ಇಂದು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಪ್ರಸಿದ್ಧ ಸ್ವೀಟ್ ಹಾಗೂ ಚಾಟ್ ಮಳಿಗೆಯಾಗಿ ಗುರುತಿಸಿಕೊಂಡಿರುವ ‘ಇಂಡಿಯಾ ಸ್ವೀಟ್ ಹೌಸ್’ ಸಂಸ್ಥೆಯು ಆರಂಭದಲ್ಲಿ ಸಿಹಿತಿಂಡಿ ತಯಾರಿಕಾ ಕಂಪನಿಯಾಗಿ ಶುರುವಾಗಿರಲಿಲ್ಲ. ಬೆಂಗಳೂರು ಮೂಲದ ಈ ಸಂಸ್ಥೆಯ ಹಿಂದೆ ಕಠಿಣ ಪರಿಶ್ರಮ, ಕೊರೊನಾ ಸಮಯದಲ್ಲಾದ ನಷ್ಟ ಹಾಗೂ ಆ ನಷ್ಟವನ್ನೇ ಹೊಸ ಅವಕಾಶವನ್ನಾಗಿ ಬದಲಾಯಿಸಿಕೊಂಡ ದಂಪತಿಯ ಸ್ಪೂರ್ತಿದಾಯಕ ಕಥೆಯಿದೆ.
ಸುಮಾರು 2015-16 ರಲ್ಲಿ ಶ್ವೇತಾ ರಾಜಶೇಖರ್ ಹಾಗೂ ವಿಶ್ವನಾಥ್ ಮೂರ್ತಿ ದಂಪತಿ ‘ಕರ್ಮಾ ಫಾರ್ಮ್ಸ್’ ಹೆಸರಿನಲ್ಲಿ 20 ಎಕರೆ ಜಮೀನಿನಲ್ಲಿ 100 ಕ್ಕೂ ಹೆಚ್ಚು ಹಸುಗಳನ್ನು ಸಾಕಿಕೊಂಡು ಆರ್ಗ್ಯಾನಿಕ್ ಹಾಲು, ಪನೀರ್ ಹಾಗೂ ತುಪ್ಪ ಮಾರಾಟ ಮಾಡುವ ಉದ್ಯಮ ಆರಂಭಿಸಿದ್ದರು. ಆದರೆ 2020 ರ ಕೋವಿಡ್ ಲಾಕ್ಡೌನ್ ಸಮಯದಲ್ಲಿ ಮನೆಮನೆಗೆ ಹಾಲು ಸರಬರಾಜು ಮಾಡುವುದು ಹಾಗೂ ಗ್ಲಾಸ್ ಬಾಟಲ್ ಸಂಗ್ರಹಣೆ ಮಾಡುವುದು ತೀವ್ರ ಕಷ್ಟಕರವಾಯಿತು. ಹೆಚ್ಚುವರಿಯಾಗಿ ಉಳಿಯುತ್ತಿದ್ದ ಹಾಲನ್ನು ಏನು ಮಾಡಬೇಕೆಂಬ ಗೊಂದಲದಲ್ಲಿದ್ದಾಗ, ದಂಪತಿಗೆ ಹೊಳೆದದ್ದೇ ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಗಳ ತಯಾರಿಕೆ.
ಹಾಲಿನ ನಷ್ಟವನ್ನು ಸರಿದೂಗಿಸಲು 2020 ರಲ್ಲಿ ಆರಂಭವಾದ ‘ಇಂಡಿಯಾ ಸ್ವೀಟ್ ಹೌಸ್’ ಮೊದಲು ಬಿಗ್ಬಾಸ್ಕೆಟ್, ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ಹಾಗೂ ಸ್ಪಾರ್ ಇಂಡಿಯಾ ಆನ್ಲೈನ್ ವೇದಿಕೆಗಳ ಮೂಲಕ ಮಾರಾಟ ಶುರು ಮಾಡಿತು. ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ, 2021 ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ತನ್ನ ಮೊದಲ ಭೌತಿಕ ಮಳಿಗೆಯನ್ನು ತೆರೆಯಿತು. ಮಾರುಕಟ್ಟೆಯಲ್ಲಿದ್ದ ಸಾಮಾನ್ಯ ಬೇಕರಿ ಹಾಗೂ ಅತ್ಯಂತ ದುಬಾರಿ ಸ್ವೀಟ್ ಅಂಗಡಿಗಳ ನಡುವಿನ ಅಂತರವನ್ನು ಗುರುತಿಸಿದ ಸಂಸ್ಥೆ, ಮಧ್ಯಮ ವರ್ಗಕ್ಕೆ ಹೊಂದುವಂತಹ ಗುಣಮಟ್ಟದ ಸ್ವೀಟ್ಸ್ ಹಾಗೂ ಕುಳಿತು ಸವಿಯುವಂತಹ ಚಾಟ್ ಕೇಂದ್ರಗಳನ್ನು ಪರಿಚಯಿಸಿತು.
ಆಹಾರ ಕ್ಷೇತ್ರದಲ್ಲಿ ದಶಕಗಳ ಅನುಭವ ಹೊಂದಿರುವ ರಾಜೇಶ್ ಮೆಹ್ತಾ ಅವರ ಸೇರ್ಪಡೆಯೊಂದಿಗೆ ಸಂಸ್ಥೆ ಮತ್ತಷ್ಟು ಬೆಳೆಯಿತು. ಪ್ರಸ್ತುತ ಈ ಸಂಸ್ಥೆಯು ‘ಚಾಟ್ಟೈಮ್ಸ್’ ಬ್ರ್ಯಾಂಡ್ ಸೇರಿದಂತೆ ಮುರುಕು, ಚಿಪ್ಸ್, ಕುಕೀಸ್ ಹಾಗೂ ಕಾರದ ಪದಾರ್ಥಗಳನ್ನು ಮಾರಾಟ ಮಾಡುತ್ತಿದೆ. ಹಂತ ಹಂತವಾಗಿ ಬೆಳೆದ ಸಂಸ್ಥೆಯು 50 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ಟ್ರ್ಯಾಕ್ಸನ್ ವರದಿ ಪ್ರಕಾರ 2025 ರ ಹಣಕಾಸು ವರ್ಷದಲ್ಲಿ 83.10 ಕೋಟಿ ರೂಪಾಯಿ ಆದಾಯ ಹಾಗೂ 1.83 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. 2024 ರ ಅಕ್ಟೋಬರ್ನಲ್ಲಿ 1 ಮಿಲಿಯನ್ ಡಾಲರ್ ಹೂಡಿಕೆ ಸಂಗ್ರಹಿಸಿರುವ ಸಂಸ್ಥೆಯು ಶೀಘ್ರದಲ್ಲೇ ಐಪಿಒ ಪ್ರವೇಶಿಸುವ ಹಾಗೂ ಇತರ ರಾಜ್ಯಗಳಿಗೆ ತನ್ನ ಉದ್ಯಮ ವಿಸ್ತರಿಸುವ ಯೋಜನೆಯಲ್ಲಿದೆ.

