ಜನನ ಮತ್ತು ಮರಣ ಪ್ರಮಾಣಪತ್ರ ಪಡೆಯುವವರಿಗೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅಕ್ಟೋಬರ್ 1ರಿಂದ ಜಾರಿಯಾಗಿರುವ ನಿಯಮಗಳ ಪ್ರಕಾರ, ಜನನ ಅಥವಾ ಮರಣವನ್ನು 21 ದಿನಗಳೊಳಗೆ ನೋಂದಣಿ ಮಾಡಿಸದಿದ್ದರೆ ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆ ಕಠಿಣವಾಗಲಿದೆ. ಒಂದು ವರ್ಷ ಅಥವಾ ಎರಡು ವರ್ಷಗಳ ಬಳಿಕ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳ ಅನುಮತಿ ಅಗತ್ಯವಾಗಲಿದ್ದು, ಎರಡು ವರ್ಷಗಳ ನಂತರ ನೋಂದಣಿಗೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆದೇಶ ಬೇಕಾಗುತ್ತದೆ.
ಹೌದು. ಕೇಂದ್ರ ಸರ್ಕಾರ ಜನನ ಮತ್ತು ಮರಣ ಪ್ರಮಾಣಪತ್ರಗಳ ವಿತರಣೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಅಕ್ಟೋಬರ್ 1, 2026ರಿಂದ ಈ ಹೊಸ ನಿಯಮಗಳು ಜಾರಿಗೆ ಬಂದಿವೆ. ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯಲ್ಲಿ ವಿಳಂಬವನ್ನು ತಡೆಯುವುದು ಹಾಗೂ ಪ್ರಮಾಣಪತ್ರಗಳ ವಿತರಣೆಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.
ಜನನ ಮತ್ತು ಮರಣ ನೋಂದಣಿ ಕಾಯ್ದೆ, 1969ಕ್ಕೆ ಕೇಂದ್ರ ಸರ್ಕಾರ ಕೆಲವು ತಿದ್ದುಪಡಿಗಳನ್ನು ಮಾಡಿದೆ. ಈ ತಿದ್ದುಪಡಿ ಮಸೂದೆಗೆ ಈ ವರ್ಷದ ಆಗಸ್ಟ್‌ನಲ್ಲಿ ನಡೆದ ಮುಂಗಾರು ಅಧಿವೇಶನದಲ್ಲಿ ಅನುಮೋದನೆ ದೊರೆತಿದ್ದು, ರಾಷ್ಟ್ರಪತಿ ಅವರ ಒಪ್ಪಿಗೆಯ ಬಳಿಕ ಅಕ್ಟೋಬರ್ 1ರಿಂದ ಜಾರಿಗೆ ಬಂದಿದೆ.
ಹೊಸ ನಿಯಮಗಳು ಹೀಗಿವೆ
ಜನನ ಅಥವಾ ಮರಣ ಸಂಭವಿಸಿದ 21 ದಿನಗಳೊಳಗೆ ನೋಂದಣಿ ಮಾಡಿಕೊಂಡರೆ ಪ್ರಕ್ರಿಯೆ ಸರಳವಾಗಿರುತ್ತದೆ. ಯಾವುದೇ ಶುಲ್ಕವಿಲ್ಲದೆ ಪ್ರಮಾಣಪತ್ರವನ್ನು ಪಡೆಯಬಹುದು.
ಆದರೆ 21 ದಿನಗಳ ನಂತರ ನೋಂದಣಿಗೆ ಅರ್ಜಿ ಸಲ್ಲಿಸಿದರೆ ಪ್ರಕ್ರಿಯೆ ಕಠಿಣವಾಗುತ್ತದೆ.
-
21 ದಿನಗಳ ನಂತರದಿಂದ ಒಂದು ವರ್ಷದೊಳಗೆ: ವಿಳಂಬ ನೋಂದಣಿಗೆ ಸಂಬಂಧಿಸಿದ ಹೆಚ್ಚುವರಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.
-
ಒಂದು ವರ್ಷದಿಂದ ಎರಡು ವರ್ಷದೊಳಗೆ: ಪ್ರಮಾಣಪತ್ರ ಪಡೆಯಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಉಪವಿಭಾಗಾಧಿಕಾರಿ (SDM) ಅವರ ಆದೇಶ ಅಗತ್ಯವಾಗುತ್ತದೆ.
-
ಎರಡು ವರ್ಷಗಳ ನಂತರ: ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಆದೇಶ ಪಡೆದ ಬಳಿಕವೇ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಈ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಸಂಬಂಧಪಟ್ಟ ನೋಂದಣಾಧಿಕಾರಿಗಳಿಗೆ ನೀಡಲಾಗಿದೆ. ದೇಶದಾದ್ಯಂತ ಗ್ರಾಮ ಪಂಚಾಯಿತಿಗಳು, ನಗರ ಪಂಚಾಯಿತಿಗಳು, ಪುರಸಭೆಗಳು ಹಾಗೂ ಮಹಾನಗರ ಪಾಲಿಕೆಗಳಲ್ಲಿ ಈ ನಿಯಮಗಳು ಅನ್ವಯವಾಗಲಿವೆ.
ಬೇರೆ ಜಿಲ್ಲೆಯಲ್ಲಿ ಮರಣ ಸಂಭವಿಸಿದರೆ?
ಯಾವುದೇ ವ್ಯಕ್ತಿ ತನ್ನ ಸ್ವಂತ ಜಿಲ್ಲೆಯಲ್ಲಿ ಅಲ್ಲದೆ ಬೇರೆ ಜಿಲ್ಲೆಯಲ್ಲಿ ಮೃತಪಟ್ಟರೂ ಕುಟುಂಬಸ್ಥರು ಪ್ರಮಾಣಪತ್ರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಪದೇಪದೇ ಅಲೆದಾಡಬೇಕಾಗಿಲ್ಲ.ಮರಣೋತ್ತರ ಪರೀಕ್ಷೆ ನಡೆದಿದ್ದರೆ, ಆಸ್ಪತ್ರೆಯಿಂದ ನೀಡುವ ಸಂಬಂಧಿತ ಪ್ರಮಾಣಪತ್ರವನ್ನು ಮೀ ಸೇವಾ ಕೇಂದ್ರದಲ್ಲಿ ಸಲ್ಲಿಸಿ ಮರಣ ಪ್ರಮಾಣಪತ್ರ ಪಡೆಯಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮರಣ ಅಥವಾ ಜನನ ಸಂಭವಿಸಿದ 21 ದಿನಗಳೊಳಗೆ ನೋಂದಣಿ ಮಾಡಿಸಿಕೊಳ್ಳುವುದು ಮುಖ್ಯ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ವಿಳಂಬವಾದಂತೆ ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆ ಹೆಚ್ಚು ಸಂಕೀರ್ಣವಾಗಬಹುದು.
ಜನನ ಪ್ರಮಾಣಪತ್ರವು ಪ್ರತಿಯೊಬ್ಬರಿಗೂ ಪ್ರಮುಖ ದಾಖಲೆಯಾಗಿರುವುದರಿಂದ, ಮಗುವಿನ ಜನನವಾದ ಬಳಿಕ ಪೋಷಕರು ಸಾಧ್ಯವಾದಷ್ಟು ಬೇಗ ನೋಂದಣಿ ಮಾಡಿಸಿಕೊಳ್ಳುವುದು ಸೂಕ್ತ. ಇದರಿಂದ ಪ್ರಮಾಣಪತ್ರವನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ.

