HomeKarnatakaಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕಾಂಗ್ರೆಸ್‌ನಲ್ಲಿ ಅಸಮಾಧಾನ; ರಾಜೀನಾಮೆಗೆ ಮುಂದಾದ ಬೇಳೂರು ಗೋಪಾಲಕೃಷ್ಣ ಸೇರಿ 10 ಮಂದಿ...

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕಾಂಗ್ರೆಸ್‌ನಲ್ಲಿ ಅಸಮಾಧಾನ; ರಾಜೀನಾಮೆಗೆ ಮುಂದಾದ ಬೇಳೂರು ಗೋಪಾಲಕೃಷ್ಣ ಸೇರಿ 10 ಮಂದಿ ಶಾಸಕರು

ಬೆಂಗಳೂರು: ಕಾಂಗ್ರೆಸ್‌’ನ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಯಶವಂತರಾಯಗೌಡ ಪಾಟೀಲ್ ಅವರಿಗೆ ಸಚಿವ ಸ್ಥಾನ ದೊರಕುವಂತೆ ಮಾಡಲು ತಾವು ಅಗತ್ಯವಿದ್ದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಯಶವಂತರಾಯಗೌಡ ಪಾಟೀಲ್ ಅವರು ಪಕ್ಷದ ಹಿರಿಯ ಹಾಗೂ ಅನುಭವಿ ನಾಯಕರಾಗಿದ್ದು, ಅವರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಗಬೇಕು ಎಂದು ಅಭಿಪ್ರಾಯಪಟ್ಟರು. ಪಕ್ಷದ ಹಿತಾಸಕ್ತಿಗಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂಬ ಸಂದೇಶವನ್ನು ಅವರು ನೀಡಿದರು. ಬೇಳೂರು ಗೋಪಾಲಕೃಷ್ಣ ಜೊತೆ 10 ಮಂದಿ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಬೇಲೂರು ಗೋಪಾಲಕೃಷ್ಣ ಅವರ ಈ ಹೇಳಿಕೆ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ರಾಜಕೀಯ ಚರ್ಚೆಗಳ ನಡುವೆ ಮಹತ್ವ ಪಡೆದಿದ್ದು, ಪಕ್ಷದ ಒಳವಲಯದಲ್ಲೂ ಗಮನ ಸೆಳೆದಿದೆ. ಆದರೆ ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಅಥವಾ ರಾಜ್ಯ ನಾಯಕತ್ವದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇನ್ನೂ ಹೊರಬಿದ್ದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆ ಕಾಂಗ್ರೆಸ್‌ನ ಹಿರಿಯ ಶಾಸಕ ಹಾಗೂ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಯಶವಂತರಾಯಗೌಡ ಪಾಟೀಲ್ ಬೇಸರ

“ಸಚಿವ ಸ್ಥಾನ ಸಿಗುತ್ತದೆ ಎಂದು ನಿನ್ನೆವರೆಗೂ ಭರವಸೆ ನೀಡಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅನ್ಯಾಯ ಮಾಡಲಾಗಿದೆ. ಈ ರೀತಿಯ ರಾಜಕೀಯ ವ್ಯವಸ್ಥೆಯಲ್ಲಿ ಇರಲು ನನಗೆ ಇಷ್ಟವಿಲ್ಲ. ಮನಸ್ಸಿಗೆ ತುಂಬಾ ನೋವಾಗಿದೆ. ಹಿರಿತನಕ್ಕೂ ಗೌರವವಿಲ್ಲದಿದ್ದರೆ ರಾಜಕಾರಣ ಮಾಡುವುದಕ್ಕೆ ಅರ್ಥವೇನು? ಶಾಸಕ ಸ್ಥಾನವೂ ಬೇಡ” ಯಶವಂತರಾಯಗೌಡ ಪಾಟೀಲ್  ಎಂದು ಬೇಸರ ವ್ಯಕ್ತಪಡಿಸಿದರು.

ಯಶವಂತರಾಯಗೌಡ ಪಾಟೀಲ್ ಅವರು ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿದ್ದೇನೆ. ಇಂದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಘೋಷಿಸಿದರು. ಸಚಿವ ಸ್ಥಾನಕ್ಕೆ ತಮ್ಮ ಹೆಸರು ಅಂತಿಮ ಪಟ್ಟಿಯಲ್ಲಿದೆ ಎಂದು ತಿಳಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕೈಬಿಟ್ಟಿರುವುದು ತೀವ್ರ ನಿರಾಸೆ ಮೂಡಿಸಿದೆ ಎಂದು ಹೇಳಿದರು.

ಇದೇ ವೇಳೆ ಪಕ್ಷದ ಒಳಗಿನ ಬೆಳವಣಿಗೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, “ನಿಷ್ಠಾವಂತರಿಗೆ, ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಇದು ಕಾಲವಲ್ಲ. ಇಲ್ಲಿ ದೊಡ್ಡ ಷಡ್ಯಂತ್ರ ನಡೆಯುತ್ತಿದೆ” ಎಂದು ಆರೋಪಿಸಿದರು. ಯಶವಂತರಾಯಗೌಡ ಅವರ ಈ ಘೋಷಣೆ ರಾಜ್ಯ ಕಾಂಗ್ರೆಸ್‌ನಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಸಚಿವ ಸಂಪುಟ ವಿಸ್ತರಣೆಯ ಬಳಿಕ ಅಸಮಾಧಾನಗೊಂಡಿರುವ ಶಾಸಕರ ಅಸಮಾಧಾನ ಮತ್ತಷ್ಟು ಬಹಿರಂಗಗೊಂಡಿದೆ. ಇದೀಗ ಅವರ ರಾಜೀನಾಮೆ ನಿರ್ಧಾರದ ಕುರಿತು ಪಕ್ಷದ ಹೈಕಮಾಂಡ್ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular