HomeKarnatakaBREAKING: ತುಳು ಭಾಷೆಗೆ ಮಾನ್ಯತೆ: ರಾಜ್ಯದ 2ನೇ ಹೆಚ್ಚುವರಿ ಭಾಷೆ ಎಂದು ಘೋಷಣೆ

BREAKING: ತುಳು ಭಾಷೆಗೆ ಮಾನ್ಯತೆ: ರಾಜ್ಯದ 2ನೇ ಹೆಚ್ಚುವರಿ ಭಾಷೆ ಎಂದು ಘೋಷಣೆ

ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ವಿಶೇಷ ಸಚಿವ ಸಂಪುಟ ಸಭೆ ನಡೆದಿದ್ದು, ಕರಾವಳಿ ಅಭಿವೃದ್ಧಿಗೆ ಸಂಬಂಧಿಸಿದಂತೆ 40 ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ‘ಪ್ರಜಾಸೌಧ’ದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಐತಿಹಾಸಿಕ ಸಚಿವ ಸಂಪುಟ ಸಭೆ ನಡೆಯಿತು. ಸಂಪುಟ ಸಭೆ ಬಳಿಕ ಸಿದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ತುಳು ಭಾಷೇಗೆ ಮಾನ್ಯತೆ ನೀಡಬೇಕು ಎಂಬುದು ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಬಗ್ಗೆ ಯಾಕೆ ನಿರ್ಧಾರ ಕೈಗೊಂಡಿಲ್ಲ ಎಂಬುದನ್ನು ನಾವು ಚರ್ಚಿಸಲು ಹೋಗಲ್ಲ. ನಮ್ಮ ಸರ್ಕಾರದಲ್ಲಿ ತುಳು ಭಾಷೆಗೆ ಮಾನ್ಯತೆ ನೀಡುವ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

ತುಳು ಭಾಷೆಯನ್ನು ರಾಜ್ಯದ 2ನೇ ಹೆಚ್ಚುವರಿ ಭಾಷೆ ಎಂದು ಘೋಷಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಅನ್ವಯವಾಗುವಂತೆ ತುಳುವನ್ನು ಎರಡನೇ ಹೆಚ್ಚುವರಿ ಭಾಷೆ ಎಂದು ಪರಿಗಣಿಸಲಾಗುವುದು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಕರೆಯಬೇಕೆಂದು ಚರ್ಚಿಸಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಎಂದು ಘೋಷಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ದಕ್ಷಿಣ ಕನ್ನಡ ಎಂದು ಈ ಹಿಂದೆ ಯಾವಾಗ, ಹೇಗೆ ಬಂತು ಎಂದು ಚರ್ಚಿಸಲ್ಲ. ಒಂದು ತಿಂಗಳ ಒಳಗಾಗಿ ಮಂಗಳೂರು ಎಂದು ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಭಾಗದ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ನಿಟ್ಟಿನಲ್ಲಿಯೂ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಕರಾವಳಿ ಅಭಿವೃದ್ಧಿಗೆ ಸಂಪುಟ ಸಭೆಯಲ್ಲಿ 32,611 ಕೋಟಿ ರೂ ಯೋಜನೆಗಳಿಗೆ ಅಧಿಕೃತ ಅನುಮೋದನೆ ನೀಡಲಾಗಿದೆ. ಈ ಪೈಕಿ 16,000 ಕೋಟಿ ರೂ ಗ್ರಾಮೀಣಾಭಿವೃದ್ಧಿಗೆ ಹಾಗೂ ಉಳಿದ 16,000 ಕೋಟಿ ರೂ ಕರಾವಳಿ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಇದರಲ್ಲಿ ರಸ್ತೆ ಅಭಿವೃದ್ಧಿಗಾಗಿಯೇ 14,000 ಕೋಟಿ ರೂ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.

ಮಲೆನಾಡು ಮತ್ತು ಕರಾವಳಿ ಪ್ರದೇಶಗಳನ್ನು ಒಳಗೊಂಡಂತೆ ಹೊಸ ಟೂರಿಸಂ ನೀತಿಯನ್ನು ಮೂಲಸೌಕರ್ಯ ಯೋಜನೆಯನ್ನಾಗಿ ರೂಪಿಸಿ ಜಾರಿಗೆ ತರಲಾಗುತ್ತಿದೆ. ಮೀನುಗಾರಿಕೆ, ಸಾಗರ ಅಧ್ಯಯನ ಮತ್ತು ಬ್ಲೂ ಎಕನಾಮಿಕ್ಸ್‌ಗಾಗಿ ಪ್ರತ್ಯೇಕ ಯೂನಿವರ್ಸಿಟಿ ಸ್ಥಾಪಿಸಲಾಗುವುದು ಹಾಗೂ ಸೀಟುಗಳ ಸಂಖ್ಯೆಯನ್ನು 60 ರಿಂದ 200ಕ್ಕೆ ಹೆಚ್ಚಿಸಲಾಗುವುದು. ಇನ್ನು ಮಂಗಳೂರಿನಲ್ಲಿ ಕಿದ್ವಾಯಿ ಮತ್ತು ಜಯದೇವ ಆಸ್ಪತ್ರೆಗಳ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಇನ್ನು ಮುಂದಿನ 15 ತಿಂಗಳಲ್ಲಿ ರಾಜ್ಯದ 10 ರಿಂದ 12 ಜಿಲ್ಲೆಗಳಲ್ಲಿ ಇದೇ ರೀತಿ ಸಂಪುಟ ಸಭೆಗಳನ್ನು ನಡೆಸಿ ಪ್ರಾದೇಶಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular