ಬೆಂಗಳೂರು: ಅತ್ಯಾಚಾರ ಹಾಗೂ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬ್ಯಾರಕ್ ನಲ್ಲಿ ಮೊಬೈಲ್, ಪೆನ್ ಡ್ರೈವ್ ಪತ್ತೆ ಪ್ರಕರಣ ಇತ್ತೀಚೆಗೆ ಭಾರಿ ಚರ್ಚೆಗೆ ಕಾರಣವಗಿತ್ತು. ಜೈಲಿನ ಸೆಲ್ ನಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಸುತ್ತಿದ್ದ ಪ್ರಕರಣ ಸಂಬಂಧ ಪೊಲೀಸರ ತನಿಖೆಯಲ್ಲಿ ಮತ್ತಷ್ಟು ವಿಚಾರಗಳು ಬಯಲಾಗಿವೆ.
ಜೈಲಿನ ಮೇಲೆ ಸಿಸಿಬಿ ಪೊಲೀಸರು ಇತ್ತೀಚೆಗೆ ದಾಳಿ ನಡೆಸಿದ್ದಾಗ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್, ಪೆನ್ ಡ್ರೈವ್, ನೋಟ್ ಬುಕ್ ಗಳು ಪತ್ತೆಯಾಗಿದ್ದವು. ಪ್ರಜ್ವಲ್ ರೇವಣ್ಣಗೆ ಜೈಲಿನಲ್ಲಿ ಮೊಬೈಲ್ ಪೂರೈಸಿದ್ದು ಯಾರು? ಪ್ರಜ್ವಲ್ ಯಾಅರೊಂದೊಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಎಂಬ ಬಗ್ಗೆ ಪರಿಶೀಲಿಸಿದಾಗ ಕೆಲ ಅಂಶಗಳು ಬೆಳಕಿಗೆ ಬಂದಿವೆ.
ಪ್ರಜ್ವಲ್ ರೇವಣ್ಣ, ಜೈಲಿನ ತನ್ನ ಬ್ಯಾರಕ್ ನಿಂದ ಮೊಬೈಲ್ ನಲ್ಲಿ ತನ್ನ ಪೋಷಕರು ಸೇರಿದಂತೆ ಹಲವರಿಗೆ ಕರೆ ಮಾಡಿ ಮಾತನಾಡುತ್ತಿದ್ದರು. ಪ್ರಜ್ವಲ್ ಒಂದು ಕೀಪ್ಯಾಡ್ ಮತ್ತು ಒಂದು ಆಂಡ್ರಾಯ್ಡ್ ಹೀಗೆ ಎರಡು ಮೊಬೈಲ್‌ಗಳನ್ನು ಬಳಸುತ್ತಿದ್ದರು. ಪೊಲೀಸರ ತನಿಖೆ ವೇಳೆ, ಬಾಣಸವಾಡಿ ನಿವಾಸಿ ನವೀನ್ ಎಂಬಾತ ಪ್ರಜ್ವಲ್‌ಗೆ ಮೊಬೈಲ್ ಪೂರೈಕೆ ಮಾಡಿದ್ದು ಎಂಬುದು ಗೊತ್ತಾಗಿದೆ.
ಸದ್ಯ ನವೀನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಜ್ವಲ್ ಇದ್ದ ಬ್ಯಾರಕ್‌ನಲ್ಲೇ ಇದ್ದ ಪ್ರತಾಪ್ ರಾಯ್ ಮೂಲಕ ನವೀನ್ ಮೊಬೈಲ್‌ಗಳನ್ನು ತಲುಪಿಸಿದ್ದಾನೆ. ಕ್ರಿಮಿನಲ್ ಪ್ರಕರಣವೊಂದರಲ್ಲಿ ನವೀನ್ ಜೈಲಿಗೆ ಹೋಗಿದ್ದಾಗ ಪ್ರತಾಪ್ ರಾಯ್‌ನ ಪರಿಚಯವಾಗಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಜ್ವಲ್ ಬಳಸುತ್ತಿದ್ದ ಸಿಮ್ ಕಾರ್ಡ್‌ಗಳು ಬೇರೆಯವರ ಹೆಸರಿನಲ್ಲಿ ಖರೀದಿಸಲ್ಪಟ್ಟಿದ್ದು, ಒಂದು ಸಿಮ್ ಆಂಧ್ರಪ್ರದೇಶದಲ್ಲಿ ಸಕ್ರಿಯವಾಗಿರುವುದು ಪತ್ತೆಯಾಗಿದೆ. ಡಿಐಜಿ ಜಿನೇಂದ್ರ ಗಣಗಾವಿ ನೇತೃತ್ವದಲ್ಲಿ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಈ ಪ್ರಕರಣದಲ್ಲಿ ಜೈಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

