ಬೆಂಗಳೂರು: ಬೆಂಗಳೂರು ಸುತ್ತಮುತ್ತ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಈಗಾಗಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮೂರು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಡಾ. ಶೈಲೇಂದ್ರ ಬೆಲ್ದಾಳೆ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಬೆಂಗಳೂರು ಸುತ್ತಮುತ್ತ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಉದ್ದೇಶಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ರಸ್ತೆ ಸೋಮನಹಳ್ಳಿ, ಕನಕಪುರ ಚೌಡಹಳ್ಳಿ, ನೆಲಮಂಗಲ ಸಮೀಪ ಗುಡೆಮಾರನಹಳ್ಳಿಯ ಸಮೀಪ ಸ್ಥಳ ಗುರುತಿಸಲಾಗಿದೆ. ಇದರೊಂದಿಗೆ ಕನಕಪುರ ರಸ್ತೆಯ ಹಾರೋಹಳ್ಳಿ ಪ್ರದೇಶದಲ್ಲಿ ಸೂಕ್ತ ಸ್ಥಳ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ. ಸ್ಥಳ ಆಯ್ಕೆಯಾದ ಬಳಿಕ ಅಗತ್ಯವಿರುವ ಜಮೀನು ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

