ಉತ್ತರ ಪ್ರದೇಶದ ಘಾಜಿಯಾಬಾದ್ನ ಇಂದಿರಾಪುರಂನ ಶಿಪ್ರಾ ಕೃಷ್ಣ ವಿಸ್ಟಾ ಸೊಸೈಟಿಯ F-2 ಟವರ್ನಲ್ಲಿ ವ್ಯಕ್ತಿಯೊಬ್ಬ ಲಿಫ್ಟ್ನೊಳಗೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ನಡೆದಿದೆ. ಇದರ CCTV ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಿವಾಸಿಗಳಿಂದ ಆಕ್ರೋಶ ವ್ಯಕ್ತವಾಗಿದೆ.
ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಲಿಫ್ಟ್ಗೆ ಬಂದು ಒಳಗೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎನ್ನಲಾಗಿದೆ. ಈ ವೇಳೆ ಲಿಫ್ಟ್ ಹಲವು ಮಹಡಿಗಳಲ್ಲಿ ನಿಂತು ಬಾಗಿಲು ತೆರೆದರೂ ಆತ ತನ್ನ ಕೃತ್ಯವನ್ನು ಮುಂದುವರಿಸಿರುವುದು CCTV ದೃಶ್ಯದಲ್ಲಿ ಕಂಡುಬಂದಿದೆ. ಬಳಿಕ ತನ್ನ ಮಹಡಿ ಬಂದಾಗ ಲಿಫ್ಟ್ನಿಂದ ಹೊರಬಂದು ಆತ ಅಲ್ಲಿಂದ ತೆರಳಿದ್ದಾನೆ.
ದುರ್ವಾಸನೆ ಬಂದ ಬಳಿಕ CCTV ಪರಿಶೀಲನೆ
ಲಿಫ್ಟ್ನಲ್ಲಿ ದುರ್ವಾಸನೆ ಬರುತ್ತಿದೆ ಎಂದು ಸೊಸೈಟಿಯ ಹಲವು ನಿವಾಸಿಗಳು ದೂರು ನೀಡಿದ್ದರು. ಈ ಬಗ್ಗೆ RWA ಹಾಗೂ ನಿರ್ವಹಣಾ ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು.
ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ಲಿಫ್ಟ್ನ CCTV ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಆಗ ವ್ಯಕ್ತಿಯೊಬ್ಬ ಲಿಫ್ಟ್ನೊಳಗೆ ಮೂತ್ರ ವಿಸರ್ಜನೆ ಮಾಡಿರುವುದು ಬೆಳಕಿಗೆ ಬಂದಿದೆ. ಬಳಿಕ ಈ ದೃಶ್ಯವನ್ನು ಸೊಸೈಟಿಯ ನಿವಾಸಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
https://x.com/priyarajputlive/status/2102276777917940066
ಸಾಮಾಜಿಕ ಜಾಲತಾಣದಲ್ಲಿ ಟೀಕೆ
CCTV ವಿಡಿಯೋ ವೈರಲ್ ಆದ ಬಳಿಕ ವ್ಯಕ್ತಿಯ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಹೈರೈಸ್ ಸೊಸೈಟಿಗಳಲ್ಲಿ ಲಿಫ್ಟ್ ಸೇರಿದಂತೆ ಸಾಮಾನ್ಯ ಸ್ಥಳಗಳನ್ನು ಮಕ್ಕಳು, ಹಿರಿಯರು ಸೇರಿದಂತೆ ನೂರಾರು ಮಂದಿ ಬಳಸುತ್ತಾರೆ. ಹೀಗಾಗಿ ಇಂತಹ ವರ್ತನೆಯಿಂದ ಇತರ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂದು ಹಲವರು ಹೇಳಿದ್ದಾರೆ.
ಸಾಮಾನ್ಯವಾಗಿ ಎಲ್ಲರೂ ಬಳಸುವ ಸ್ಥಳಗಳ ಸ್ವಚ್ಛತೆ ಮತ್ತು ಶಿಸ್ತನ್ನು ಕಾಪಾಡಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಯುವಕನಿಗೆ ಎಚ್ಚರಿಕೆ ನೀಡಿದ RWA
ಘಟನೆಗೆ ಸಂಬಂಧಿಸಿದಂತೆ ಸೊಸೈಟಿಯ RWA, ಸಂಬಂಧಪಟ್ಟ ಯುವಕನಿಗೆ ಸಲಹೆ ನೀಡಿ ಇಂತಹ ಕೃತ್ಯವನ್ನು ಮತ್ತೆ ಮಾಡದಂತೆ ಎಚ್ಚರಿಕೆ ನೀಡುವುದಾಗಿ ತಿಳಿಸಿದೆ.
ಲಿಫ್ಟ್ ಮತ್ತು ಇತರ ಸಾಮಾನ್ಯ ಸೌಲಭ್ಯಗಳನ್ನು ಎಲ್ಲ ನಿವಾಸಿಗಳು ಬಳಸುವುದರಿಂದ ಅವುಗಳ ಸ್ವಚ್ಛತೆ ಹಾಗೂ ಶಿಸ್ತನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು RWA ಹೇಳಿದೆ.

