಮಾಹಿತಿ ಹಾಗೂ ಅಗತ್ಯ ದಾಖಲೆಗಳನ್ನು ಅಕ್ಟೋಬರ್ 9ರೊಳಗೆ ಪಡೆದು, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಸಲ್ಲಿಸುವಂತೆ ಎಲ್ಲಾ ಜಿಲ್ಲಾ ಉಪನಿರ್ದೇಶಕರಿಗೆ ಸೂಚಿಸಲಾಗಿದೆ.

