HomeFeatured NewsBEST ಬಸ್ ಚಾಲಕನ ಬೇಜವಾಬ್ದಾರಿ: ಸಾರ್ವಜನಿಕ ಸಾರಿಗೆ ಸಂಸ್ಥೆ ಬಸ್ ನಿಲ್ಲಿಸಿ ಪಾನಿಪೂರಿ ತಿಂದ, ಕಿ.ಮೀ...

BEST ಬಸ್ ಚಾಲಕನ ಬೇಜವಾಬ್ದಾರಿ: ಸಾರ್ವಜನಿಕ ಸಾರಿಗೆ ಸಂಸ್ಥೆ ಬಸ್ ನಿಲ್ಲಿಸಿ ಪಾನಿಪೂರಿ ತಿಂದ, ಕಿ.ಮೀ ಟ್ರಾಫಿಕ್ ಜಾಮ್!

ಸಾರ್ವಜನಿಕ ಸಾರಿಗೆ ಸಂಸ್ಥೆಯ ಚಾಲಕರು ಜವಾಬ್ದಾರಿಯಿಂದ ವರ್ತಿಸಬೇಕು ಎಂಬ ನಿಯಮವಿದೆ. ಆದರೆ ಮುಂಬೈನಲ್ಲಿ ಜರುಗಿರುವ ಈ ಘಟನೆಯನ್ನು ಕೇಳಿದರೆ ನೀವು ನಿಜಕ್ಕೂ ಮೂಗಿನ ಮೇಲೆ ಬೆರಳಿಡುತ್ತೀರಿ. ಕೇವಲ ಒಂದು ಪ್ಲೇಟ್ ‘ಶೇವ್ ಪೂರಿ’ ತಿನ್ನುವ ಆಸೆಗೆ ಬಿದ್ದ ಸರ್ಕಾರಿ ಬಸ್ ಚಾಲಕನೊಬ್ಬ, ನೂರಾರು ವಾಹನಗಳು ಸಂಚರಿಸುವ ಅತ್ಯಂತ ಜನನಿಬಿಡ ರಸ್ತೆಯ ಮಧ್ಯದಲ್ಲೇ ಬಸ್ ನಿಲ್ಲಿಸಿ ಭಾರಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಚಾಲಕನ ಈ ಬೇಜವಾಬ್ದಾರಿತನದಿಂದಾಗಿ ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬೈನ ಮುಲುಂಡ್‌ನ ಎಂ.ಜಿ. ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮುಂಬೈನ ಪ್ರತಿಷ್ಠಿತ ಸಾರಿಗೆ ಸಂಸ್ಥೆಯಾದ ‘ಬೆಸ್ಟ್’ (BEST) ಬಸ್ ಚಾಲಕ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಶೇವ್ ಪೂರಿ ಪಾರ್ಸೆಲ್ ತಂದ ಕಂಡಕ್ಟರ್, ರಸ್ತೆಯಲ್ಲಿ ಟ್ರಾಫಿಕ್ ಜಾಮ್ !

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಮಾಜಿಕ ಜಾಲತಾಣವಾದ ಎಕ್ಸ್ (ಟ್ವಿಟರ್) ನಲ್ಲಿ ವೈರಲ್ ಆಗಿರುವ ವಿಡಿಯೋ ಪ್ರಕಾರ, ಬ್ಯುಸಿ ರಸ್ತೆಯ ಮಧ್ಯದಲ್ಲೇ ಚಾಲಕ ಬಸ್ ನಿಲ್ಲಿಸಿದ್ದಾನೆ. ಈ ವೇಳೆ ಬಸ್‌ನ ಕಂಡಕ್ಟರ್ ರಸ್ತೆ ಬದಿಯ ಅಂಗಡಿಯಿಂದ ಬಿಳಿ ಬಣ್ಣದ ಕವರ್‌ನಲ್ಲಿದ್ದ ಶೇವ್ ಪೂರಿ ಪಾರ್ಸೆಲ್ ತಂದು ಡ್ರೈವರ್‌ಗೆ ನೀಡುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ.

ಬಸ್ ರಸ್ತೆ ಮಧ್ಯದಲ್ಲೇ ಸುಮಾರು 20 ನಿಮಿಷಗಳ ಕಾಲ ನಿಂತಿದ್ದರಿಂದ, ಅದರ ಹಿಂದೆ ಸಾಲು ಸಾಲು ಬಸ್‌ಗಳು ಹಾಗೂ ನೂರಾರು ವಾಹನಗಳು ಸಿಲುಕಿಕೊಂಡು ಸವಾರರು ಪರದಾಡುವಂತಾಯಿತು. ಹಾರ್ನ್ ಸದ್ದು ಮುಗಿಲು ಮುಟ್ಟಿದರೂ ಚಾಲಕ ಮಾತ್ರ ಬಸ್ ಕದಲಿಸದೆ ಮೊಂಡುತನ ಪ್ರದರ್ಶಿಸಿದ್ದಾನೆ.

ಪ್ರಶ್ನಿಸಿದ ಸಾರ್ವಜನಿಕರಿಗೆ ಬಾಯಿಗೆ ಬಂದಂತೆ ಬೈದ ಚಾಲಕ !

ರಸ್ತೆ ಬ್ಲಾಕ್ ಆಗಿದ್ದನ್ನು ಕಂಡು ಸಾರ್ವಜನಿಕರು ಹಾಗೂ ಇತರ ವಾಹನ ಸವಾರರು ಬಸ್ ಬಳಿ ಬಂದು ಚಾಲಕನನ್ನು ಪ್ರಶ್ನಿಸಿದ್ದಾರೆ. ತಪ್ಪು ಒಪ್ಪಿಕೊಂಡು ಕ್ಷಮೆ ಕೇಳುವ ಅಥವಾ ಬಸ್ ಮುನ್ನಡೆಸುವ ಬದಲು, ಚಾಲಕ ಉಲ್ಟಾ ಸಾರ್ವಜನಿಕರ ಮೇಲೆಯೇ ರೇಗಾಡಿದ್ದಾನೆ. ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ವ್ಯಕ್ತಿಯ ಜೊತೆ ತೀವ್ರ ಜಗಳಕ್ಕಿಳಿದ ಚಾಲಕ, ಪ್ರಶ್ನಿಸಿದವರಿಗೆಲ್ಲ ಬಾಯಿಗೆ ಬಂದಂತೆ ಕೆಟ್ಟ ಪದಗಳಿಂದ ನಿಂದಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚಾಲಕನ ಈ ದರ್ಪದ ವಿಡಿಯೋ ಇಂಟರ್ನೆಟ್‌ನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಖಡಕ್ ಆ್ಯಕ್ಷನ್ ತಗೊಂಡ ‘ಬೆಸ್ಟ್’ ಅಧಿಕಾರಿಗಳು

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಇಲಾಖೆಗೆ ಮುಖಭಂಗವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್‌ಪೋರ್ಟ್ (BEST) ಅಧಿಕಾರಿಗಳು, ಚಾಲಕನ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ. ‘ಬೆಸ್ಟ್’ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ತಕ್ಷಣವೇ ಚಾಲಕನ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸುವಂತೆ ಮುಲುಂಡ್ ಡಿಪೋ ಮ್ಯಾನೇಜರ್‌ಗೆ ಸೂಚನೆ ನೀಡಲಾಗಿದೆ,” ಎಂದು ಖಚಿತಪಡಿಸಿದ್ದಾರೆ.

ನೆಟ್ಟಿಗರ ಆಕ್ರೋಶ

ಈ ಘಟನೆಯ ಕುರಿತು ನೆಟ್ಟಿಗರು ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಭಾರತದಲ್ಲಿ ಜನರಿಗೆ ನಾಗರಿಕ ಪ್ರಜ್ಞೆಯೂ ಇಲ್ಲ, ನಿಯಮಗಳ ಭಯವೂ ಇಲ್ಲ. ಸಾರ್ವಜನಿಕ ಸಾರಿಗೆ ಚಾಲಕರ ಇಂತಹ ಗೂಂಡಾಗಿರಿ ನಿಲ್ಲಬೇಕು, ಮುಂಬೈ ಪೊಲೀಸರು ಈ ವಿಡಿಯೋ ಆಧರಿಸಿ ಕಠಿಣ ಶಿಕ್ಷೆ ವಿಧಿಸಬೇಕು,” ಎಂದು ಬಳಕೆದಾರರೊಬ್ಬರು ಒತ್ತಾಯಿಸಿದ್ದಾರೆ. ಮತ್ತೊಬ್ಬರು, “ಇಂತಹ ಸ್ವಾರ್ಥ ಮತ್ತು ಅಹಂಕಾರದ ವರ್ತನೆ ತೋರಿದ ಚಾಲಕನನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಬೇಕು,” ಎಂದು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಕೇವಲ ಒಂದು ಪ್ಲೇಟ್ ಚಾಟ್ಸ್ ತಿನ್ನುವ ಆಸೆಗೆ ಬಿದ್ದು ಇಡೀ ರಸ್ತೆಯನ್ನೇ ಬ್ಲಾಕ್ ಮಾಡಿದ ಚಾಲಕನ ಕಥೆ ಈಗ ಬೀದಿಗೆ ಬಂದಿದೆ.

Mumbai BEST bus driver halts vehicle mid-road on MG Road, Mulund for 20+ mins to buy sev puri, sparking massive traffic jam

Driver allegedly abuses complaining passengers pic.twitter.com/uui1c6hUrZ

— Ghar Ke Kalesh (@gharkekalesh) July 12, 2026

“>View tweet

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular