HomeKarnatakaಸಿಎಂ ಹೋರಾಟಕ್ಕೆ ಮಣಿದ ಚುನಾವಣಾ ಆಯೋಗ: ಮತದಾರರ ಹೆಸರು ಅಳಿಸಲು ಸುಳ್ಳು ಅರ್ಜಿ ಸಲ್ಲಿಸಿದವರ ವಿರುದ್ಧ...

ಸಿಎಂ ಹೋರಾಟಕ್ಕೆ ಮಣಿದ ಚುನಾವಣಾ ಆಯೋಗ: ಮತದಾರರ ಹೆಸರು ಅಳಿಸಲು ಸುಳ್ಳು ಅರ್ಜಿ ಸಲ್ಲಿಸಿದವರ ವಿರುದ್ಧ ಕ್ರಮಕ್ಕೆ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಫಾರ್ಮ್ 7 ಮೂಲಕ ಅರ್ಹ ಮತದಾರರ ಹೆಸರು ಅಳಿಸಿ ಹಾಕುವ ಷಡ್ಯಂತ್ರದ ಬಗ್ಗೆ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆಗೆ ಆದೇಶ ನೀಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟ ಸಹೋದ್ಯೋಗಿಗಳ ಜೊತೆಗೆ ಮುಖ್ಯ ಚುನಾವಣಾ ಅಧಿಕಾರಿ ಕಚೇರಿ ಆವರಣದಲ್ಲಿ ಐದು ಗಂಟೆಗೂ ಅಧಿಕ ಕಾಲ ಧರಣಿ ನಡೆಸಿದ್ದಾರೆ. ಮುಖ್ಯಮಂತ್ರಿಗಳ ಹೋರಾಟಕ್ಕೆ ಮಣಿದ ಮುಖ್ಯ ಚುನಾವಣಾ ಅಧಿಕಾರಿ ವಿ. ಅನ್ಬುಕುಮಾರ್ ತಕ್ಷಣವೇ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಕಚೇರಿ ಎದುರು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ನಮ್ಮ ಹೋರಾಟಕ್ಕೆ ಮುಖ್ಯ ಚುನಾವಣಾಧಿಕಾರಿ ಕಚೇರಿ ಮಣಿದಿದೆ. SIR ನೆಪದಲ್ಲಿ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಷಡ್ಯಂತ್ರ ಖಂಡಿಸಿ ನಡೆಸಿದ ನಮ್ಮ ಹೋರಾಟಕ್ಕೆ ಮುಖ್ಯ ಚುನಾವಣಾಧಿಕಾರಿ ಕಚೇರಿ ಮಣಿದಿದೆ. ಮತದಾರರ ಹೆಸರನ್ನು ಅಳಿಸುವ ಉದ್ದೇಶದಿಂದ ಫಾರ್ಮ್‌ 6, ಫಾರ್ಮ್‌ 6ಎ, ಫಾರ್ಮ್ 7 ಬಳಸಿ ಸುಳ್ಳು ಅರ್ಜಿಗಳನ್ನು ಸಲ್ಲಿಸಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಸೂಚನೆ ನೀಡಿದೆ. ಮತದಾರರ ಪಟ್ಟಿಯಿಂದ ಅರ್ಹ ಮತದಾರರನ್ನು ತೆಗೆದುಹಾಕುವವರ ವಿರುದ್ಧ ಪ್ರಕರಣ ದಾಖಲಿಸಲು ಚುನಾವಣಾಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ ಎಂದರು.

