ಸಾರ್ವಜನಿಕ ಸಾರಿಗೆಯಲ್ಲಿ, ಅದರಲ್ಲೂ ವೃದ್ಧರು, ಮಕ್ಕಳು ಮತ್ತು ರೋಗಿಗಳು ಪ್ರಯಾಣಿಸುವ ರೈಲು ಬೋಗಿಗಳಲ್ಲಿ ಇತರರಿಗೆ ತೊಂದರೆಯಾಗದಂತೆ ವರ್ತಿಸುವುದು ಕನಿಷ್ಠ ನಾಗರಿಕ ಕರ್ತವ್ಯವಾಗಿದೆ. ಆದರೆ ಇತ್ತೀಚೆಗೆ ಯುವಜನರ ಗುಂಪೊಂದು ರೈಲಿನ ಬೋಗಿಯಲ್ಲಿ ಸಾರ್ವಜನಿಕ ಸಭ್ಯತೆಯನ್ನು ಗಾಳಿಗೆ ತೂರಿ ಗಲಾಟೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಇದನ್ನು ಪ್ರಶ್ನಿಸಿದ ಮಹಿಳೆಯೊಬ್ಬರು ಯುವಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾಚಿ ಎಂಬ ಯುವತಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಈ ಘಟನೆ ದಾಖಲಾಗಿದೆ. ಯುವಕ-ಯುವತಿಯರ ಗುಂಪೊಂದು ರೈಲು ಬೋಗಿಯೊಳಗೆ ಜೋರಾಗಿ “ಗಣಪತಿ ಬಪ್ಪ ಮೋರಿಯಾ” ಮತ್ತು “ಹರ್ ಹರ್ ಮಹಾದೇವ್” ಎಂದು ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ, ಚಪ್ಪಾಳೆ ತಟ್ಟುತ್ತಾ ಗದ್ದಲ ಮಾಡುತ್ತಿದ್ದರು. ಈ ವೇಳೆ ಅದೇ ಬೋಗಿಯಲ್ಲಿದ್ದ ಹಿರಿಯ ಮಹಿಳೆಯೊಬ್ಬರು ಈ ವರ್ತನೆಯನ್ನು ತೀವ್ರವಾಗಿ ಖಂಡಿಸಿ, ಅವರ ಬಳಿ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈಲಿನಲ್ಲಿ ಗಲಾಟೆ ಮಾಡುತ್ತಿದ್ದ ಯುವಕರ ಗುಂಪನ್ನು ತರಾಟೆಗೆ ತೆಗೆದುಕೊಂಡ ಮಹಿಳೆ, “ನಿಮಗೆ ಕನಿಷ್ಠ ಶಿಕ್ಷಣ ಮತ್ತು ಸಂಸ್ಕಾರವಿಲ್ಲ. ಪದೇ ಪದೇ ಹೇಳುತ್ತಿದ್ದರೂ ಇಡೀ ಬೋಗಿಗೆ ತೊಂದರೆ ಕೊಡುತ್ತಿದ್ದೀರಾ. ನಿಮ್ಮ ಈ ವರ್ತನೆಯ ವಿರುದ್ಧ ಪೊಲೀಸರಿಗೆ ದೂರು ನೀಡಿ ಮುಂದಿನ ನಿಲ್ದಾಣದಲ್ಲೇ ನಿಮ್ಮನ್ನು ಕೆಳಗಿಳಿಸುವಂತೆ ಮಾಡುತ್ತೇನೆ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಮೊದಲು ಪೊಲೀಸರು ಬಂದು ಗಲಾಟೆ ಮಾಡದಂತೆ ಎಚ್ಚರಿಸಿದ್ದರೂ ಯುವ ಪಡೆ ಅದನ್ನು ನಿರ್ಲಕ್ಷಿಸಿದ್ದರು ಎಂದು ತಿಳಿದುಬಂದಿದೆ.
ವೀಡಿಯೊ ಹಂಚಿಕೊಂಡ ಯುವತಿ “ರೈಲಿನಲ್ಲಿ ಸ್ವಲ್ಪ ಮೋಜು ಮಾಡಿದರೆ ಏನಾಗುತ್ತದೆ? ನೋಡಿ ಹೀಗಾಯಿತು” ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಆದರೆ ಈ ವೀಡಿಯೊ ಜಾಲತಾಣಗಳಲ್ಲಿ ಹಂಚಕೆಯಾಗುತ್ತಿದ್ದಂತೆ ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕ ಸಾರಿಗೆಯಲ್ಲಿ ಇಂತಹ ಚಿಲ್ಲರೆ ವರ್ತನೆ ಸಹಿಸಲು ಸಾಧ್ಯವಿಲ್ಲ, ಮೋಜು ಮಾಡಲು ಸ್ವಂತ ವಾಹನಗಳನ್ನು ಬಳಸಲಿ ಎಂದು ಅನೇಕರು ಮಹಿಳೆಯ ಬೆಂಬಲಕ್ಕೆ ನಿಂತಿದ್ದಾರೆ. ಇನ್ನು ಕೆಲವರು ಯುವಕರು ಯಾವುದೇ ದುರುದ್ದೇಶವಿಲ್ಲದೆ ಮೋಜು ಮಾಡುತ್ತಿದ್ದರು ಎಂದು ವಾದಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿನ ವರ್ತನೆ ಕುರಿತು ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ.

