ಒಂದೇ ಒಂದು ದುಬಾರಿ ಮೊಬೈಲ್ ಫೋನ್‌ಗಾಗಿ ಯುವಕನೊಬ್ಬ ಹಿಡಿದ ಹಠ ಇಡೀ ಕುಟುಂಬವನ್ನೇ ಬಲಿ ಪಡೆದಿರುವ ದೂರಣಾಂತಕ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ (ಔರಂಗಾಬಾದ್) ತೀಸ್‌ಗಾಂವ್ ಬಳಿ ನಡೆದಿದೆ. ತನಗೆ ಐಫೋನ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಬೆಟ್ಟದಿಂದ ಜಿಗಿದು ಪ್ರಾಣ ಕಳೆದುಕೊಳ್ಳಲು ಹೊರಟ ಮಗನನ್ನು ರಕ್ಷಿಸಲು ಹೋಗಿ ತಂದೆ-ತಾಯಿಯೂ ಸಾವನ್ನಪ್ಪಿದ್ದಾರೆ.
ಘಟನೆಯ ಹಿನ್ನೆಲೆ:
ಖವ್ಡ್ಯಾ ಬೆಟ್ಟದ ಬಳಿ ನಡೆದ ಈ ಘಟನೆಯಲ್ಲಿ 18 ವರ್ಷದ ಕುನಾಲ್ ಚಂದ್‌ವಾಡೆ ಎಂಬ ಯುವಕ ತನಗೆ ‘ಐಫೋನ್ 15’ ಮೊಬೈಲ್ ಕೊಡಿಸುವಂತೆ ಪೋಷಕರ ಬಳಿ ಪಟ್ಟು ಹಿಡಿದಿದ್ದ. ಆದರೆ, ಸದ್ಯಕ್ಕೆ ಮೊಬೈಲ್ ಕೊಡಿಸಲು ಸಾಧ್ಯವಿಲ್ಲ ಎಂದು ಪೋಷಕರು ಹೇಳಿದ್ದಕ್ಕೆ ತೀವ್ರ ಕೋಪಗೊಂಡಿದ್ದ ಕುನಾಲ್, ಸಮೀಪದ ಖವ್ಡ್ಯಾ ಬೆಟ್ಟಕ್ಕೆ ತೆರಳಿ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ.
https://x.com/greatandhranews/status/2090838955151564848
3 ಗಂಟೆಗಳ ಕಾಲ ಮನವೊಲಿಸಲು ಹರಸಾಹಸ:
ವಿಷಯ ತಿಳಿಯುತ್ತಿದ್ದಂತೆಯೇ ಆತನ ತಂದೆ ಮುರಳೀಧರ್ ಹಾಗೂ ತಾಯಿ ಸಂಗೀತಾ ಅವರು ಗ್ರಾಮಸ್ಥರು ಮತ್ತು ಸ್ಥಳೀಯ ಪೊಲೀಸರೊಂದಿಗೆ ಬೆಟ್ಟಕ್ಕೆ ಧಾವಿಸಿದರು. ಸುಮಾರು 3 ಗಂಟೆಗಳ ಕಾಲ ಆತನ ಬಳಿ ವಿನಂತಿಸಿಕೊಂಡು, ಬೆಟ್ಟದಿಂದ ಕೆಳಗಿಳಿದು ಬರುವಂತೆ ಬ್ರಹ್ಮಪ್ರಯತ್ನ ನಡೆಸಿದರು. ಸ್ಥಳಕ್ಕೆ ಬಂದಿದ್ದ ಗ್ರಾಮದ ಸರಪಂಚರು ಕೂಡ “ನಾನೇ ನಿನಗೆ ಫೋನ್ ಕೊಡಿಸುತ್ತೇನೆ, ವಾಪಸ್ ಬಾ” ಎಂದು ಹೇಳಿದರೂ ಯುವಕ ತನ್ನ ಪಟ್ಟಿನಿಂದ ಹಿಂದೆ ಸರಿಯಲಿಲ್ಲ.
ಕಣ್ಣೆದುರೇ ನಡೆದ ಭೀಕರ ದುರಂತ:
ಕೊನೆಗೆ, ಕಣ್ಣೆದುರೇ ಮಗ ಕೆಳಗೆ ಬೀಳುವುದನ್ನು ತಡೆಯಲು ತಂದೆ ಮುರಳೀಧರ್ ಅವರು ಮುಂದಕ್ಕೆ ಹೋಗಿ ಆತನನ್ನು ಹಿಡಿಯಲು ಯತ್ನಿಸಿದರು. ಆದರೆ, ದುರದೃಷ್ಟವಶಾತ್ ಯುವಕ ಕೆಳಗೆ ಧುಮುಕಿದಾಗ ಆತನ ಸೆಳೆತಕ್ಕೆ ಸಿಲುಕಿ ತಂದೆಯೂ ನಿಯಂತ್ರಣ ತಪ್ಪಿ ಮಗನೊಂದಿಗೆ ಪ್ರಪಾತಕ್ಕೆ ಬಿದ್ದಿದ್ದಾರೆ. ಸ್ಥಳದಲ್ಲೇ ಇಬ್ಬರೂ ಮೃತಪಟ್ಟರು.
ಇತ್ತ ಮಗ ಹಾಗೂ ಗಂಡ ಇಬ್ಬರೂ ಕಣ್ಣೆದುರೇ ಪ್ರಪಾತಕ್ಕೆ ಬಿದ್ದು ಪ್ರಾಣ ಬಿಟ್ಟದ್ದನ್ನು ಕಂಡ ತಾಯಿ ಸಂಗೀತಾ ಅವರಿಗೆ ಆಘಾತ ತಂಗೊಳ್ಳಲಾಗಲಿಲ್ಲ. ತೀವ್ರ ದುಃಖ ಹಾಗೂ ಆಕ್ರಂದನದಲ್ಲೇ ಅವರು ಸಹ ಅದೇ ಬೆಟ್ಟದಿಂದ ಕೆಳಗೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ.
ಮೊಬೈಲ್ ಫೋನ್ ಹುಚ್ಚು ಹಾಗೂ ಸಣ್ಣ ಹಠಕ್ಕೆ ಇಡೀ ಕುಟುಂಬವೇ ಸರ್ವನಾಶವಾಗಿದ್ದು, ಇಡೀ ಗ್ರಾಮದಲ್ಲಿ ಶೋಕಸಾಗರ ಮುಸುಕಿದೆ.

