ಮಹಾರಾಷ್ಟ್ರದಲ್ಲಿ ಐಫೋನ್‌ಗಾಗಿ ನಡೆದ ದುರಂತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆಗೆ ನಟ ಜಗ್ಗೇಶ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಐಫೋನ್ EMI ವಿಚಾರವನ್ನೇ ಮನೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳುವ ತಾಳ್ಮೆಯಿಲ್ಲದ ಪೀಳಿಗೆಗೆ ಇಂತಹ ದುರಂತಗಳು ಎಚ್ಚರಿಕೆಯ ಗಂಟೆಯಾಗಬೇಕು ಎಂದು ಹೇಳಿದ್ದಾರೆ.
“ಎಂಥ ದೌರ್ಭಾಗ್ಯ! ಒಂದು ಐಫೋನ್ EMI ವಿಚಾರವನ್ನು ಮನೆಯಲ್ಲಿ ಚರ್ಚಿಸುವ ತಾಳ್ಮೆಯಿಲ್ಲದ ಪೀಳಿಗೆ. ತಂದೆ-ತಾಯಿ ವಂಶವನ್ನೇ ಕೋಪದ ಕೈಗೆ ನೀಡಿ ನಾಶಮಾಡಿಬಿಟ್ಟ ಮಗ…” ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಎಂಥ ಧೌರ್ಭಾಗ್ಯ ಸಂತತಿ ಒಂದು iphoneEMI ವಿಚಾರ ಮನೆಯಲ್ಲಿ ಚರ್ಚಿಸುವ ತಾಳ್ಮೆಯಿಲ್ಲದ ಪೀಳಿಗೆ ತಂದೆತತಾಯಿ ವಂಶವನ್ನು ಕೋಪದ ಕೈಗೆ ನೀಡಿ ನಾಶಮಾಡಿಬಿಟ್ಟ ಮಗ… ಯಾವ ತಪ್ಪು ಮಾಡದ ತಂದೆ ಅವನ ಹಿಂದೆ ತಾಯಿ ಘೋರ ಸಾವು ಕಂಡರು. ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಐಷಾರಾಮಿ ವಸ್ತುಗಳ ಮೇಲಿನ ಅತಿಯಾದ ವ್ಯಾಮೋಹ, ಕ್ಷಣಿಕ ಕೋಪ ಹಾಗೂ ಕುಟುಂಬದೊಳಗಿನ ಸಂವಹನದ ಕೊರತೆ ಎಂತಹ ಭೀಕರ ಪರಿಣಾಮಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ. ಸಣ್ಣ ವಿಚಾರಗಳು ಕೋಪಕ್ಕೆ ತಿರುಗದೆ, ಕುಟುಂಬದ ಸದಸ್ಯರು ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬ ಸಂದೇಶವನ್ನು ಈ ದುರಂತ ಸಾರುತ್ತಿದೆ.
ಏನಿದು ಘಟನೆ
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಐಫೋನ್ EMI ಕಂತು ಪಾವತಿಸದ ವಿಚಾರಕ್ಕೆ ನಡೆದ ಜಗಳ ದುರಂತಕ್ಕೆ ತಿರುಗಿದ್ದು, ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಶುಕ್ರವಾರ ನಡೆದ ಈ ಘಟನೆ ಟಿಸ್ಗಾಂವ್ ಪ್ರದೇಶದ ಖವ್ಡಾ ಬೆಟ್ಟದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಲ್ತಾ ಫಾಟಾ ಪ್ರದೇಶದ ನಿವಾಸಿಯಾಗಿದ್ದ 18 ವರ್ಷದ ಕುನಾಲ್ ಚಾಂದ್ಗುಡೆ EMI ಮೂಲಕ ಐಫೋನ್ ಖರೀದಿಸಿದ್ದ. ಆದರೆ EMI ಕಂತುಗಳನ್ನು ಪಾವತಿಸಲು ಸಾಧ್ಯವಾಗದೆ ಪರದಾಡುತ್ತಿದ್ದ ಎನ್ನಲಾಗಿದೆ. ಕಂತು ಪಾವತಿಯಾಗದ ವಿಚಾರವಾಗಿ ಕುನಾಲ್ ಹಾಗೂ ಅವರ ತಂದೆ 48 ವರ್ಷದ ಮುರಳೀಧರ್ ಚಾಂದ್ಗುಡೆ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಮುರಳೀಧರ್ ವೃತ್ತಿಯಲ್ಲಿ ಚಾಲಕರಾಗಿದ್ದರು.
