HomeKarnatakaಜೈಲಿನಿಂದ ಪರಾರಿಯಾಗಿ, 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಅರೆಸ್ಟ್

ಜೈಲಿನಿಂದ ಪರಾರಿಯಾಗಿ, 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಅರೆಸ್ಟ್

ವಿಜಯಪುರ: ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಜೈಲಿನಿಂದ ಪರಾರಿಯಾಗಿ ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದವನು ಈಗ ಮಹಿಳೆಯ ಹಿಂದೆ ಬಿದ್ದು ಬಂಧನಕ್ಕೀಡಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ಬಸವರಾಜ್ ಪಾಟೀಲ್ ಬಂಧಿತ ಕೈದಿ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಈತ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ತಪಾಸಣೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ಬಸವರಾಜ್ ಪಾಟೀಲ್‌ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದ. ಕಳೆದ 12 ವರ್ಷಗಳಿಂದ ನಾಪತ್ತೆಯಾಗಿದ್ದವನನ್ನು ವಿಜಯಪುರ ಜಿಲ್ಲಾ ಪೊಲೀಸ್ ಪಡೆ ಪತ್ತೆ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ಗುರುತು ಬದಲಿಸಿಕೊಂಡು ವಾಸಿಸುತ್ತಿದ್ದ ಆರೋಪಿ ಬಸವರಾಜ್ ಪಾಟೀಲ್‌ನನ್ನು ಫಿಂಗರ್‌ಪ್ರಿಂಟ್ ಸಹಾಯದಿಂದ ಪತ್ತೆಹಚ್ಚಿ, ಸೆರೆಹಿಡಿಯಲಾಗಿದೆ.

2009 ರಲ್ಲಿ ಬಾಗಲಕೋಟೆಯಲ್ಲಿ ಕೃಷಿ ಅಧಿಕಾರಿಯೊಬ್ಬರಿಗೆ ಹನಿಟ್ರ್ಯಾಪ್ ನಡೆಸಿ, ನಂತರ ಅವರನ್ನು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿ ಮುಧೋಳ ಪಟ್ಟಣದ ನಿವಾಸಿ ಬಸವರಾಜ್ ಪಾಟೀಲ್‌ಗೆ ಜೀವಾವಧಿ ಶಿಕ್ಷೆಯಾಗಿತ್ತು. 2014 ರಲ್ಲಿ ವಿಜಯಪುರ ಜಿಲ್ಲಾ ಕಾರಾಗೃಹದಲ್ಲಿದ್ದ ಈತ, ಅನಾರೋಗ್ಯದ ನೆಪ ಹೇಳಿ ಜಿಲ್ಲಾಸ್ಪತ್ರೆಗೆ ಅಡ್ಮಿಟ್ ಆಗಿದ್ದ. ಆಗ ಪೊಲೀಸರ ಕಣ್ಣು ತಪ್ಪಿಸಿ ಅಲ್ಲಿಂದ ನಾಪತ್ತೆಯಾಗಿದ್ದ.

ಬಾಗಲಕೋಟೆ ಜಿಲ್ಲೆಯ ಮುಧೋಳ ನಿವಾಸಿಯಾಗಿದ್ದ ಬಸವರಾಜ್ ಪಾಟೀಲ್ 2009ರಲ್ಲಿ ಬಾಗಲಕೋಟೆ ಕೃಷಿ ಅಧಿಕಾರಿ ಹನಿಟ್ರಾಪ್ ಮತ್ತು ಕೊಲೆ ಕೇಸಿನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿದ್ದ. 2014ರಲ್ಲಿ ವಿಜಯಪುರ ಕೇಂದ್ರ ಕಾರಾಗೃಹದಿಂದ ಆಸ್ಪತ್ರೆಗೆ ಎಂದು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ. ಈ ಸಂದರ್ಭದಲ್ಲಿ ಜೈಲು ಸಿಬ್ಬಂದಿ ಕಣ್ಣು ತಪ್ಪಿಸಿ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಬಳಿಕ 12 ವರ್ಷ ಎಲ್ಲಿ ಹೋದ? ಎನ್ನುವ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ.

ಜೈಲಿಂದ ಪಾರಾರಿಯಾದ ಬಳಿಕ ಕುಟುಂಬದವರ ಸಂಪರ್ಕಕ್ಕೂ ಸಿಗದೇ ಜೀವನ ನಡೆಸುತ್ತಿದ್ದ. ಈ ಕುರಿತು ಖಚಿತ ಮಾಹಿತಿ ವಿಜಯಪುರ ಪೊಲೀಸರಿಗೆ ಸಿಕ್ಕಿತ್ತು. ಕ್ರೈಂ ಥ್ರಿಲ್ಲರ್ ಮೂವಿ ರೀತಿಯಲ್ಲಿ ಜೈಲಿಂದ ಓಡಿ ಹೋದ ಹಂತಕನ ಬೆನ್ನಟ್ಟಿದ ಗಾಂಧಿ ಚೌಕ ಪೊಲೀಸರು ಕೊನೆಗೂ ಆತನನ್ನು ಬಂಧಿಸಿ ಕರೆತಂದಿದ್ದಾರೆ.

ಜೈಲಿಂದ ಪರಾರಿಯಾದ ಬಳಿಕ ಹಂತಕ ಸ್ವಂತ ಕುಟುಂಬದ ಸಂಪರ್ಕವನ್ನೂ ಸಂಪೂರ್ಣವಾಗಿ ಕಟ್ ಮಾಡಿ, ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಸಿದ್ಧಸಮುದ್ರ ಗ್ರಾಮದಲ್ಲಿ ಅಡಗಿದ್ದ. ಗಡ್ಡ-ಕೂದಲು ಬೆಳೆಸಿ, ಅದೇ ಗ್ರಾಮದಲ್ಲಿ ಜಮೀನು ಲೀಜ್‌ಗೆ ಪಡೆದು ರೈತನಂತೆ ಕಾಲ ಕಳೆಯುತ್ತಿದ್ದ. ಆದರೆ ಗದ್ದನಕೇರಿ ಕ್ರಾಸ್‌ನ ಮಹಿಳೆಯೊಬ್ಬಳ ಜೊತೆಗಿದ್ದ ಸಂಪರ್ಕವೇ ಈತನಿಗೆ ಮುಳುವಾಯಿತು. ಅನೈತಿಕ ಸಂಬಂಧದ ಸುಳಿವು ಹಿಡಿದ ಪೊಲೀಸರು ಕೊನೆಗೂ ಬಸವರಾಜ್ ಪಾಟೀಲ್‌ನನ್ನ ಅರೆಸ್ಟ್ ಮಾಡಿದ್ದಾರೆ.

ವಿಜಯಪುರದ ಗಾಂಧಿಚೌಕ್ ಪೊಲೀಸ್ ಠಾಣೆಯ ಸಿಪಿಐ ಪ್ರದೀಪ್ ತಳಕೇರಿ ನೇತೃತ್ವದ ರೌಡಿ ನಿಗ್ರಹ ಪಡೆ ಬಸವರಾಜ್ ಪಾಟೀಲರ ಜಾಡು ಹಿಡಿದು ಹೋದಾಗ ಒಂದು ಕ್ಲ್ಯೂ ಸಿಕ್ಕಿತ್ತು. ಕೈದಿ ಬಸವರಾಜ ಪಾಟೀಲ್ ಬಾಗಲಕೋಟೆ ಜಿಲ್ಲೆ ಗದ್ದನಕೇರಿ ಕ್ರಾಸ್ ಬಳಿಯ ಓರ್ವ ಮಹಿಳೆಯ ಮನೆಗೆ ಬರುತ್ತಾನೆ ಎಂಬ ಮಾಹಿತಿ ಸಿಕ್ಕಿತ್ತು. ಆಗ ಆ ಮಹಿಳೆ ಹೆಸರು ವಿಳಾಸ ಪತ್ತೆ ಮಾಡಿದ ಖಾಕಿ ಪಡೆ ಆಕೆಯ ಕಾಲ್ ಡಿಟೇಲ್ಸ್ ಮೇಲೆ ನಿಗಾ ಇಟ್ಟಿತ್ತು.

ಆ ಮಹಿಳೆ ಕೈದಿ ಬಸವರಾಜನೊಂದಿಗೆ ನಿರಂತರ ಗಂಟೆ ಗಟ್ಟಲೆ ಮಾತನಾಡುವುದು ಕಂಡು ಬಂದಿತ್ತು. ರಾತ್ರಿ ಹೊತ್ತು ದೀರ್ಘಕಾಲ ಸಂಭಾಷಣೆ ನಡೆಸಿದ ನಂಬರ್ ಬಸವರಾಜ್ ಪಾಟೀಲ್ ನದ್ದು ಅಂತಾ ಖಚಿತ ಪಡಿಸಿಕೊಂಡು ಟ್ರೇಸ್ ಮಾಡಿದ್ದಾರೆ. ಆ ನಂಬರ್ ಲೊಕೇಷನ್ ಬೆನ್ನಟ್ಟಿದ ಖಾಕಿ ಪಡೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿ‌ನ ಸಿದ್ಧಸಮುದ್ರ ಗ್ರಾಮದಲ್ಲಿ ಬಸವರಾಜ್ ಇರೋ ಸುಳಿವು ಪತ್ತೆ ಮಾಡಿತ್ತು. ಪೊಲೀಸರು ಬಸವರಾಜ್ ನನ್ನ ಹಿಡಿಯುತ್ತಿದ್ದಂತೆ ನಾನವನಲ್ಲ ಎಂದು ಹೈಡ್ರಾಮಾ ಮಾಡಿದ್ದ. ಆದರೆ ಗಾಂಧಿಚೌಕ ಪೊಲೀಸರು ತಂದಿದ್ದ ಡಿಜಿಟಲ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಈತನ ಅಸಲಿ ಬಣ್ಣ ಬಯಲು ಮಾಡಿದೆ. 2009ರಲ್ಲಿ ಸಂಗ್ರಹಿಸಿದ್ದ ಬೆರಳಚ್ಚು ಮಾದರಿ ಶೇಕಡಾ 100ರಷ್ಟು ಮ್ಯಾಚ್ ಆಗಿತ್ತು. ನಂತರ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಕೈದಿ ಬಸವರಾಜ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸತ್ಯ ಬಾಯ್ಬಿಟ್ಟಿದ್ದಾನೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular