ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ನೂರಾರು ವೀಡಿಯೋಗಳು ವೈರಲ್ ಆಗುತ್ತವೆ. ಆದರೆ ಜಾರ್ಖಂಡ್‌ನ ಗ್ರಾಮೀಣ ಭಾಗದ ಯುವಕನೊಬ್ಬ ಹಂಚಿಕೊಳ್ಳುತ್ತಿರುವ ದೃಶ್ಯಗಳು ಈಗ ಇಡೀ ದೇಶದ ಗಮನ ಸೆಳೆದಿವೆ. ಬರಿಗಾಲಿನಲ್ಲಿ ಕೆಸರು ಗದ್ದೆಯಲ್ಲಿ ಇಳಿದು ಬೆಳೆ ಬೆಳೆಯುವ ಯುವಕನೊಬ್ಬ, ಮರುಕ್ಷಣದಲ್ಲೇ ಅಂತಾರಾಷ್ಟ್ರೀಯ ಮಟ್ಟದ ಮಾಡೆಲ್‌ನಂತೆ ವಿವಿಧ ಶೈಲಿಯ ಉಡುಪುಗಳಲ್ಲಿ ಮಿಂಚುವ ಮೂಲಕ ನೆಟ್ಟಿಗರ ಮನಗೆದ್ದಿದ್ದಾನೆ.
ಜಾರ್ಖಂಡ್ ರಾಜ್ಯದ ಸಿಮ್‌ಡೇಗಾ ಜಿಲ್ಲೆಯ ಅಘರ್ಮಾ ಗ್ರಾಮದ ನಿವಾಸಿ, ಇಪ್ಪತ್ತನಾಲ್ಕು ವರ್ಷದ ನಿಶಾಂತ್ ಕೆರ್ಕೆಟ್ಟಾ ಈ ಹೊಸ ಫ್ಯಾಷನ್ ಸಂಚಲನಕ್ಕೆ ಕಾರಣಕರ್ತನಾದ ಯುವಕ. ನಿಶಾಂತ್ ಹಂಚಿಕೊಂಡಿರುವ ಇತ್ತೀಚಿನ ವೀಡಿಯೋ ಒಂದರಲ್ಲಿ, ಅವರು ಕೇವಲ ಚೆಡ್ಡಿ ಧರಿಸಿ ಬರಿಗಾಲಿನಲ್ಲಿ ಗದ್ದೆಯಲ್ಲಿ ಬೀಜ ಬಿತ್ತನೆ ಮಾಡುತ್ತಿರುವುದು ಕಂಡುಬರುತ್ತದೆ. ಆರಂಭದಲ್ಲಿ ಇದು ಸಾಮಾನ್ಯ ಕೃಷಿ ವೀಡಿಯೋದಂತೆ ಕಂಡರೂ, ಕೆಲವೇ ಕ್ಷಣಗಳಲ್ಲಿ ವೀಡಿಯೋದ ಶೈಲಿ ಸಂಪೂರ್ಣವಾಗಿ ಬದಲಾಗುತ್ತದೆ.
ವೀಡಿಯೋದ ಮುಂದಿನ ಭಾಗದಲ್ಲಿ ನಿಶಾಂತ್ ನೀಲಿ ಬಣ್ಣದ ಶರ್ಟ್ ಹಾಗೂ ಅಗಲವಾದ ಪ್ಯಾಂಟ್ ಧರಿಸಿ ಮನೆ ಎದುರು ಭಂಗಿ ನೀಡಿದ್ದಾರೆ. ತದನಂತರ ಬಿಳಿ ಶರ್ಟ್, ಟೈ ಹಾಗೂ ಉದ್ದನೆಯ ಕೋಟ್ ಧರಿಸಿ ಅತ್ಯಂತ ಗಂಭೀರ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಕಪ್ಪು ಸೂಟ್, ಬಿಳಿ ಶರ್ಟ್ ಹಾಗೂ ಕಣ್ಣಿಗೆ ಚಸ್ಮಾ ಧರಿಸಿ ಸೂಪರ್ ಮಾಡೆಲ್ ರೀತಿಯಲ್ಲೇ ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ. ಈ ವೀಡಿಯೋ ಈಗಾಗಲೇ ಹನ್ನೊಂದು ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ನಿಶಾಂತ್ ಅವರ ಈ ವಿಶಿಷ್ಟ ಶೈಲಿಗೆ ಸಾಮಾನ್ಯ ನೆಟ್ಟಿಗರು ಮಾತ್ರವಲ್ಲದೆ ಬಾಲಿವುಡ್ ತಾರೆಯರೂ ಫಿದಾ ಆಗಿದ್ದಾರೆ. ನಟಿ ಭೂಮಿ ಪೆಡ್ನೇಕರ್, ಶಿಬಾನಿ ದಂಡೇಕರ್, ಅನುಷಾ ದಂಡೇಕರ್ ಸೇರಿದಂತೆ ಹಲವು ಪ್ರಸಿದ್ಧ ಕಲಾವಿದರು ಈ ವೀಡಿಯೋಗೆ ಮೆಚ್ಚುಗೆಯ ಕಮೆಂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದ ಬಳಕೆದಾರರು ಇವರನ್ನು ‘ಆರಾ ಫಾರ್ಮರ್’ ಎಂದು ಪ್ರೀತಿಯಿಂದ ಕರೆಯುತ್ತಿದ್ದಾರೆ.
ನಿಶಾಂತ್ ಅವರ ಈ ಯಶಸ್ಸಿನ ಹಿನ್ನೆಲೆಯಲ್ಲಿ ದೊಡ್ಡ ಕಷ್ಟದ ಕಥೆಯಿದೆ. ಪದವಿ ಶಿಕ್ಷಣ ಮುಗಿಸಿ ನಗರದಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಕನಸು ಕಾಣುತ್ತಿದ್ದ ನಿಶಾಂತ್ ಅವರಿಗೆ ತಂದೆಯ ಅನಾರೋಗ್ಯ ಅಡ್ಡಿಯಾಯಿತು. ತಂದೆಯವರು ಪಾರ್ಶ್ವವಾಯು ಪೀಡಿತರಾದಾಗ, ಕುಟುಂಬದ ಕೃಷಿ ಜವಾಬ್ದಾರಿಯನ್ನು ಹೊರಲು ನಿಶಾಂತ್ ಸ್ವಗ್ರಾಮಕ್ಕೆ ಮರಳಿದರು. ಪ್ರಸ್ತುತ ಕುಟುಂಬದ ನಾಲ್ಕು ಎಕರೆ ಜಮೀನಿನಲ್ಲಿ ರಾಗಿ, ಭತ್ತ ಹಾಗೂ ತರಕಾರಿ ಬೆಳೆಯುತ್ತಾ, ತಮ್ಮ ಫ್ಯಾಷನ್ ಮತ್ತು ಫಿಟ್‌ನೆಸ್ ಪ್ರೇಮವನ್ನು ಜೀವಂತವಾಗಿರಿಸಿಕೊಂಡು ದೇಶಾದ್ಯಂತ ಅಪಾರ ಮೆಚ್ಚುಗೆ ಗಳಿಸುತ್ತಿದ್ದಾರೆ.

