ಬೆಂಗಳೂರು-ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರ ದಶಕದ ಕನಸಾದ ಹಳೆಯ ಪಿಂಚಣಿ ಯೋಜನೆ (OPS) ಮರುಜಾರಿಗೆ ರಾಜ್ಯ ಸರ್ಕಾರ ಕೊನೆಗೂ ಗಂಭೀರ ಹೆಜ್ಜೆ ಇಟ್ಟಿದೆ.
ಹೊಸ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ, ಮತ್ತೆ ಒಪಿಎಸ್ ಜಾರಿಗೊಳಿಸುವಂತೆ ಸಲ್ಲಿಕೆಯಾಗಿದ್ದ ಸುದೀರ್ಘ ಮನವಿಯನ್ನು ಪರಿಶೀಲಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಅಧಿಕೃತ ಸೂಚನೆ ನೀಡಿದ್ದಾರೆ.
2.8 ಲಕ್ಷಕ್ಕೂ ಹೆಚ್ಚು ನೌಕರರಿಗೆ ಲಾಭ: ರಾಜ್ಯದಲ್ಲಿ ಪ್ರಸ್ತುತ ಸುಮಾರು 5.7 ಲಕ್ಷ ಸರ್ಕಾರಿ ನೌಕರರಿದ್ದು, 2006ರ ನಂತರ ಸೇವೆಗೆ ಸೇರಿದ 2.8 ಲಕ್ಷಕ್ಕೂ ಹೆಚ್ಚು ನೌಕರರು ಎನ್‌ಪಿಎಸ್ ವ್ಯಾಪ್ತಿಯಲ್ಲಿದ್ದಾರೆ.
ಇತರ ರಾಜ್ಯಗಳಲ್ಲಿ ಒಪಿಎಸ್ ಜಾರಿಯ ಮಾದರಿ
ರಾಜಸ್ಥಾನ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಪಂಜಾಬ್, ಜಾರ್ಖಂಡ್ ರಾಜ್ಯಗಳಲ್ಲಿ ಸಚಿವ ಸಂಪುಟ ಮತ್ತು ಬಜೆಟ್ ಮೂಲಕ ಎನ್‌ಪಿಎಸ್ ರದ್ದುಪಡಿಸಿ ಒಪಿಎಸ್ ಮರುಜಾರಿ ಮಾಡಲಾಗಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಎನ್‌ಪಿಎಸ್‌ಗೆ ಪರ್ಯಾಯವಾಗಿ ಕೊಡುಗೆ ಆಧಾರಿತ (Guaranteed/Contributory) ಪಿಂಚಣಿ ವ್ಯವಸ್ಥೆ ಜಾರಿಗೆ ತಂದಿವೆ.
ಪಶ್ಚಿಮ ಬಂಗಾಳ ಮೊದಲಿನಿಂದಲೂ ಎನ್‌ಪಿಎಸ್ ಯೋಜನೆಯನ್ನೇ ಜಾರಿಗೊಳಿಸಿಲ್ಲ.
ಚುನಾವಣಾ ಭರವಸೆ ಮತ್ತು ಅಧ್ಯಯನ ಸಮಿತಿ ವರದಿ
ಚುನಾವಣಾ ಭರವಸೆ ಈಡೇರಿಕೆಯತ್ತ ಹೆಜ್ಜೆ: ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ್ದ ಪ್ರಮುಖ ಭರವಸೆಗಳಲ್ಲಿ ಎನ್‌ಪಿಎಸ್ ರದ್ದುಗೊಳಿಸುವುದೂ ಒಂದಾಗಿತ್ತು.
ಒಪಿಎಸ್ ಜಾರಿಗೊಳಿಸಿರುವ ರಾಜಸ್ಥಾನ, ಹಿಮಾಚಲ ಪ್ರದೇಶ ಹಾಗೂ ಪರ್ಯಾಯ ಪಿಂಚಣಿ ಮಾದರಿ ಅಳವಡಿಸಿಕೊಂಡಿರುವ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಹಿರಿಯ ಐಎಎಸ್ ಅಧಿಕಾರಿಗಳ ಸಮಿತಿ ಭೇಟಿ ನೀಡಿ ಅಧ್ಯಯನ ನಡೆಸಿದ್ದು, ಅಂತಿಮ ವರದಿ ಸಲ್ಲಿಕೆಯಾಗಬೇಕಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಳೆಯ ಪಿಂಚಣಿ ಯೋಜನೆ ಮರುಜಾರಿಗೆ ತರುವ ಸ್ಪಷ್ಟ ಭರವಸೆ ನೀಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ಪ್ರಸ್ತುತ ಸಕಾರಾತ್ಮಕ ಚರ್ಚೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ನೌಕರರ ಪರವಾಗಿ ಬಲವಾದ ನಿರ್ಧಾರ ಹೊರಬರಲಿದೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದ್ದಾರೆ.
ಆರ್ಥಿಕ ಹೊರೆ ಮತ್ತು ಇತರ ಬೇಡಿಕೆಗಳು
ಪ್ರಸ್ತುತ ರಾಜ್ಯ ಸರ್ಕಾರವು ವೇತನ ಮತ್ತು ಪಿಂಚಣಿಗಾಗಿ ವರ್ಷಕ್ಕೆ ಸುಮಾರು ₹1.2 ಲಕ್ಷ ಕೋಟಿ ವೆಚ್ಚ ಮಾಡುತ್ತಿದೆ. ಒಪಿಎಸ್ ಜಾರಿಯಾದ ತಕ್ಷಣವೇ ಆರ್ಥಿಕ ಪರಿಣಾಮ ಬೀರದಿದ್ದರೂ, ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ನೌಕರರು ನಿವೃತ್ತರಾದಾಗ ಬೊಕ್ಕಸಕ್ಕೆ ಭಾರಿ ಹೊರೆಯಾಗುವ ಆತಂಕ ಹಣಕಾಸು ತಜ್ಞರಲ್ಲಿದೆ.
ಕೇಂದ್ರ ಸರ್ಕಾರದ ನೌಕರರಿಗೆ ಸಮಾನವಾಗಿ ವೇತನ ಮತ್ತು ಭತ್ಯೆಗಳನ್ನು ನೀಡಬೇಕೆಂಬ ಬೇಡಿಕೆಯನ್ನೂ ನೌಕರರ ಸಂಘ ಮುಂದಿಟ್ಟಿದ್ದು, ಇದಕ್ಕೆ 7ನೇ ವೇತನ ಆಯೋಗವೂ ಶಿಫಾರಸು ಮಾಡಿದೆ.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಚುನಾವಣಾ ವಾತಾವರಣ ಬಿಸಿಯಾಗಲಿರುವ ಹಿನ್ನೆಲೆಯಲ್ಲಿ, ನೌಕರರ ಈ ಪ್ರಮುಖ ಹಾಗೂ ನ್ಯಾಯಯುತ ಬೇಡಿಕೆಯನ್ನು ಈಡೇರಿಸಲು ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ಶ್ರಮಿಸುತ್ತಿದೆ. ಶೀಘ್ರದಲ್ಲೇ ಐಎಎಸ್ ಸಮಿತಿಯ ವರದಿ ಬಂದ ಬಳಿಕ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ.

