HomeUncategorizedಮೊದಲ ಪತಿಯ ಕೊಲೆ ಪ್ರಕರಣ; ಜೀವಾವಧಿ ಶಿಕ್ಷೆಯಲ್ಲಿದ್ದ ಪ್ರೇಮಿಗಳಿಗೆ ಮದುವೆಗೆ ಒಂದು ದಿನ ಪೆರೋಲ್

ಮೊದಲ ಪತಿಯ ಕೊಲೆ ಪ್ರಕರಣ; ಜೀವಾವಧಿ ಶಿಕ್ಷೆಯಲ್ಲಿದ್ದ ಪ್ರೇಮಿಗಳಿಗೆ ಮದುವೆಗೆ ಒಂದು ದಿನ ಪೆರೋಲ್

ಬೆಂಗಳೂರು: ಮೊದಲ ಪತಿಯ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಹಿಳೆ ಹಾಗೂ ಆಕೆಯ ಪ್ರಿಯಕರನಿಗೆ ಮದುವೆಯಾಗಲು ಕರ್ನಾಟಕ ಹೈಕೋರ್ಟ್ ಒಂದು ದಿನದ ಪೆರೋಲ್ ನೀಡಿದೆ. ಬೆಳಗಾವಿ ಜೈಲಿನಲ್ಲಿರುವ ಶ್ರೀಧರ್ ಮತ್ತು ಸಿದ್ದವ್ವ ಅಲಿಯಾಸ್ ಪ್ರಿಯಾಂಕಾ ಜಗಮಟ್ಟಿ ಮದುವೆಯಾಗಲು ಪೆರೋಲ್ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಧಾರವಾಡದ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರು ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ನೀಡಿದ್ದಾರೆ.

ಗಂಡನ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಇಬ್ಬರು ಮದುವೆಯಾಗಲು ಪೆರೋಲ್ ಕೇಳಿರುವುದು ನೈತಿಕ ಪ್ರಶ್ನೆಗಳನ್ನು ಹುಟ್ಟುಹಾಕಬಹುದು. ಆದರೆ, ಕಾನೂನಿನಲ್ಲಿ ಮದುವೆಗೆ ಯಾವುದೇ ನಿರ್ಬಂಧವಿಲ್ಲದಿದ್ದರೆ ಕೇವಲ ನೈತಿಕ ಕಾರಣ ನೀಡಿ ಅವರ ಕಾನೂನುಬದ್ಧ ಹಕ್ಕನ್ನು ತಡೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

90 ದಿನ ಪೆರೋಲ್ ಕೇಳಿದ್ದ ಪ್ರೇಮಿಗಳು

ಶ್ರೀಧರ್ ಮತ್ತು ಸಿದ್ದವ್ವ ಪರಸ್ಪರ ಮದುವೆಯಾಗಲು ನಿರ್ಧರಿಸಿರುವುದಾಗಿ ಅರ್ಜಿಯಲ್ಲಿ ತಿಳಿಸಿದ್ದರು. ಮದುವೆಗಾಗಿ 90 ದಿನಗಳ ಪೆರೋಲ್ ನೀಡುವಂತೆ ಇಬ್ಬರೂ ಮನವಿ ಮಾಡಿದ್ದರು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಜೈಲು ನಿಯಮಗಳ ಬಗ್ಗೆ ಕೋರ್ಟ್‌ಗೆ ಮಾಹಿತಿ ನೀಡಿದರು. ಜೈಲಿನ ಆವರಣದಲ್ಲೇ ಮದುವೆ ಮಾಡಿಕೊಳ್ಳಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಕೋರ್ಟ್ 90 ದಿನಗಳ ಪೆರೋಲ್ ಬದಲಿಗೆ ಒಂದು ದಿನ ಮಾತ್ರ ಜೈಲಿನಿಂದ ಹೊರಗೆ ಹೋಗಲು ಅವಕಾಶ ನೀಡಿದೆ.

ಇಬ್ಬರೂ ವಿಚಾರಣೆ ಅವಧಿ ಸೇರಿದಂತೆ ಈಗಾಗಲೇ 3 ವರ್ಷ, 5 ತಿಂಗಳು ಮತ್ತು 25 ದಿನ ಜೈಲಿನಲ್ಲಿ ಕಳೆದಿದ್ದಾರೆ. ಜೈಲಿನಲ್ಲಿರುವ ಅವರ ನಡವಳಿಕೆ ಬಗ್ಗೆ ಯಾವುದೇ ಪ್ರತಿಕೂಲ ವರದಿ ಇಲ್ಲ ಎಂಬುದನ್ನೂ ಕೋರ್ಟ್ ಗಮನಿಸಿದೆ.

ಕೈದಿಗಳು ತಮ್ಮ ಕುಟುಂಬ ಮತ್ತು ಸಾಮಾಜಿಕ ಸಂಬಂಧಗಳನ್ನು ಉಳಿಸಿಕೊಳ್ಳಲು ಪೆರೋಲ್ ನೀಡುವುದು ಜೈಲು ಸುಧಾರಣೆಯ ಒಂದು ಭಾಗವಾಗಿದೆ. ಇದು ಅವರ ಪುನರ್ವಸತಿಗೂ ನೆರವಾಗಬಹುದು ಎಂದು ನ್ಯಾಯಪೀಠ ಹೇಳಿದೆ.

ಹೈಕೋರ್ಟ್‌ನ 3 ಸೂಚನೆಗಳು

ಮದುವೆ ನಡೆಯುವ ದಿನ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮಾತ್ರ ಇಬ್ಬರಿಗೂ ಪೆರೋಲ್.

ಮದುವೆ ಸಮಾರಂಭದ ವೇಳೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು.

ಮದುವೆ ಮುಗಿದ ಬಳಿಕ ಸಂಜೆ 5 ಗಂಟೆಯೊಳಗೆ ಇಬ್ಬರೂ ಬೆಳಗಾವಿ ಜೈಲಿಗೆ ವಾಪಸ್ ಆಗಬೇಕು.

ಹೈಕೋರ್ಟ್ ಆದೇಶ ಸಿಕ್ಕ ಒಂದು ವಾರದೊಳಗೆ ಜೈಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಪ್ರಕರಣದ ಹಿನ್ನೆಲೆ

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಭೈರನಟ್ಟಿ ಗ್ರಾಮದ ನಿವಾಸಿಗಳಾದ ಶ್ರೀಧರ್ ತಳವಾರ್ ಮತ್ತು ಸಿದ್ದವ್ವ ಅಲಿಯಾಸ್ ಪ್ರಿಯಾಂಕಾ ಪರಸ್ಪರ ಪ್ರೀತಿಸುತ್ತಿದ್ದರು. ಸಿದ್ದವ್ವ ತಮ್ಮ ಪತಿ ಶಂಕರ್ ಸಿದ್ದಪ್ಪ ಜಗಮಟ್ಟಿ ಅವರ ಕೊಲೆಗೆ ಶ್ರೀಧರ್ ಜೊತೆ ಸೇರಿ ಸಂಚು ರೂಪಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

2023ರ ಜುಲೈ 17ರಂದು ಶಂಕರ್ ಅವರು ಪತ್ನಿಯೊಂದಿಗೆ ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಪೂಜೆ ಮುಗಿಸಿ ವಾಪಸ್ ಬರುತ್ತಿದ್ದಾಗ ದೇವಸ್ಥಾನದ ಆವರಣದಲ್ಲೇ ಶ್ರೀಧರ್ ಅವರ ಮೇಲೆ ದಾಳಿ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಎಂದು ಪ್ರಕರಣದಲ್ಲಿ ತಿಳಿಸಲಾಗಿತ್ತು.

ತನಿಖೆ ನಡೆಸಿದ ಮೂಡಲಗಿ ಪೊಲೀಸರು ಇಬ್ಬರನ್ನೂ ಬಂಧಿಸಿ ಚಾರ್ಜ್‌ಶೀಟ್ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 12ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 2024ರ ಜುಲೈ 30ರಂದು ಶ್ರೀಧರ್ ಮತ್ತು ಸಿದ್ದವ್ವ ಇಬ್ಬರಿಗೂ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿತ್ತು. ಜೊತೆಗೆ ತಲಾ ₹3 ಲಕ್ಷ ದಂಡ ವಿಧಿಸಲಾಗಿತ್ತು.

ದಂಡದ ಮೊತ್ತದಲ್ಲಿ ₹2.50 ಲಕ್ಷವನ್ನು ಮೃತ ಶಂಕರ್ ಅವರ ಕುಟುಂಬಕ್ಕೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. ಸದ್ಯ ಇಬ್ಬರೂ ಬೆಳಗಾವಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular