ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76 ನೇ ಜನ್ಮದಿನದ ಅಂಗವಾಗಿ ಒಡಿಶಾದ ಪುರಿ ಕಡಲತೀರದಲ್ಲಿ ವಿಶ್ವವಿಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಅತ್ಯಂತ ಆಕರ್ಷಕ ಹಾಗೂ ಬೃಹತ್ ಮರಳು ಕಲಾಕೃತಿಯನ್ನು ರಚಿಸಿ ಗಮನ ಸೆಳೆದಿದ್ದಾರೆ. 25 ಅಡಿ ಎತ್ತರದ ಈ ಬೃಹತ್ ಮರಳು ಶಿಲ್ಪವನ್ನು ಬರೋಬ್ಬರಿ 2,500 ಹಣತೆಗಳ ಬೆಳಕಿನಿಂದ ಅಲಂಕರಿಸಲಾಗಿದ್ದು, ಕಡಲತೀರದಲ್ಲಿ ನೆರೆದಿದ್ದ ಪ್ರವಾಸಿಗರ ಕಣ್ಮನ ಸೆಳೆದಿದೆ.
ಈ ವಿಶಿಷ್ಟ ಕಲಾಕೃತಿಗೆ ಆಶೀರ್ವಾದದ ದೀಪಗಳು ಎಂಬ ಸಂದೇಶವನ್ನು ನೀಡಲಾಗಿದ್ದು, ಪ್ರಧಾನಿಯವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುವ ಸಂಕೇತವಾಗಿ ಈ ಕೃತಿಯನ್ನು ರೂಪಿಸಲಾಗಿದೆ. ದೇಶದ ಪ್ರತಿಯೊಂದು ಮೂಲೆಯಲ್ಲೂ ಜನರು ದೇವರ ಮುಂದೆ ದೀಪ ಬೆಳಗಿಸಿ ಪ್ರಧಾನಿಯವರಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಅದೇ ರೀತಿ ನಾವು ಕೂಡ ಪುರಿಯ ಜಗನ್ನಾಥ ಸ್ವಾಮಿಯ ಬಳಿ ಪ್ರಧಾನಿ ಮೋದಿಯವರಿಗೆ ಸದಾ ಆಶೀರ್ವಾದ ಇರಲಿ ಎಂದು ಪ್ರಾರ್ಥಿಸಿ ಈ ಕಲಾಕೃತಿ ರಚಿಸಿದ್ದೇವೆ ಎಂದು ಸುದರ್ಶನ್ ಪಟ್ನಾಯಕ್ ತಿಳಿಸಿದ್ದಾರೆ.
ಪ್ರಧಾನಿಯವರ ಜನ್ಮದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಕಳೆದ 25 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಮಂತ್ರಿಯಾಗಿ ದೇಶಸೇವೆ ಸಲ್ಲಿಸುತ್ತಾ ಉತ್ತಮ ಆಡಳಿತಕ್ಕೆ ಹೊಸ ಮಾನದಂಡಗಳನ್ನು ಸ್ಥಾಪಿಸಿದ್ದೀರಿ ಎಂದು ಶ್ಲಾಘಿಸಿದ್ದಾರೆ. ಭಾರತವು ಸಾಂಸ್ಕೃತಿಕ ಹೆಮ್ಮೆಯೊಂದಿಗೆ ಆಧುನಿಕ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದ್ದು, ಪರಂಪರೆ ಮತ್ತು ಅಭಿವೃದ್ಧಿಯ ಸಾಮರಸ್ಯವನ್ನು ದೇಶವಾಸಿಗಳು ಕಾಣುತ್ತಿದ್ದಾರೆ ಎಂದು ರಾಷ್ಟ್ರಪತಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಗವಂತನು ಪ್ರಧಾನಿಯವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಹಾರೈಸಿದ್ದಾರೆ.

