ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಮಹಿಳಾ ರಿಕರ್ವ್ ಆರ್ಚರಿ ತಂಡ ಐತಿಹಾಸಿಕ ಚಿನ್ನದ ಪದಕ ಗೆದ್ದಿದೆ. ಅಂಕಿತಾ ಭಕತ್, ಕೀರ್ತಿ ಹಾಗೂ ಕುಂಕುಮ್ ಅನಿಲ್ ಮೊಹೋಡ್ ಅವರನ್ನೊಳಗೊಂಡ ಭಾರತ ತಂಡ ಫೈನಲ್ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು 5-3 ಅಂಕಗಳಿಂದ ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿತು.
ಹೌದು. ಏಷ್ಯನ್ ಗೇಮ್ಸ್ 2026ರಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ಒಲಿದುಬಂದಿದೆ. ಮಹಿಳಾ ತಂಡದ ರಿಕರ್ವ್ ಆರ್ಚರಿ ವಿಭಾಗದಲ್ಲಿ ಅಂಕಿತಾ ಭಕತ್, ಕೀರ್ತಿ ಹಾಗೂ ಕುಂಕುಮ್ ಮೊಹೋಡ್ ಅವರನ್ನು ಒಳಗೊಂಡ ಭಾರತೀಯ ತಂಡವು ದಕ್ಷಿಣ ಕೊರಿಯಾವನ್ನು 5-3 ಅಂತರದಲ್ಲಿ ಮಣಿಸಿ ಚಿನ್ನದ ಪದಕ ಗೆದ್ದಿದೆ.
ಇದರೊಂದಿಗೆ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಮಹಿಳಾ ತಂಡದ ರಿಕರ್ವ್ ಆರ್ಚರಿಯಲ್ಲಿ ಭಾರತ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ.ಗಾಳಿಯ ವೇಗದ ಪರಿಸ್ಥಿತಿಯಲ್ಲಿ ನಡೆದ ರೋಚಕ ಫೈನಲ್ನ ಮೊದಲ ಎರಡು ಸೆಟ್ಗಳು ಸಮಬಲದಲ್ಲಿ ಅಂತ್ಯಗೊಂಡವು. ಎರಡೂ ತಂಡಗಳು ಕ್ರಮವಾಗಿ 54 ಮತ್ತು 56 ಅಂಕ ಗಳಿಸಿ ತಲಾ ಒಂದು ಸೆಟ್ ಪಾಯಿಂಟ್ ಪಡೆದವು.
ಮೂರನೇ ಸೆಟ್ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಕಾಂಗ್ ಚೇ-ಯಂಗ್ ಅವರನ್ನು ಒಳಗೊಂಡ ದಕ್ಷಿಣ ಕೊರಿಯಾ ತಂಡ ಒತ್ತಡಕ್ಕೆ ಸಿಲುಕಿತು. ಕೊರಿಯಾ ತಂಡ ಸತತ ಮೂರು ಬಾರಿ 8 ಅಂಕ ಗಳಿಸಿ ಒಟ್ಟು 52 ಅಂಕ ಪಡೆದರೆ, ಭಾರತೀಯ ಬಿಲ್ಲುಗಾರ್ತಿಯರು 55 ಅಂಕ ಗಳಿಸಿ ಸೆಟ್ ಗೆದ್ದರು.
ನಾಲ್ಕನೇ ಸೆಟ್ನಲ್ಲಿ ದಕ್ಷಿಣ ಕೊರಿಯಾ 54 ಅಂಕ ಗಳಿಸಿತು. ಭಾರತ ಪರ ಕೀರ್ತಿ ಆರಂಭದಲ್ಲಿ 8 ಅಂಕ ಗಳಿಸಿದರು. ಬಳಿಕ ಪರಿಶೀಲನೆಯಲ್ಲಿ ಅದನ್ನು 9 ಅಂಕ ಎಂದು ಬದಲಾಯಿಸಲಾಯಿತು. ಇದರಿಂದ ಭಾರತದ ಒಟ್ಟು ಮೊತ್ತ 54ಕ್ಕೆ ತಲುಪಿ ಸೆಟ್ ಸಮಬಲಗೊಂಡಿತು. ಅಂತಿಮವಾಗಿ ಭಾರತ 5-3 ಅಂತರದಲ್ಲಿ ಪಂದ್ಯ ಗೆದ್ದು ಚಿನ್ನದ ಪದಕಕ್ಕೆ ಮುತ್ತಿಕ್ಕಿತು.
ಫೈನಲ್ಗೂ ಮುನ್ನ ಭಾರತ ತಂಡ ಸೆಮಿಫೈನಲ್ನಲ್ಲಿ ಚೀನಾವನ್ನು 5-1 ಅಂತರದಿಂದ ಸೋಲಿಸಿ ಚಿನ್ನದ ಪದಕದ ಪಂದ್ಯಕ್ಕೆ ಅರ್ಹತೆ ಪಡೆದಿತ್ತು. ಚೀನಾ ತಂಡದಲ್ಲಿ ಯೆವೇಯಿ ಹುವಾಂಗ್, ಕಿ ಯು ಮತ್ತು ಜಿಂಗ್ಯಿ ಝು ಇದ್ದರು. ಈ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 67ಕ್ಕೆ ಏರಿದ್ದು, ಇದರಲ್ಲಿ 11 ಚಿನ್ನ, 23 ಬೆಳ್ಳಿ ಮತ್ತು 33 ಕಂಚಿನ ಪದಕಗಳು ಸೇರಿವೆ.
2023ರ ಹ್ಯಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಮಹಿಳಾ ಕಾಂಪೌಂಡ್ ಆರ್ಚರಿ ತಂಡ ಕಂಚಿನ ಪದಕ ಗೆದ್ದಿತ್ತು. ಇದೀಗ ರಿಕರ್ವ್ ವಿಭಾಗದಲ್ಲಿ ಐತಿಹಾಸಿಕ ಚಿನ್ನ ಗೆದ್ದು ಭಾರತ ಹೊಸ ದಾಖಲೆ ನಿರ್ಮಿಸಿದೆ.

