HomeCrimeಮದ್ಯ ಮುಕ್ತ ರಾಜ್ಯದಲ್ಲಿ ಲಾರಿ ಪಲ್ಟಿಯಿಂದ ಅಕ್ರಮ ಪತ್ತೆ ; ಬಾಟಲಿ ಬಾಚಿಕೊಳ್ಳಲು ಮುಗಿಬಿದ್ದ...

ಮದ್ಯ ಮುಕ್ತ ರಾಜ್ಯದಲ್ಲಿ ಲಾರಿ ಪಲ್ಟಿಯಿಂದ ಅಕ್ರಮ ಪತ್ತೆ ; ಬಾಟಲಿ ಬಾಚಿಕೊಳ್ಳಲು ಮುಗಿಬಿದ್ದ ಜನ | Video

ಪರಿಪೂರ್ಣ ಮದ್ಯ ನಿಷೇಧ ಜಾರಿಯಲ್ಲಿರುವ ಬಿಹಾರ ರಾಜ್ಯದಲ್ಲಿ ಮದ್ಯ ಸಾಗಿಸುತ್ತಿದ್ದ ಲಾರಿಯೊಂದು ಅಪಘಾತಕ್ಕೀಡಾದ ಬೆನ್ನಲ್ಲೇ, ರಸ್ತೆಯಲ್ಲಿ ಬಿದ್ದಿದ್ದ ಮದ್ಯದ ಬಾಟಲಿಗಳು ಹಾಗೂ ರಟ್ಟಿನ ಪೆಟ್ಟಿಗೆಗಳನ್ನು ಲೂಟಿ ಮಾಡಲು ಸಾರ್ವಜನಿಕರು ಮುಗಿಬಿದ್ದಿರುವ ವಿಚಿತ್ರ ಹಾಗೂ ಆಘಾತಕಾರಿ ಘಟನೆ ಶುಕ್ರವಾರ ನಡೆದಿದೆ.

ಘಟನೆಯ ವಿವರ

ಖಾರ್ಹಾಟ್ ಟೋಲ್ ಪ್ಲಾಜಾ ಬಳಿ ಮದ್ಯ ತುಂಬಿದ್ದ ಸಣ್ಣ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ (ಡಿವೈಡರ್) ಡಿಕ್ಕಿ ಹೊಡೆದು ಅಪಘಾತಕ್ಕೀಡಾಯಿತು. ಆರಂಭದಲ್ಲಿ ಇದೊಂದು ಸಾಮಾನ್ಯ ಅಪಘಾತವೆಂದು ಭಾವಿಸಲಾಗಿತ್ತು. ಆದರೆ, ಆ ವಾಹನದಲ್ಲಿ ಮದ್ಯದ ಬಾಟಲಿಗಳಿವೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಸ್ಥಳೀಯರು ಸಾಗರೋಪಾದಿಯಲ್ಲಿ ಅಪಘಾತದ ಸ್ಥಳಕ್ಕೆ ದೌಡಾಯಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರು, ಮಹಿಳೆಯರು ಹಾಗೂ ಮಕ್ಕಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಾಟಲಿಗಳನ್ನು ಮತ್ತು ರಟ್ಟಿನ ಪೆಟ್ಟಿಗೆಗಳನ್ನು ಕೈಗೆ ಸಿಕ್ಕಷ್ಟು ಬಾಚಿಕೊಂಡು ಓಡುತ್ತಿರುವುದು ಕಂಡುಬಂದಿದೆ. ಅಪಘಾತ ಸಂಭವಿಸಿದ ತಕ್ಷಣವೇ ಲಾರಿಯ ಚಾಲಕ ಹಾಗೂ ನಿರ್ವಾಹಕ ಸ್ಥಳದಿಂದ ಕಾಲ್ಕಿತ್ತಿದ್ದರು.

ಕಠಿಣ ಕಾನೂನು ಕ್ರಮಕ್ಕೆ ಪೊಲೀಸರ ಸೂಚನೆ

ಘಟನೆಯ ಮಾಹಿತಿ ತಿಳಿದು ರಾನಿಗಂಜ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ, ವಾಹನದಲ್ಲಿದ್ದ ದೇಸಿ ಮದ್ಯದ ಬಹುತೇಕ ಪೆಟ್ಟಿಗೆಗಳು ಖಾಲಿಯಾಗಿದ್ದವು. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿ ಸುಶೀಲ್ ಕುಮಾರ್, “ವೀಡಿಯೋ ದೃಶ್ಯಾವಳಿಗಳ ಆಧಾರದ ಮೇಲೆ ಮದ್ಯ ಲೂಟಿಯಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನೂ ಗುರುತಿಸಿ ಬಂಧಿಸಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.

2016 ರಿಂದ ಬಿಹಾರದಲ್ಲಿ ಮದ್ಯ ಮಾರಾಟ, ಸಂಗ್ರಹಣೆ ಹಾಗೂ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಿದ್ದೂ ನೆರೆ ರಾಜ್ಯಗಳಾದ ಅಸ್ಸಾಂ ಅಥವಾ ಪಶ್ಚಿಮ ಬಂಗಾಳದಿಂದ ಅಕ್ರಮವಾಗಿ ಮದ್ಯವನ್ನು ಸಾಗಿಸಲಾಗುತ್ತಿತ್ತೇ ಎಂಬ ಕೋನದಲ್ಲೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಸ್ತುತ ಅಪಘಾತಕ್ಕೀಡಾದ ವಾಹನವನ್ನು ವಶಕ್ಕೆ ಪಡೆಯಲಾಗಿದ್ದು, ವಾಹನದ ಮಾಲೀಕ ಹಾಗೂ ಪರಾರಿಯಾಗಿರುವ ಚಾಲಕನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular