ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಿಹಿಸುದ್ದಿ ನೀಡಿದೆ. ಪಡಿತರ ಚೀಟಿಯ ಇ-ಕೆವೈಸಿ (e-KYC) ಪೂರ್ಣಗೊಳಿಸಲು ಇದ್ದ ಗಡುವನ್ನು ಅಕ್ಟೋಬರ್ 20, 2026ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಸೆಪ್ಟೆಂಬರ್ 30 ಅಂತಿಮ ದಿನವಾಗಿತ್ತು.
ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ಉಂಟಾದ ಸರ್ವರ್ ಸಮಸ್ಯೆ, ತಾಂತ್ರಿಕ ದೋಷ ಹಾಗೂ ಜನದಟ್ಟಣೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ. ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿದಾರರು ಈ ಅವಧಿಯಲ್ಲಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ.
ಪ್ರತಿಯೊಬ್ಬ ಸದಸ್ಯರಿಗೂ ಇ-ಕೆವೈಸಿ ಅಗತ್ಯ
ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಪ್ರತಿಯೊಬ್ಬ ಸದಸ್ಯರೂ ಇ-ಕೆವೈಸಿ ಪೂರ್ಣಗೊಳಿಸಬೇಕಾಗಿದ್ದು, ಸಾಮಾನ್ಯವಾಗಿ ನ್ಯಾಯಬೆಲೆ ಅಂಗಡಿಯಲ್ಲಿರುವ ಇ-ಪೋಸ್ ಯಂತ್ರದ ಮೂಲಕ ಬಯೋಮೆಟ್ರಿಕ್ ದೃಢೀಕರಣ ಮಾಡಲಾಗುತ್ತದೆ.
ಇ-ಕೆವೈಸಿ ಪೂರ್ಣಗೊಳಿಸದಿದ್ದಲ್ಲಿ ಸಂಬಂಧಪಟ್ಟ ಸದಸ್ಯರ ಹೆಸರನ್ನು ಪಡಿತರ ಸೌಲಭ್ಯದಿಂದ ತಾತ್ಕಾಲಿಕವಾಗಿ ಕೈಬಿಡುವ ಅಥವಾ ಆಹಾರ ಧಾನ್ಯ ವಿತರಣೆಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ನ್ಯಾಯಬೆಲೆ ಅಂಗಡಿಗಳ ಸಮಯದಲ್ಲೂ ಬದಲಾವಣೆ
ಅಕ್ಟೋಬರ್ 1ರಿಂದ ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 8ರವರೆಗೆ ಎರಡು ಅವಧಿಯಲ್ಲಿ ಕಾರ್ಯನಿರ್ವಹಿಸುವಂತೆ ವೇಳಾಪಟ್ಟಿ ಪರಿಷ್ಕರಿಸಲಾಗಿದೆ. ಇದರಿಂದ ಕೆಲಸಕ್ಕೆ ತೆರಳುವವರು ತಮ್ಮ ಅನುಕೂಲದ ಸಮಯದಲ್ಲಿ ಪಡಿತರ ಪಡೆಯಲು ಅವಕಾಶ ಸಿಗಲಿದೆ.
ನಕಲಿ ಲಿಂಕ್ ಗಳ ಬಗ್ಗೆ ಎಚ್ಚರಿಕೆ
ಇ-ಕೆವೈಸಿ ಹೆಸರಿನಲ್ಲಿ ಸೈಬರ್ ವಂಚಕರು ನಕಲಿ ಲಿಂಕ್ ಗಳನ್ನು ಕಳುಹಿಸುತ್ತಿರುವ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಪರಿಚಿತ ಲಿಂಕ್ ಕ್ಲಿಕ್ ಮಾಡಬಾರದು, OTP, UPI PIN, ಬ್ಯಾಂಕ್ ಖಾತೆ ಅಥವಾ ಕಾರ್ಡ್ ವಿವರಗಳನ್ನು ಯಾರಿಗೂ ನೀಡಬಾರದು. ಇ-ಕೆವೈಸಿಯನ್ನು ಅಧಿಕೃತ ಮಾರ್ಗದಲ್ಲೇ ಮಾಡಿಸಿಕೊಳ್ಳುವುದು ಸುರಕ್ಷಿತ.
‘ಅನ್ನ ಸೇವೆ’ ಆ್ಯಪ್ ಗೆ ಚಾಲನೆ: ಮನೆಯಲ್ಲೇ ಕುಳಿತು ರೇಷನ್ ಕಾರ್ಡ್ ಇ-ಕೆವೈಸಿ ಪೂರ್ಣಗೊಳಿಸಿ
ಬೆಂಗಳೂರು: ಪಡಿತರ ಚೀಟಿದಾರರು ಇ-ಕೆವೈಸಿಗಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸುವ ಉದ್ದೇಶದಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ‘ಅನ್ನ ಸೇವೆ (Anna Seve)’ ಮೊಬೈಲ್ ಆ್ಯಪ್ಗೆ ಚಾಲನೆ ನೀಡಿದೆ. ಅ.1ರಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಆ್ಯಪ್ ಲೋಕಾರ್ಪಣೆ ಮಾಡಿದರು.
ಈ ಆ್ಯಪ್ ಮೂಲಕ ಅರ್ಹ ಫಲಾನುಭವಿಗಳು ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ರೇಷನ್ ಕಾರ್ಡ್ನ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮುಖ ಗುರುತಿಸುವ (Face Authentication) ತಂತ್ರಜ್ಞಾನ ಬಳಸುವ ವ್ಯವಸ್ಥೆಯೂ ಇದರಲ್ಲಿ ಇರಲಿದೆ.
ಮೊದಲ ಹಂತದಲ್ಲಿ 8 ಜಿಲ್ಲೆಗಳಲ್ಲಿ ಸೇವೆ
ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಈ 8 ಜಿಲ್ಲೆಗಳಲ್ಲಿ ಆ್ಯಪ್ ಸೇವೆ ಆರಂಭಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್, ಕೊಪ್ಪಳ ಜಿಲ್ಲೆಗಳಲ್ಲಿ ಆರಂಭಿಸಲಾಗಿದ್ದು, ಅ.10ರಿಂದ ರಾಜ್ಯದ ಉಳಿದ ಜಿಲ್ಲೆಗಳಿಗೂ ಈ ಸೌಲಭ್ಯ ವಿಸ್ತರಿಸುವುದಾಗಿ ಇಲಾಖೆ ತಿಳಿಸಿದೆ.
ಅನ್ನ ಸೇವೆ’ ಬಳಸುವ ಮೊದಲು CeG Face KYC App, AadhaarFaceRD ಮತ್ತು Anna Seve ಆ್ಯಪ್ಗಳನ್ನು ಮೊಬೈಲ್ನಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಮುಖ್ಯವಾಗಿ: ಇ-ಕೆವೈಸಿ ಮಾಡಿಸಿಕೊಳ್ಳದ ಪಡಿತರ ಚೀಟಿ ಫಲಾನುಭವಿಗಳು ನಿಗದಿತ ಗಡುವಿನೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳುವಂತೆ ಇಲಾಖೆ ಸೂಚಿಸಿದೆ.

