HomeKarnatakaಇಂಧನ ಸಚಿವರ ವಿಶೇಷ ಅಧಿಕಾರಿ ಹೆಸರಲ್ಲಿ ವಂಚನೆ ಯತ್ನ: ಎಫ್ಐಆರ್ ದಾಖಲು

ಇಂಧನ ಸಚಿವರ ವಿಶೇಷ ಅಧಿಕಾರಿ ಹೆಸರಲ್ಲಿ ವಂಚನೆ ಯತ್ನ: ಎಫ್ಐಆರ್ ದಾಖಲು

ಬೆಂಗಳೂರು: ಇಂಧನ ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಎಂದು ಹೇಳಿಕೊಂಡು ವರ್ಗಾವಣೆ ಮಾಡಿಸಿಕೊಡುವ ನೆಪದಲ್ಲಿ ಎಂಜಿನಿಯರ್ ಗಳಿಗೆ ವಂಚಿಸುತ್ತಿದ್ದ ವ್ಯಕ್ತಿ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇಂಧನ ಸಚಿವರ ಕಚೇರಿಯ ಅಧಿಕಾರಿ ಡಿ.ಎಂ. ಸತೀಶ್ ಕುಮಾರ್ ಎಂಬುವರು ನೀಡಿದ ದೂರಿನ ಅನ್ವಯ ರಘುನಂದನ್ ಎಂಬತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ರಘುನಂದನ್ ಎಂಬ ವ್ಯಕ್ತಿ ತಾನು ಇಂಧನ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎಂದು ಹೇಳಿಕೊಂಡು ಬೆಸ್ಕಾಂ ವ್ಯಾಪ್ತಿಯ ಚಿಂತಾಮಣಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಳಾದ ಸೂರ್ಯಪ್ರಕಾಶ್ ಮತ್ತು ಶ್ರೀನಿವಾಸ್ ಕುಮಾರ್ ಅವರಿಗೆ ಆಗಸ್ಟ್ 31 ರಂದು ದೂರವಾಣಿ ಮೂಲಕ ಸಂಪರ್ಕಿಸಿ ವರ್ಗಾವಣೆಗೆ ತಮ್ಮನ್ನು ಭೇಟಿ ಮಾಡಿ ಹಣ ಕೊಡಬೇಕು ಎಂದು ತಿಳಿಸಿದ್ದ.

ಅಲ್ಲದೆ ಚೆಸ್ಕಾಂ ವ್ಯಾಪ್ತಿಯ ಅಧೀಕ್ಷಕ ಎಂಜಿನಿಯರ್ ಸೋಮಶೇಖರ್ ಅವರನ್ನು ಕೂಡ ದೂರವಾಣಿ ಮೂಲಕ ಸಂಪರ್ಕಿಸಿ ವರ್ಗಾವಣೆಗೆ ನನ್ನನ್ನು ಭೇಟಿ ಮಾಡಿ ಇಷ್ಟು ಹಣ ಕೊಡಬೇಕು. ತಪ್ಪಿದಲ್ಲಿ ನಿಮ್ಮನ್ನು ಹಾಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳದಿಂದ ಬೇರೆ ಕಡೆಗೆ ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇಲಾಖೆಯ ಕೆಲವು ಎಂಜಿನಿಯರ್ ಗಳಿಗೆ ವಂಚಿಸಿರುವ ರಘುನಂದನ್ ಇಂಧನ ಇಲಾಖೆಯಲ್ಲಿ ವರ್ಗಾವಣೆ ಮಾಡಿಸಿ ಕೊಡುವುದಾಗಿ ಸುಳ್ಳು ಮಾಹಿತಿ ನೀಡಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವಂಚಿಸುತ್ತಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೊಯ್ಸಳ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಪ್ರದಾನ ಮಾಡಲು ಬಾಲಕರಿಗೆ ಹೊಯ್ಸಳ ಮತ್ತು ಬಾಲಕಿಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಮಕ್ಕಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿ ಸಂಸ್ಥೆಗಳಿಗೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಮಕ್ಕಳ ದಿನಾಚರಣೆ ಕಾರ್ಯಕ್ರಮದಂದು ತಮ್ಮ ಪ್ರಾಣದ ಹಂಗನ್ನು ತೊರೆದು ಇತರರ ಪ್ರಾಣ ರಕ್ಷಣೆಗಾಗಿ ಅಸಾಧಾರಣ ಧೈರ್ಯ-ಸಾಹಸ ಪ್ರದರ್ಶಿಸಿದ 6 ರಿಂದ 18 ವರ್ಷದೊಳಗಿನ ಬಾಲಕರಿಗೆ “ಹೊಯ್ಸಳ” ಮತ್ತು ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ನೀಡಲಾಗುವುದು.

ಮಕ್ಕಳ ಕಲ್ಯಾಣ ಕ್ಷೇತ್ರಗಳಲ್ಲಿ ಕನಿಷ್ಠ 5 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ತಲಾ ರೂ.25000 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಸಂಸ್ಥೆಗಳಿಗೆ ತಲಾ ರೂ.1 ಲಕ್ಷ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದ ಅರ್ಹ ವ್ಯಕ್ತಿ ಹಾಗೂ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಗಳನ್ನು ಪಡೆದು ಕನ್ನಡ ಭಾಷೆಯಲ್ಲಿ ಭರ್ತಿಮಾಡಿ ದ್ವಿ-ಪ್ರತಿಯಲ್ಲಿ ಸೆ.21 ರೊಳಗಾಗಿ  ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ: 08192-264056 ಇಲ್ಲಿಗೆ ಸಲ್ಲಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular