ಗ್ಲ್ಯಾಸ್ಗೋದಲ್ಲಿ ನಡೆದ ೨೦೨೬ರ ಕಾಮನ್‌ವೆಲ್ತ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾರತದ ಸಾಂಸ್ಕೃತಿಕ ವೈಭವ ಕಂಗೊಳಿಸಿತು. ೨೦೩೦ರ ಕಾಮನ್‌ವೆಲ್ತ್ ಆತಿಥ್ಯದ ಹಕ್ಕನ್ನು ಭಾರತ ಅಧಿಕೃತವಾಗಿ ವಹಿಸಿಕೊಂಡ ಶುಭ ಸಂದರ್ಭದಲ್ಲಿ, ಮಾಜಿ ಮಿಸ್ ವರ್ಲ್ಡ್ ಮನುಷಿ ಚಿಲ್ಲರ್ ಮತ್ತು ಪ್ರಸಿದ್ಧ ಗಾಯಕ ಶಂಕರ್ ಮಹದೇವನ್ ವೇದಿಕೆಯಲ್ಲಿ ಅದ್ಭುತ ಪ್ರದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ಮನುಷಿ ಚಿಲ್ಲರ್, ಭಾರತದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ನೃತ್ಯಗಾರರೊಂದಿಗೆ ಹೆಜ್ಜೆ ಹಾಕಿದರು. ಗಾಯಕ ಶಂಕರ್ ಮಹದೇವನ್ ವಂದೇ ಮಾತರಂ ಗೀತೆಯನ್ನು ಪ್ರಸ್ತುತಪಡಿಸಿದರು. ಇದರೊಂದಿಗೆ ಶಂಕರ್ ಮಹದೇವನ್ ಅವರು ಐ ವತನ್ ಮತ್ತು ಅಬ್ ತು ಭಾಗ್ ಮಿಲ್ಖಾ ಜನಪ್ರಿಯ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ವಸುಧೈವ ಕುಟುಂಬಕಂ ತತ್ವದಡಿಯಲ್ಲಿ ದೇಶದ ವಿವಿಧ ಜಾನಪದ ಕಲೆ, ಬಣ್ಣಬಣ್ಣದ ಉಡುಪುಗಳು ಮತ್ತು ಭಾರತದ ಪ್ರಸಿದ್ಧ ಸ್ಥಳಗಳ ದೃಶ್ಯಾವಳಿಗಳು ವೇದಿಕೆಯಲ್ಲಿ ಮೂಡಿಬಂದವು.
ಕಲಾತ್ಮಕ ಪ್ರದರ್ಶನದ ನಂತರ ಕಾಮನ್‌ವೆಲ್ತ್ ಕ್ರೀಡಾಕೂಟದ ಧ್ವಜವನ್ನು ಅಧಿಕೃತವಾಗಿ ಭಾರತಕ್ಕೆ ಹಸ್ತಾಂತರಿಸಲಾಯಿತು. ಈ ವೇಳೆ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಮತ್ತು ಭಾರತೀಯ ಒಲಿಂಪಿಕ್ ಸಂಘದ ಅಧ್ಯಕ್ಷೆ ಪಿ.ಟಿ. ಉಷಾ ಮುಖ್ಯ ಅತಿಥಿಗಳೊಂದಿಗೆ ಭಾಗವಹಿಸಿದ್ದರು. ೨೦೩೦ರ ಐತಿಹಾಸಿಕ ೧೦೦ನೇ ಕಾಮನ್‌ವೆಲ್ತ್ ಕ್ರೀಡಾಕೂಟ ಅಹಮದಾಬಾದ್ ನಗರದಲ್ಲಿ ನಡೆಯಲಿದೆ ಎಂದು ಇದೇ ವೇಳೆ ಪ್ರಕಟಿಸಲಾಯಿತು.
೨೦೧೦ರಲ್ಲಿ ದೆಹಲಿಯಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜಿಸಲಾಗಿತ್ತು. ಇದೀಗ ಎರಡನೇ ಬಾರಿಗೆ ಭಾರತ ಈ ಕ್ರೀಡಾಕೂಟದ ಆತಿಥ್ಯ ವಹಿಸಿಕೊಳ್ಳುತ್ತಿದ್ದು, ಅಹಮದಾಬಾದ್ ಜಾಗತಿಕ ಕ್ರೀಡಾಪಟುಗಳನ್ನು ಸ್ವಾಗತಿಸಲು ಸಜ್ಜಾಗುತ್ತಿದೆ.

