ಬೆಂಗಳೂರು: ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಮಾಹಿತಿಯನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸೂಚನೆ ನೀಡಿದೆ.
ಆಗಸ್ಟ್ 10ರಂದು ಹೊರಡಿಸಿರುವ ಆದೇಶದಲ್ಲಿ, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಸಮಯ, ಅಂಗಡಿಯ ಹೆಸರು, ಮಾಲೀಕರು, ಕಾರ್ಯದರ್ಶಿ ಹಾಗೂ ಸಹಾಯಕರ ಹೆಸರು ಮತ್ತು ಮೊಬೈಲ್ ಸಂಖ್ಯೆ, ಪ್ರಾಧಿಕಾರ ಸಂಖ್ಯೆ ಹಾಗೂ ವಿಳಾಸವನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ತಿಳಿಸಲಾಗಿದೆ.
ಯಾವೆಲ್ಲ ಮಾಹಿತಿ ಪ್ರದರ್ಶಿಸಬೇಕು?
• ಪಡಿತರ ವಿತರಣೆ ಸಮಯ
• ನ್ಯಾಯಬೆಲೆ ಅಂಗಡಿಯ ಹೆಸರು, ಮಾಲೀಕರು, ಕಾರ್ಯದರ್ಶಿ ಹಾಗೂ ಸಹಾಯಕರ ಹೆಸರು ಮತ್ತು ಮೊಬೈಲ್ ಸಂಖ್ಯೆ
• ನ್ಯಾಯಬೆಲೆ ಅಂಗಡಿಯ ಪ್ರಾಧಿಕಾರ ಸಂಖ್ಯೆ ಮತ್ತು ವಿಳಾಸ
• ಸಂಬಂಧಪಟ್ಟ ಆಹಾರ ನಿರೀಕ್ಷಕರು, ಆಹಾರ ಶಿರಸ್ತೇದಾರರು ಹಾಗೂ ಜಂಟಿ/ಉಪ ನಿರ್ದೇಶಕರ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ
• ರಾಜ್ಯ ಮಟ್ಟದ ಸಹಾಯವಾಣಿ 1967
• ಆಹಾರಧಾನ್ಯಗಳ ಮಾದರಿ
• ಪ್ರತಿ ತಿಂಗಳ Scale of Issue
• ಪ್ರತಿದಿನದ ಆಹಾರಧಾನ್ಯ ದಾಸ್ತಾನು ವಿವರ
• ಅಂತಿಮ ದಾಸ್ತಾನು ವಿವರ
• ನ್ಯಾಯಬೆಲೆ ಅಂಗಡಿಯ ಜಾಗೃತಿ ಸಮಿತಿ ಸದಸ್ಯರ ಹೆಸರುಗಳು
• ನ್ಯಾಯಬೆಲೆ ಅಂಗಡಿಯ ವ್ಯಾಪ್ತಿಯ ಪಡಿತರ ಚೀಟಿ ಹಾಗೂ ಫಲಾನುಭವಿಗಳ ಸಂಖ್ಯೆ
• ಅನ್ನ ಸುವಿಧಾ ಯೋಜನೆಯಡಿ ಪಡಿತರ ಪಡೆಯುತ್ತಿರುವ ಫಲಾನುಭವಿಗಳ ಸಂಖ್ಯೆ
• ಇ-ಕೆವೈಸಿಯಿಂದ ವಿನಾಯಿತಿ ಪಡೆದ ಫಲಾನುಭವಿಗಳ ಸಂಖ್ಯೆ
• ಹಿಂದಿನ ತಿಂಗಳಲ್ಲಿ ರಾಜ್ಯದೊಳಗಿನ ಹಾಗೂ ಅಂತಾರಾಜ್ಯ ಪೋರ್ಟಬಿಲಿಟಿ ಮೂಲಕ ಪಡಿತರ ಪಡೆದ ಫಲಾನುಭವಿಗಳ ಸಂಖ್ಯೆ
ದಾಖಲೆಗಳ ನಿರ್ವಹಣೆಯೂ ಕಡ್ಡಾಯ
ನ್ಯಾಯಬೆಲೆ ಅಂಗಡಿಗಳಲ್ಲಿ Visitors Register, Day-wise Stock Register ಹಾಗೂ Complaint Box ಕಡ್ಡಾಯವಾಗಿ ನಿರ್ವಹಿಸಬೇಕು. ಅಲ್ಲದೆ, ಅಂಗಡಿಯ ಪ್ರಾಧಿಕಾರ ಪತ್ರ, ತೂಕದ ಯಂತ್ರಕ್ಕೆ ಸಂಬಂಧಿಸಿದ ಕಾನೂನು ಮಾಪನ ಶಾಸ್ತ್ರ ಇಲಾಖೆಯ Calibration Certificate ಅನ್ನು ಕೂಡ ಪ್ರದರ್ಶಿಸಬೇಕು ಎಂದು ಇಲಾಖೆ ಸೂಚಿಸಿದೆ.
ಆಗಸ್ಟ್ 30ರೊಳಗೆ ವರದಿ ಸಲ್ಲಿಕೆ
ತಮ್ಮ ವ್ಯಾಪ್ತಿಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಸೂಚನೆಗಳನ್ನು ಜಾರಿಗೊಳಿಸಿರುವ ಬಗ್ಗೆ ಛಾಯಾಚಿತ್ರಗಳೊಂದಿಗೆ ಅನುಪಾಲನಾ ವರದಿಯನ್ನು 2026ರ ಆಗಸ್ಟ್ 30ರೊಳಗೆ ಸಲ್ಲಿಸುವಂತೆ ಎಲ್ಲಾ ಜಂಟಿ/ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ.ಈ ಕ್ರಮದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಹಾಗೂ ಫಲಾನುಭವಿಗಳಿಗೆ ಅಗತ್ಯ ಮಾಹಿತಿಯನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಇಲಾಖೆಯ ಉದ್ದೇಶವಾಗಿದೆ.



