ಬೆಳಗಾವಿ: ಪತ್ರಕರ್ತನ ಸೋಗಿನಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಕತರ್ನಾಅಕ್ ವ್ಯಕ್ತಿಯನ್ನು ಬೆಳಗಾವಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 45 ಸಾವಿರ ರೂ. ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.
ಸಿಸಿಬಿ ವಿಭಾಗದ ಪಿಐ ಮಂಜುನಾಥ ನಾಯಿಕ ಅವರಿಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ, ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್ಐ ಮಂಜುನಾಥ ಭಜಂತ್ರಿ ಹಾಗೂ ಸಿಬ್ಬಂದಿ ಬೆಳಗಾವಿಯ ಸಮರ್ಥನಗರದ ಬಳ್ಳಾರಿ ನಾಲಾ ಬಳಿಯ ಸಾರ್ವಜನಿಕ ಸ್ಥಳದಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಶಾಸ್ತ್ರಿನಗರ ನಿವಾಸಿ ಸತ್ಯಂ ಸಂತೋಷ ಕಾವೇಟಿಯಾ (21) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಈತ ತನ್ನ ಬೈಕ್ ಮೇಲೆ ಪ್ರೆಸ್ ಎಂದು ಬರೆದುಕೊಂಡಿದ್ದ. ಪತ್ರಕರ್ತನ ಸೋಗಿನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ಅಕ್ರಮ ಚಟುವಟಿಕೆಗೆ ಬಳಸುತ್ತಿದ್ದ ಹೊಂಡಾ ಆಕ್ಟಿವಾ ಬೈಕ್ ನ ಡಿಕ್ಕಿಯಲ್ಲಿ ಮೆಥಾಂಫೆಟಮೈನ್ ಎಂಬ ಮಾದಕ ವಸ್ತು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿತನಿಂದ 45 ಸಾವಿರ ಮೌಲ್ಯದ ಮೆಥಾಂಫೆಟಮೈನ್ ಹಾಗೂ 20 ಸಾವಿರ ಮೌಲ್ಯದ ಹೊಂಡಾ ಆಕ್ಟಿವಾ ಸ್ಕೂಟರ್ ಸೇರಿ ಒಟ್ಟು ₹65 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಈ ಕುರಿತು ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಲಾಗಿದೆ.
ಶಾಸಕ ಯತ್ನಾಳ್ ವಿರುದ್ಧ FIR ದಾಖಲು
ವಿಜಯಪುರ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-ಎಸ್ಐಆರ್ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಮೂವರ ವಿರುದ್ಧ ವಿಜಯಪುರದಲ್ಲಿ ಎಫ್ಐಆರ್ ದಾಖಲಾಗಿದೆ. ಬದುಕಿರುವವರ ಹೆಸರನ್ನು ಮೃತಪಟ್ಟಿದ್ದಾರೆ ಎಂದು ಸರ್ಟಿಫಿಕೇಟ್ ಪ್ರದರ್ಶಿಸಿದ ಪ್ರಕರಣ ಸಂಬಂಧ ಎಫ್ ಐ ಆರ್ ದಾಖಲಾಗಿದೆ.
ಅಬ್ದುಲ್ ರಜಾಕ್ ಬಾಗವಾನ್ ಎಂಬಾತ ನೀಡಿದ ದೂರುನ ಹಿನ್ನೆಲೆಯಲ್ಲಿ ಯತ್ನಾಳ್ ಹಾಗೂ ಇತರರ ವಿರುದ್ಧ ವಿಜಯಪುರ ಠಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾನು ಜೀವಂತವಾಗಿದ್ದರೂ ಶಾಸಕ ಯತ್ನಾಳ್ ಮೃತಪಟ್ಟಿರುವುದಾಗಿ ಹೇಳಿ ಕಾಗಪತ್ರ ಪ್ರದರ್ಶಿಸಿದ್ದಾರೆ. ಈ ನಿಟ್ಟಿನಲ್ಲಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಬ್ದುಲ್ ರಜಾಕ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಿಜಯಪುರ ಕ್ಷೇತ್ರದ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲು ಶಾಸಕ ಯತ್ನಾಳ್ ಅವರು ಒಟ್ಟು 1,054 ಜನರ ಪಟ್ಟಿಯನ್ನು ನೀಡಿದ್ದರು. ಅದರಲ್ಲಿ 8 ಮುಸ್ಲಿಂ ಮತದಾರರು ಮೃತಪಟ್ಟಿದ್ದಾರೆ ಎಂದು ಸುಳ್ಳು ಮರಣ ಪ್ರಮಾಣಪತ್ರಗಳನ್ನು ಲಗತ್ತಿಸಿ, ತಮ್ಮ ಅಧಿಕೃತ ಶಾಸಕರ ಲೆಟರ್ಹೆಡ್ನಲ್ಲಿ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಪಟ್ಟಿಯಲ್ಲಿದ್ದ ಮತದಾರರನ್ನು ಬೂತ್ ಮಟ್ಟದ ಅಧಿಕಾರಿಗಳು ಮತ್ತು ಸಂಘಟನೆಗಳು ಮನೆ ಮನೆಗೆ ಹೋಗಿ ಪರಿಶೀಲಿಸಿದಾಗ, ಮೃತಪಟ್ಟಿದ್ದಾರೆ ಎನ್ನಲಾದ ಮತದಾರರು ಜೀವಂತವಾಗಿರುವುದು ಬೆಳಕಿಗೆ ಬಂದಿದೆ.
ನಗರದ ಬಾಗವಾನ್ ಕಾಲೋನಿಯ ನಿವಾಸಿ ಅಬ್ದುಲ್ ರಝಾಕ್ ಮೌಲಾಸಾಬ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಈ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಈ ಆರೋಪಗಳನ್ನು ನಿರಾಕರಿಸಿರುವ ಶಾಸಕ ಯತ್ನಾಳ್, ಜನರು ಜೀವಂತವಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಸಾಬೀತುಪಡಿಸುವುದು ನನ್ನ ಜವಾಬ್ದಾರಿಯಲ್ಲ, ಅದು ಚುನಾವಣಾ ಆಯೋಗದ ಕೆಲಸ ಎಂದಿದ್ದಾರೆ. ಒಂದೇ ಹೆಸರಿನ ಮತದಾರರು ಬೇರೆ ಬೇರೆ ಕಡೆ ನೋಂದಣಿಯಾಗಿರುವ ಅಕ್ರಮಗಳನ್ನು ಪತ್ತೆಹಚ್ಚಲೆಂದೇ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದ್ದು, ಯಾವುದೇ ತನಿಖೆಗೂ ಸಿದ್ಧ ಎಂದು ಅವರು ಹೇಳಿದ್ದಾರೆ.

