ಬೆಂಗಳೂರು: ಕುಡಿದು ಗಲಾಟೆ ಮಾಡಿದ ಐಎಎಸ್ ಅಧಿಕಾರಿ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಐಎಎಸ್ ಅಧಿಕಾರಿ ವಿಕಾಸ್ ಮರ್ಮಠ್ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಾಗಿದೆ. ವಿಕಾಸ್ ಮರ್ಮಠ್ ಮತ್ತು ಅವರ ಗೆಳೆಯರಾದ ನಿತೇಶ್, ಅಭಯ್, ಉದಯ ಸಿಂಗ್, ರೋಷನ್ ವಿರುದ್ಧ ಕೇಸು ದಾಖಲಾಗಿದೆ.
ವಿಕಾಸ್ ಮರ್ಮಠ್ ಪಬ್ ಗೆ ತೆರಳಿದ್ದು, ರಾತ್ರಿ 1.30 ರ ವೇಳೆ ಪಬ್ ಪರಿಶೀಲನೆ ಮಾಡಲು ಸಿಸಿಬಿ ಪೊಲೀಸರು ತೆರಳಿದ್ದರು. ಈ ವೇಳೆ ಐಡಿ ಕಾರ್ಡ್ ಕೇಳಿದ್ದಕ್ಕೆ ಕೋಪಗೊಂಡು ವಿಕಾಸ್ ಬೈದಾಡಿದ್ದರು. ಪ್ರಶ್ನೆ ಮಾಡಲು ಹೋದ ಇನ್ಸ್ಪೆಕ್ಟರ್ ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿದ್ದರು. ನಾವು ಐಎಎಸ್ ಅಧಿಕಾರಿ ಏನು ಮಾಡ್ತೀನಿ ನೋಡಿ ಎಂದು ಆವಾಜ್ ಹಾಕಿದ್ದರು. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆಂಧ್ರಪ್ರದೇಶದ ಕುಪ್ಪಂನಲ್ಲಿ ವಿಶೇಷ ಅಧಿಕಾರಿಯಾಗಿ ವಿಕಾಸ್ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕಷ್ಟ ಹೇಳಿಕೊಂಡು ಬಂದ ಮಹಿಳೆ ಜತೆ ಅನುಚಿತ ವರ್ತನೆ, ಅತ್ಯಾಚಾರ: ಆರೋಪಿ ಅರೆಸ್ಟ್
ಚಿಕ್ಕಮಗಳೂರು: ಅತ್ಯಾಚಾರ ಆರೋಪದಡಿ ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ಮೇಕನಹಡ್ಲು ಗ್ರಾಮದ ಎಸ್. ಸತೀಶ್ ಕುಮಾರ್ ಅಲಿಯಾಸ್ ಸತೀಶ್ ಪಾತ್ರಿ ಎಂಬುವನನ್ನು ಕೊಪ್ಪ ಠಾಣೆ ಪೊಲೀಸರು ಬಂಧಿಸಿದ್ದು, ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಎನ್ಆರ್ ಪುರ ತಾಲೂಕು ಮೇಕನಹಡ್ಲು ಗ್ರಾಮದ ಸತೀಶ್ ಪಾತ್ರಿ ತನ್ನ ಮೈಮೇಲೆ ಗಣ ಬರುತ್ತದೆ. ನಿಮ್ಮ ಕಷ್ಟಗಳನ್ನು ಪರಿಹರಿಸುತ್ತೇನೆ ಎಂದು ಜನರನ್ನು ನಂಬಿಸಿದ್ದ. ಇದನ್ನು ನಂಬಿದ ಕೆಲವರು ಈತನ ಬಳಿ ಬಂದು ಕಷ್ಟ ಹೇಳಿಕೊಳ್ಳುತ್ತಿದ್ದರು.