ಮೂರು ಗಂಟೆಗಳ ಕಾಲ ಮನವೊಲಿಸಲು ಪ್ರಯತ್ನ
ಶುಕ್ರವಾರ ಬೆಳಗ್ಗೆ ಸುಮಾರು 10 ಗಂಟೆಗೆ ಕುನಾಲ್ ಟಿಸ್ಗಾಂವ್ ಪ್ರದೇಶದ ಖವ್ಡಾ ಬೆಟ್ಟಕ್ಕೆ ತೆರಳಿ, ಬೆಟ್ಟದ ಅಂಚಿನಿಂದ ಜಿಗಿಯುವುದಾಗಿ ಬೆದರಿಕೆ ಹಾಕಿದ್ದಾನೆ. ವಿಷಯ ತಿಳಿದ ಬಳಿಕ ಆತನ ಪೋಷಕರು, ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸರಪಂಚ್, ಅಗ್ನಿಶಾಮಕ ಸಿಬ್ಬಂದಿ ಹಾಗೂ ವಾಲುಜ್ MIDC ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಸುಮಾರು ಮೂರು ಗಂಟೆಗಳ ಕಾಲ ಎಲ್ಲರೂ ಕುನಾಲ್‌ನನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಟ್ಟದ ಕೆಳಭಾಗದಲ್ಲಿ ಸುರಕ್ಷತಾ ಬಲೆಯನ್ನು ಅಳವಡಿಸಲು ಪ್ರಯತ್ನಿಸಿದ್ದರೂ, ಕುನಾಲ್ ಬೆಟ್ಟದ ಅಂಚಿನಲ್ಲೇ ಓಡಾಡುತ್ತಿದ್ದ ಎನ್ನಲಾಗಿದೆ.
ಮಗನನ್ನು ರಕ್ಷಿಸಲು ಹೋದ ತಂದೆಯೂ ಕಂದಕಕ್ಕೆ
ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಕುನಾಲ್‌ನ ತಂದೆ ಮುರಳೀಧರ್ ಬೆಟ್ಟದ ಮೇಲಕ್ಕೆ ತೆರಳಿ, ಮಗನನ್ನು ಅಂಚಿನಿಂದ ಹಿಂದಕ್ಕೆ ಎಳೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ತಂದೆ-ಮಗ ಇಬ್ಬರೂ ಸಮತೋಲನ ಕಳೆದುಕೊಂಡು ಕಂದಕಕ್ಕೆ ಬಿದ್ದಿದ್ದಾರೆ.
ಈ ದೃಶ್ಯವನ್ನು ನೋಡುತ್ತಿದ್ದ ತಾಯಿ ಸಂಗೀತಾ ಚಾಂದ್ಗುಡೆ ಕೂಡ ಬಳಿಕ ಬೆಟ್ಟದಿಂದ ಕೆಳಗೆ ಹಾರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಕುನಾಲ್, ಮುರಳೀಧರ್ ಮತ್ತು ಸಂಗೀತಾ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆ ಕುರಿತು ತನಿಖೆ ಮುಂದುವರಿದಿದೆ.
‘ಫೋನ್‌ಗಾಗಿ ಜಗಳ’ಕ್ಕಿಂತ ದೊಡ್ಡ ಪ್ರಶ್ನೆ
ಈ ಘಟನೆಯನ್ನು ಕೇವಲ ‘ಐಫೋನ್‌ಗಾಗಿ ನಡೆದ ಜಗಳ’ ಎಂದು ನೋಡುವುದು ಸರಿಯಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ದುಬಾರಿ ಸ್ಮಾರ್ಟ್‌ಫೋನ್‌ಗಳು ಇಂದು ಕೇವಲ ತಂತ್ರಜ್ಞಾನದ ಸಾಧನಗಳಾಗಿ ಉಳಿದಿಲ್ಲ; ಅವು ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆಯ ಸಂಕೇತಗಳಾಗಿಯೂ ಬಿಂಬಿತವಾಗುತ್ತಿವೆ.
ಆದರೆ ಟಿಸ್ಗಾಂವ್ ದುರಂತಕ್ಕೆ ಇವೇ ಸಂಪೂರ್ಣ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಕುಟುಂಬದ ಆಂತರಿಕ ಪರಿಸ್ಥಿತಿ, ಮಾನಸಿಕ ಒತ್ತಡ ಹಾಗೂ ಇತರ ವೈಯಕ್ತಿಕ ಕಾರಣಗಳೂ ಇರಬಹುದು. ಪ್ರಕರಣದ ತನಿಖೆ ಮುಂದುವರಿದಿರುವುದರಿಂದ ಅಂತಿಮ ಕಾರಣಗಳ ಬಗ್ಗೆ ಈಗಲೇ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ. ಒಂದು ಐಫೋನ್ EMI ಕಂತಿನಿಂದ ಆರಂಭವಾದ ವಿವಾದ ಕೊನೆಗೆ ಇಡೀ ಕುಟುಂಬವನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ತಲುಪಿರುವುದು ಮಾತ್ರ ಅತ್ಯಂತ ದುರಂತಕಾರಿ ಸಂಗತಿಯಾಗಿದೆ.
https://x.com/Jaggesh2/status/2091025694130061813

