ಬೆಂಗಳೂರು: ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ನಲ್ಲಿ ಕಿಡಿಗೇಡಿ ಯುವಕನೊಬ್ಬ ಅವಹೇಳನಕಾರಿ ಪೋಸ್ಟ್ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಯುವಕನನ್ನು ತರಾಟೆಗೆ ತೆಗೆದುಕೊಂಡಿದೆ.
ಪುನೀತ್ ರಾಜ್ ಕುಮಾತ್ ನಿಧನದ ಸಮಯದಲ್ಲಿ ಇನ್ ಸ್ಟಾಗ್ರಾಮ್ ನಲ್ಲಿ ಬೆಂಗಳೂರು ಮೂಲದ ಯುವಕ ರಿತ್ವಿಕ್ ಶರ್ಮಾ ಅವಹೇಳನಕಾರಿ ಪೋಸ್ಟ್ ಹಾಕಿದ್ದ. ಬೀಯರ್ ಬಾಟಲ್ ಜೊತೆ ಪುನೀತ್ ರಾಜ್ ಕುಮಾರ್ ಭಾವಚಿತ್ರದ ಪೋಸ್ಟ್ ಮಾಡಿದ್ದ. ಇದಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಯುವಕ ರಿತ್ವಿಕ್ ಶರ್ಮಾ, ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, ಯುವಕನನ್ನು ತರಾಟೆಗೆ ತೆಗೆದುಕೊಂಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಏನುಬೇಕಾದರೂ ಹಾಕಬಹುದು ಎಂದುಕೊಂಡಿದ್ದೀರಾ? ಸಾಮಾಜಿಕ ಜಾಲತಾಣಗಳನ್ನು ಬಳಸಲು ಮುಕ್ತ ಅವಕಾಶವಿದೆ ಎಂದ ಮಾತ್ರಕ್ಕೆ ಇಂತಹ ವಿಕೃತ ಸಂದೇಶಗಳನ್ನು ಪೋಸ್ಟ್ ಮಾಡುತ್ತೀರಾ? ಗೌರವಾನ್ವಿತ ನಟನ ಸಾವಿನ ಬಳಿಕ ಇಂತಹ ಪೋಸ್ಟ್ ಮಾಡಿರುವುದು ಬೇಸರದ ವಿಚಾರ ಎಂದು ಕಿಡಿಕಾರಿದೆ.
ಪುನೀತ್ ರಾಜ್ಕುಮಾರ್ ಅವರು ಮೇರುನಟ ಡಾ. ರಾಜ್ಕುಮಾರ್ ಅವರ ಪುತ್ರ. ಅವರು ನಿಧನರಾದ ಸಂದರ್ಭದಲ್ಲಿ ಇಂತಹ ಆಕ್ಷೇಪಾರ್ಹ ಪದ ಬಳಕೆ ಮಾಡಬಹುದೇ? ಯಾವ ರೀತಿಯ ಪದ ಬಳಸಲಾಗಿದೆ ಎಂಬುದು ನಿಮಗೆ ಗೊತ್ತೇ? ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದೆ.
ಅರ್ಜಿದಾರ ರಿತ್ವಿಕ್ ಪರ ವಕೀಲೆ ಪದ್ಮಾವತಿ ವಾದ ಮಂಡಿಸಿದ್ದು, ಕಕ್ಷಿದಾರರಾದ ರಿತ್ವಿಕ್ ಲಂಡನ್ನಲ್ಲಿ ಹುಟ್ಟಿ ಬೆಳೆದಿದ್ದು, ಎರಡು ವರ್ಷಗಳ ಹಿಂದಷ್ಟೇ ಭಾರತಕ್ಕೆ ಮರಳಿದ್ದಾರೆ. ಅವರಿಗೆ ಈ ಪೋಸ್ಟ್ನ ಗಂಭೀರ ಪರಿಣಾಮಗಳ ಅರಿವಿರಲಿಲ್ಲ. ಈ ಪೋಸ್ಟ್ ಅನ್ನು ಆತನ ಸ್ನೇಹಿತ ಮಾಡಿದ್ದಾನೆ. ಆದರೂ ತನ್ನ ಪ್ರಮಾದವನ್ನು ಒಪ್ಪಿಕೊಂಡು ರಿತ್ವಿಕ್ ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದರು.
ರಿತ್ವಿಕ್ ಸಂಗೀತಗಾರ, ಅಶೋಕ ವಿವಿಯಲ್ಲಿ ಓದುತ್ತಿದ್ದಾನೆ. ಪ್ರಸ್ತುತ ಅರ್ಥಶಾಸ್ತ್ರದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಕ್ರಿಮಿನಲ್ ಮೊಕದ್ದಮೆಯಿಂದ ರಿತ್ವಿಕ್ ಶೈಕ್ಷಣಿಕ ಮತ್ತು ವೃತ್ತಿ ಭವಿಷ್ಯಕ್ಕೆ ಧಕ್ಕೆಯಾಗಲಿದೆ. ಹೀಗಾಗಿ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.
ರಿತ್ವಿಕ್ ಶರ್ಮಾ ಪೋಸ್ಟ್ ಬಗ್ಗೆ ಚಾಟಿ ಬೀಸಿದ ಹೈಕೋರ್ಟ್ ಪೀಠ, ಆತನ ವಿದ್ಯಾಭ್ಯಾಸ ಮತ್ತು ಭವಿಷ್ಯದ ದೃಷ್ಟಿಯಿಂದ ಆತನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದೆ. ಇಂತಹ ಕೃತ್ಯ ಪುನರಾವರ್ತನೆಯಾಗಬಾರದು ಎಂದು ಎಚ್ಚರಿಕೆ ನೀಡಿದೆ.
ನಟ ಪುನೀತ್ ರಾಜ್ ಕುಮಾರ್ ಅವರು ನಿಧನರಾದ ಬಳಿಕ ನವೆಂಬರ್ 1, 2021 ರಂದು ಕಿಂಗ್ ಫಿಷರ್ ಬಿಯರ್ ಬಾಟಲಿಯ ಫೋಟೋ ಹಾಕಿ ಅದರ ಮೇಲೆ ಅತ್ಯಂತ ಆಕ್ಷೇಪಾರ್ಹ ಸಾಲನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಬಗ್ಗೆ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67 ಮತ್ತು ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