ಇದನ್ನೇ ಬಂಡವಾಳ ಮಾಡಿಕೊಂಡ ಸತೀಶ್ ಪಾತ್ರಿ ಹೀಗೆ ಕಷ್ಟ ಹೇಳಿಕೊಂಡು ಬರುತ್ತಿದ್ದ ಮಹಿಳೆಯರೊಂದಿಗೆ ಸತೀಶ್ ಪಾತ್ರಿ ಅನುಚಿತವಾಗಿ ವರ್ತಿಸುತ್ತಿದ್ದ. ಈ ಹಿಂದೆ ನರಸಿಂಹರಾಜಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಂತರವೂ ಇದನ್ನೇ ಮುಂದುವರಿಸಿದ್ದ ಸತೀಶ್ ಪಾತ್ರಿ ಹಾಸನದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅವರು ಕೊಪ್ಪ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಾದ ನಂತರ ಸುಮಾರು ಒಂದೂವರೆ ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ ಸತೀಶ್ ಪಾತ್ರಿ ಬೆಂಗಳೂರಿನ ಜೆಪಿ ನಗರದಲ್ಲಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕೊಪ್ಪ ಎಸ್ಐ ಮಧು ಮತ್ತು ಸಿಬ್ಬಂದಿ ಬಂಧಿಸಿ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ನಗರ ಪ್ರದೇಶದ ವಸತಿ ಮತ್ತು ನಿವೇಶನ ರಹಿತ ಕುಟುಂಬಗಳಿಂದ ಅರ್ಜಿ ಆಹ್ವಾನ
ಮಡಿಕೇರಿ: ರಾಜ್ಯ ಸರ್ಕಾರದ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ಮೂಲಕ ಪ್ರಧಾನಮಂತ್ರಿ ಆವಾಸ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆ(ನಗರ) 2.0 ಅಡಿಯಲ್ಲಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ವಸತಿ ರಹಿತ(ನಿವೇಶನ/ ಕಚ್ಚಾ ಮನೆ ಹೊಂದಿರುವ) ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರದ https/pmay.urban.gov.in ಪೋರ್ಟಲ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ನಗರಸಭೆ, ಮಡಿಕೇರಿ, ಪುರಸಭೆ ಕುಶಾಲನಗರ ಮತ್ತು ವಿರಾಜಪೇಟೆ ಹಾಗೂ ಪಟ್ಟಣ ಪಂಚಾಯಿತಿ ಸೋಮವಾರಪೇಟೆ ಮತ್ತು ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಇದುವರೆಗೂ ಯಾವುದೇ ವಸತಿ ಯೋಜನೆಗಳ ಸೌಲಭ್ಯ ಪಡೆಯದೇ ಇರುವ ಕುಟುಂಬದ ಮುಖ್ಯಸ್ಥ ಮಹಿಳೆಯರು, ಹಿರಿಯ ನಾಗರಿಕರು, ವಿಧುರರು, ವಿಶೇಷ ಚೇತನರು ಹಾಗೂ ಮಾಜಿ ಸೈನಿಕರುಗಳು ಬಿಎಲ್‍ಸಿ ಘಟಕದಡಿ-ನಿವೇಶನ/ ಕಚ್ಚಾ ಮನೆ ಹೊಂದಿರುವ ವಸತಿ ರಹಿತರು ಹೊಸ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನ ಪಡೆಯಲು, ಎಎಚ್‍ಪಿ ಘಟಕದಡಿ-ನಿವೇಶನ ರಹಿತರು, ಐಎಸ್‍ಎಸ್ ಘಟಕದಡಿ ವಸತಿ ನಿರ್ಮಾಣದ ಬ್ಯಾಂಕಿಂಗ್ ಸಾಲದಲ್ಲಿ ಬಡ್ಡಿ ಸಬ್ಸಿಡಿ ಸೌಲಭ್ಯ ಪಡೆಯಲು ಅವಕಾಶವಿದ್ದು, ಎಲ್ಲಾ ವಸತಿ ರಹಿತ ಹಾಗೂ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ (ವಿಶೇಷವಾಗಿ ಸಪಾಯಿ ಕರ್ಮಚಾರಿಗಳು, ಬೀದಿ ಬದಿ ವ್ಯಾಪಾರಿಗಳು, ಪಿ.ಎಂ. ವಿಶ್ವಕರ್ಮ ಯೋಜನೆಯ ಫಲಾನುಭವಿಗಳು, ಕಟ್ಟಡ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರು ಮತ್ತು ಕೊಳಚೆ ಪ್ರದೇಶ ನಿವಾಸಿಗಳು ಸೇರಿದಂತೆ) ವಸತಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಹಾಗೂ ಅರ್ಜಿದಾರರು ನಿಗದಿತ ನಮೂನೆಯಲ್ಲಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ವಸತಿ ಶಾಖೆಗೆ ಅರ್ಜಿದಾರರ ಫೆÇೀಟೋ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಓಟರ್ ಐಡಿ, ಬ್ಯಾಂಕ್ ಪಾಸ್ ಪುಸ್ತಕ, ಕುಟುಂಬದವರ ಆಧಾರ್ ಕಾರ್ಡ್ ಹಾಗೂ ನಿವೇಶನ ಅಥವಾ ಕಚ್ಚಾ ಮನೆಯ ದಾಖಲೆಗಳನ್ನು ಸಲ್ಲಿಸಲು ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಆಯಾಯ ನಗರ ಸ್ಥಳೀಯ ಸಂಸ್ಥೆಗಳ ವಸತಿ ಶಾಖೆಯನ್ನು ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಿಎಲ್‍ಟಿಸಿ ಕೋಶವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಂಜುನಾಥ್ ರಾಮಣ್ಣ ಅವರು ತಿಳಿಸಿದ್ದಾರೆ.

