ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಹೊರಬಿದ್ದಿದ್ದು, 2027ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ವೇಳಾಪಟ್ಟಿಯಂತೆ ಫೆಬ್ರವರಿ 27ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, ಮಾರ್ಚ್ 17ರಂದು ಹಿಂದಿ ಪರೀಕ್ಷೆಯೊಂದಿಗೆ ಪರೀಕ್ಷೆ-1ಕ್ಕೆ ತೆರೆ ಬೀಳಲಿದೆ.
ಎಲ್ಲಾ ಪರೀಕ್ಷೆಗಳು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿವೆ. ಫೆಬ್ರವರಿ 27ರಂದು ಕನ್ನಡ ಮತ್ತು ಅರೇಬಿಕ್ ವಿಷಯಗಳ ಪರೀಕ್ಷೆಯೊಂದಿಗೆ ಪರೀಕ್ಷೆ ಆರಂಭವಾಗಲಿದೆ. ಮಾರ್ಚ್ 1ರಂದು ಇಂಗ್ಲಿಷ್, ಮಾರ್ಚ್ 2ರಂದು ಪ್ರಾದೇಶಿಕ ಭಾಷೆಗಳ ಪರೀಕ್ಷೆ ನಡೆಯಲಿದೆ.
ಪರೀಕ್ಷೆಗಳ ದಿನಾಂಕ ಮತ್ತು ವಿಷಯಗಳು
ಫೆ.27: ಕನ್ನಡ, ಅರೇಬಿಕ್
ಮಾ.1: ಇಂಗ್ಲಿಷ್
ಮಾ.2: ಪ್ರಾದೇಶಿಕ ಭಾಷೆಗಳು
ಮಾ.3: ಭೂಗೋಳಶಾಸ್ತ್ರ, ಮನಶಾಸ್ತ್ರ, ಸಮಾಜಶಾಸ್ತ್ರ, ಭೌತಶಾಸ್ತ್ರ
ಮಾ.5: ಲೆಕ್ಕಶಾಸ್ತ್ರ
ಮಾ.6: ಮಹಾಶಿವರಾತ್ರಿ ಹಿನ್ನೆಲೆ ಪರೀಕ್ಷೆ ಇರುವುದಿಲ್ಲ
ಮಾ.8: ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲಗಣಿತ
ಮಾ.9: ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ
ಮಾ.11: ಹಿಂದೂಸ್ತಾನಿ ಸಂಗೀತ ಹಾಗೂ ವೃತ್ತಿಪರ ವಿಷಯಗಳು
ಮಾ.12: ವ್ಯವಹಾರ ಅಧ್ಯಯನ, ಗಣಿತ
ಮಾ.13: ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹ ವಿಜ್ಞಾನ
ಮಾ.15: ರಾಜ್ಯಶಾಸ್ತ್ರ, ಜೀವಶಾಸ್ತ್ರ, ಗಣಕಶಾಸ್ತ್ರ
ಮಾ. 16 ಇತಿಹಾಸ, ಸಂಖ್ಯಾಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ
ಮಾ.17: ಹಿಂದಿ
ಮಾರ್ಚ್ 6ರಂದು ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಯಾವುದೇ ಪರೀಕ್ಷೆ ನಡೆಯುವುದಿಲ್ಲ. ಉಳಿದಂತೆ ನಿಗದಿತ ದಿನಾಂಕಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಪರೀಕ್ಷೆಗಳು ನಡೆಯಲಿವೆ.
ವಿದ್ಯಾರ್ಥಿಗಳು ತಾತ್ಕಾಲಿಕ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷಾ ಸಿದ್ಧತೆಯನ್ನು ಆರಂಭಿಸುವಂತೆ ಸೂಚಿಸಲಾಗಿದೆ. ಅಂತಿಮ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಾದಲ್ಲಿ ಮಂಡಳಿಯಿಂದ ಅಧಿಕೃತವಾಗಿ ಮಾಹಿತಿ ನೀಡಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಮಂಡಳಿಯ ಅಧಿಕೃತ ಪ್ರಕಟಣೆಗಳನ್ನು ಗಮನಿಸುವಂತೆ ಸೂಚಿಸಲಾಗಿದೆ.
ಅಕ್ಟೋಬರ್ 11 ರಂದು ಕೆ-ಸೆಟ್ ಪರೀಕ್ಷೆ
ಶಿವಮೊಗ್ಗ: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)-2026ರ ಪರೀಕ್ಷೆಯು ನಗರದಲ್ಲಿ ಅಕ್ಟೋಬರ್ 11 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ನಡೆಯಲಿದ್ದು, ಪರೀಕ್ಷೆಯನ್ನು ಪಾರದರ್ಶಕವಾಗಿ ಹಾಗೂ ಸುಗಮವಾಗಿ ನಡೆಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ತಿಳಿಸಿದರು.
ಪರೀಕ್ಷೆಗೆ ಸಂಬಂಧಿಸಿದಂತೆ ಗುರುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರೀಕ್ಷಾ ಕೇಂದ್ರಗಳು: ಶಿವಮೊಗ್ಗ ನಗರದಲ್ಲಿ ಮಾತ್ರವೇ ಒಟ್ಟು 22 ಪರೀಕ್ಷಾ ಕೇಂದ್ರಗಳನ್ನು ನಿಯೋಜಿಸಲಾಗಿದೆ.
ಅಭ್ಯರ್ಥಿಗಳ ಸಂಖ್ಯೆ: ಈ ಪರೀಕ್ಷೆಗೆ ಒಟ್ಟು 6,588 ಅಭ್ಯರ್ಥಿಗಳು ಹಾಜರಾಗಲಿದ್ದಾರೆ.
ಭದ್ರತೆ ಮತ್ತು ನಿಷೇಧಾಜ್ಞೆ: ಪರೀಕ್ಷೆಯು ನ್ಯಾಯಸಮ್ಮತವಾಗಿ ನಡೆಯಲು ಪರೀಕ್ಷಾ ದಿನದಂದು ಬೆಳಿಗ್ಗೆ 09.00 ರಿಂದ ಮಧ್ಯಾಹ್ನ 02.00 ಗಂಟೆಯವರೆಗೆ ಎಲ್ಲಾ 22 ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್)-2023 ರ ಸೆಕ್ಷನ್ 163 ರಡಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಪರೀಕ್ಷಾ ವ್ಯವಸ್ಥೆ: ಪ್ರಶ್ನೆಪತ್ರಿಕೆ ವಿತರಣೆಗೆ ಒಟ್ಟು 07 ಮಾರ್ಗಗಳನ್ನು ಗುರುತಿಸಲಾಗಿದೆ. ಪ್ರಶ್ನೆಪತ್ರಿಕೆ ಸಾಗಾಟಕ್ಕಾಗಿ ತ್ರಿ-ಸದಸ್ಯ ಸಮಿತಿ ಹಾಗೂ ವಾಹನಕ್ಕೆ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ‘ವೆಬ್ ಕಾಸ್ಟಿಂಗ್’ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳನ್ನು ಪರೀಕ್ಷಾ ಕೊಠಡಿಗೆ ಬಿಡುವ ಮುನ್ನ ‘ಹಾಲ್ ಟಿಕೆಟ್ ಸ್ಕ್ಯಾನ್’ ಹಾಗೂ ‘ಫೇಸ್ ರೆಕಗ್ನಿಷನ್’ ಮೂಲಕ ಪರಿಶೀಲನೆ ನಡೆಸಲಾಗುತ್ತದೆ. ಪ್ರತಿ 05 ಕೇಂದ್ರಗಳಿಗೆ 1 ರಂತೆ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಸೂಕ್ತ ಉಡುಪು ಪರಿಶೀಲನೆಗೆ ‘ಡ್ರೆಸ್ ಕೋಡ್ ಆಫೀಸರ್’ ಅವರನ್ನು ನೇಮಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಒಳಗೆ ಮೊಬೈಲ್, ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅವಕಾಶವಿರುವುದಿಲ್ಲ. ಪರೀಕ್ಷಾ ಸಮಯದಲ್ಲಿ ತಡೆರಹಿತ ವಿದ್ಯುತ್ ಪೂರೈಕೆಗೆ ಮೆಸ್ಕಾಂ ಇಲಾಖೆಗೆ ನಿರ್ದೇಶಿಸಲಾಗಿದೆ ಎಂದ ಅವರು ಶಾಂತಿಯುತವಾಗಿ ಹಾಗೂ ಸುಗಮವಾಗಿ ಪರೀಕ್ಷೆ ನಡೆಯಲು ಅಗತ್ಯವಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡು ಯಶಸ್ವಿಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಖಜಾನೆ ಅಧಿಕಾರಿ ಸಾವಿತ್ರಿ, ಪರೀಕ್ಷೆಗೆ ನಿಯೋಜಿಸಲಾದ ಅಧಿಕಾರಿಗಳು ಹಾಜರಿದ್ದರು.
📄 Official Documents / Supporting Documents