ಮರಣ ಹಾಗೂ ಎರಡು ಬಾರಿ ನೋಂದಣಿಯಾದ ಪ್ರಕರಣಗಳನ್ನು ಹೊರತುಪಡಿಸಿ ಬೇರೆ ಯಾವುದೇ ಫಾರ್ಮ್‌ 7 ಅನ್ನು ಅನುಮೋದಿಸುವಂತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತರು ರಾಜ್ಯದ ಎಲ್ಲಾ ತಹಶೀಲ್ದಾರ್‌ ಅವರಿಗೆ ನಿರ್ದೇಶನ ನೀಡಿದ್ದಾರೆ. ಮರಣ ಪ್ರಕರಣಗಳಲ್ಲಿ ಮರಣ ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಕೆಯಾಗಬೇಕು. ಎರಡು ಬಾರಿ ನೋಂದಣಿಯಾಗಿದ್ದರೆ ಎರಡನೇ ಎಪಿಕ್ ಸಂಖ್ಯೆಯನ್ನು ನಮೂದಿಸಬೇಕು ಎಂದು ಸೂಚನೆ ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಸ್‌ಐಆರ್‌ ಅಕ್ರಮದ ಕುರಿತು ಹಲವು ಪ್ರಕರಣಗಳು ಗಮನಕ್ಕೆ ಬಂದಿದ್ದು, ಇದರಲ್ಲಿ ವಿಪಕ್ಷಗಳ ಕುತಂತ್ರವಿದೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ದಲಿತರು ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಗಳ ಮತದಾರರನ್ನು ಗುರಿಯಾಗಿಸಿಕೊಂಡು ಈ ಪ್ರಕ್ರಿಯೆ ನಡೆಸಲಾಗಿದೆ. ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಹೆಸರುಗಳನ್ನು ಅಳಿಸಲು ಅರ್ಜಿಗಳನ್ನು ಸಲ್ಲಿಸಿರುವ ಪ್ರಕರಣಗಳು ವರದಿಯಾಗಿದ್ದು, ಕೆಲವು ಕ್ಷೇತ್ರಗಳಲ್ಲಿ ಇಂತಹ ಅರ್ಜಿಗಳು ಸಾವಿರಾರು ಸಂಖ್ಯೆಯಲ್ಲಿವೆ.

ಈ ಬಗ್ಗೆ ಹಲವು ಜಿಲ್ಲೆಗಳಲ್ಲಿ ಮತದಾರರು ಈಗಾಗಲೇ ದೂರುಗಳನ್ನು ಸಲ್ಲಿಸಿದ್ದು, ಕೆಲವು ಪ್ರಕರಣಗಳಲ್ಲಿ ಎಫ್‌ಐಆರ್‌ಗಳೂ ದಾಖಲಾಗಿವೆ. ತಮ್ಮ ಹೆಸರು ಅಥವಾ ಮತದಾನದ ಹಕ್ಕಿನ ಮೇಲೆ ಪರಿಣಾಮ ಬೀರಿರುವುದನ್ನು ಗಮನಿಸಿದ ಬಳಿಕ ಮತದಾರರು ದೂರು ನೀಡಿದ್ದಾರೆ. ಕೆಲವು ರಾಜಕೀಯ ನಾಯಕರು ಹಿರಿಯ ನಾಯಕರಿಂದ ಫಾರ್ಮ್‌-7 ಅರ್ಜಿಗಳನ್ನು ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ.

ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಗಳು ಹಾಗೂ ಕಾನೂನು ತಜ್ಞರು ಸಭೆ ನಡೆಸಿ ಕೆಲವು ತೀರ್ಮಾನಗಳನ್ನು ಕೈಗೊಂಡಿದ್ದಾರೆ. ನಮ್ಮ ಹೋರಾಟಕ್ಕೆ ಮುಖ್ಯ ಚುನಾವಣಾಧಿಕಾರಿ ಕಚೇರಿ ಮಣಿದಿದೆ. ಅರ್ಹ ಮತದಾರರಿಗೆ ನ್ಯಾಯ ಒದಗಿಸುವ ಭರವಸೆ ಸಿಕ್ಕಿದೆ. ಸೂಕ್ತ ತನಿಖೆ ಆಗದಿದ್ದರೆ ಮತ್ತೆ ಹೋರಾಟ ಮಾಡುತ್ತೇವೆ. ಇದರಲ್ಲಿ ವಿರೋಧ ಪಕ್ಷಗಳ ಕುತಂತ್ರವಿದೆ. ನಮ್ಮ ದಾಖಲೆಗಳನ್ನು ನೋಡಿ ಮುಖ್ಯ ಚುನಾವಣಾಧಿಕಾರಿ ಕಚೇರಿ ಅಚ್ಚರಿ ವ್ಯಕ್ತಪಡಿಸಿದೆ. ಇದು ನಾಡಿನ ಜನತೆ ನಮಗೆ ಕೊಟ್ಟಿರುವ ಹಕ್ಕು. 136 ಮಂದಿಯನ್ನು ಗೆಲ್ಲಿಸಿ ಇಡೀ ಜನರ ರಕ್ಷಣೆ ಮಾಡುವಂತೆ ಸೂಚಿಸಿದ್ದಾರೆ. ಆ ಪ್ರಕಾರ ನಾವು ಈ ನಾಡಿನ ಜನರ ಹಕ್ಕನ್ನು ರಕ್ಷಿಸಲು ಹೋರಾಟ ಮಾಡಿದ್ದೇವೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆದಿರುವ ಅತಿದೊಡ್ಡ ವಂಚನೆ. ಮುಖ್ಯ ಚುನಾವಣಾಧಿಕಾರಿ ಕಚೇರಿಯು ನಮ್ಮನ್ನು ಮನವೊಲಿಸಲು ಬಂದರೂ ನಾವು ಜಗ್ಗಲಿಲ್ಲ. ಮಹಾತ್ಮ ಗಾಂಧೀಜಿ ನಮಗೆ ಹೇಳಿಕೊಟ್ಟ ಮಾರ್ಗದಲ್ಲಿ ಚುನಾವಣಾ ಅಧಿಕಾರಿಗಳಿಗೆ ಅವರ ಕಚೇರಿಯಲ್ಲಿ ಕುಳಿತು ಅಕ್ರಮದ ಬಗ್ಗೆ ಮನದಟ್ಟು ಮಾಡಿಕೊಟ್ಟಿದ್ದೇವೆ. ಅವರಿಗೆ ಅಗತ್ಯ ದಾಖಲೆಗಳನ್ನು ನೀಡಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದರು.

ವಿಪಕ್ಷ ನಾಯಕರಾದ ಆರ್‌. ಅಶೋಕ್‌ ಅವರು 25,000 ಫಾರ್ಮ್‌-7 ಅರ್ಜಿಗಳನ್ನು ವಿತರಿಸಲಾಗಿದೆ ಎಂದು ಹೇಳಿದ್ದಾರೆ. ಅದು ಒಂದಾಗಿರಲಿ, ಹತ್ತಾಗಿರಲಿ, 25 ಸಾವಿರವಾಗಿರಲಿ ಅಥವಾ 25 ಲಕ್ಷವಾಗಿರಲಿ, ತನಿಖೆ ತನ್ನದೇ ಆದ ರೀತಿಯಲ್ಲಿ ನಡೆಯಲಿದೆ. ಈ ಅರ್ಜಿಗಳನ್ನು ಎಲ್ಲಿಂದ ಮುದ್ರಿಸಲಾಯಿತು..? ಹೇಗೆ ಮುದ್ರಿಸಲಾಯಿತು..? ಯಾರು ವಿತರಿಸಿದರು..? ಎಂಬುದು ನಮ್ಮ ಪ್ರಶ್ನೆ ಎಂದರು.

ನಾವು ಜನರ ಮತದಾನದ ಹಕ್ಕನ್ನು ರಕ್ಷಿಸಲು ಬದ್ಧರಾಗಿದ್ದೇವೆ. ಮುಖ್ಯ ಚುನಾವಣಾಧಿಕಾರಿ ಕಚೇರಿ ನೋಟಿಸ್‌ ನೀಡಿರುವ ಬಾಕಿ 35 ಲಕ್ಷ ಮತದಾರರಿಗೆ ಅಗತ್ಯ ದಾಖಲೆ ಒದಗಿಸಲು ಸರ್ಕಾರ ಬದ್ಧವಾಗಿದೆ. ರಾಜ್ಯದ ಪ್ರತಿಯೊಬ್ಬ ಅರ್ಹ ಮತದಾರನಿಗೂ ಮತದಾನದ ಹಕ್ಕು ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಮಾಜಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಸಚಿವರು ಇದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular