ಬೆಂಗಳೂರು: ಒಂದು ವೇಳೆ ಪ್ರಸಕ್ತ ಅಧಿವೇಶನದಲ್ಲಿ ಇಲ್ಲವೇ, ಮುಂಬರುವ ಅಧಿವೇಶನದಲ್ಲಿ ಬಹುನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆಯನ್ನು ಕೇಂದ್ರ ಸರ್ಕಾರ ಅನುಷ್ಠಾನ ಮಾಡಿದರೆ ಶಾಸನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಾಗಲಿದೆ.
ಮಹಿಳೆಯರ ರಾಜಕೀಯ ಪ್ರಾತಿನಿಧ್ಯವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿರುವ ‘ನಾರಿ ಶಕ್ತಿ ವಂದನ ಅಧಿನಿಯಮ’ (ಮಹಿಳಾ ಮೀಸಲಾತಿ ಕಾಯ್ದೆ) ಸದ್ಯ ದೇಶದ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಂಸತ್ತಿನಲ್ಲಿ ಈ ಕುರಿತಾದ ಇತ್ತೀಚಿನ ಬೆಳವಣಿಗೆಗಳು ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಯನ್ನು ಹುಟ್ಟುಹಾಕಿವೆ.
2023ರಲ್ಲಿ ಸಂಸತ್ತಿನಲ್ಲಿ ಅಂಗೀಕಾರವಾಗಿದ್ದ ‘ನಾರಿ ಶಕ್ತಿ ವಂದನ ಅಧಿನಿಯಮ’ಕ್ಕೆ (106ನೇ ತಿದ್ದುಪಡಿ) ಅಧಿಸೂಚನೆ ಹೊರಡಿಸಿ, ಏಪ್ರಿಲ್ 2026ರಲ್ಲಿ ಜಾರಿಗೆ ತರಲಾಯಿತು. ಆದರೆ, ಇತ್ತೀಚೆಗೆ ಮಂಡಿಸಲಾದ 131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ (ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿದ ಕ್ಷೇತ್ರಗಳ ಮರುಹೊಂದಾಣಿಕೆ ಅಥವಾ ಡಿಲಿಮಿಟೇಶನ್ಗೆ ಸಂಬಂಧಿಸಿದಂತೆ), ಲೋಕಸಭೆಯಲ್ಲಿ ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತ ಪಡೆಯುವಲ್ಲಿ ವಿಫಲವಾಗಿದೆ.
ಇದರಿಂದಾಗಿ ಈ ಮಸೂದೆಯ ಮುಂದಿನ ಹಾದಿ ಸದ್ಯಕ್ಕೆ ಅನಿಶ್ಚಿತವಾಗಿದೆ.
ಕರ್ನಾಟಕ ವಿಧಾನಸಭೆಯ ಮೇಲೆ ಪರಿಣಾಮ
ಹಾಗೊಂದು ವೇಳೆ ಈ ಮೀಸಲಾಗಿಯೂ ಅನುಷ್ಠಾನಕ್ಕೆ ಬಂದರೆ ಪ್ರಸ್ತುತ ಕರ್ನಾಟಕದ ವಿಧಾನಸಭೆಯ ಚಿತ್ರಣವೇ ಬದಲಾಗಲಿದೆ.
ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಎಲ್ಲಾ ರಾಜಕೀಯ ಪಕ್ಷಗಳು ನಾಮಕಅವಸ್ಥೆ ಎಂಬಂತೆ ಬೆರಳೆಣಿಕೆಯಷ್ಟು ಮೀಸಲಾತಿಯನ್ನು ನೀಡುತ್ತಾ ಬಂದಿದ್ದವು ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಸೇರಿದಂತೆ ಯಾವುದೇ ರಾಜಕೀಯ ಪಕ್ಷವು ಇದಕ್ಕೆ ಹೊರತಾಗಿಲ್ಲ.
ಮಹಿಳೆಯರಿಗೆ ಶಾಸನಸಭೆಗಳಲ್ಲಿ ಹೆಚ್ಚಿನ ಸ್ಥಾನಮನ ಸಿಗಬೇಕು ಅವರ ಸಬಲೀಕರಣ ಆಗಬೇಕೆಂದು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಕೇವಲ ಭಾಷಣ ಬಿಗಿಯುತ್ತಿದ್ದರೆ ಹೊರತು ಚುನಾವಣೆ ಬಂದಾಗ ಮಹಿಳೆಯರಿಗೆ ಹೆಸರಿಗೆ ಅಷ್ಟೇ ಕೆಲವೇ ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ನೀಡಿ ಕೈ ತೊಳೆದುಕೊಂಡು ಇದು ಒಂದು ರೀತಿ ಮೂಗಿಗೆ ತುಪ್ಪ ಸವರಿದಂತೆ ಇತ್ತು.
ಸಂಸತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚೈತ್ರದ ಎನ್.ಡಿ.ಎ ಸರ್ಕಾರ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಇನ್ನಿಲ್ಲದ ಕಸರತ್ತು ನಡೆಸಿದೆ ಈ ಮಸೂದೆ ಜಾರಿಯಾದರೆ ಕರ್ನಾಟಕದ ಮೇಲೆ ಆಗಬಹುದಾದ ರಾಜಕೀಯ ಪರಿಣಾಮಗಳೇನು ಎಂಬುದೇ ಈ ಸುದ್ದಿಯ ಮೂಲಸಾರ.
ಕ್ಷೇತ್ರಗಳ ಸಂಖ್ಯೆ ಮತ್ತು ಮೀಸಲಾತಿ ಪ್ರಮಾಣ
ಸದಸ್ಯರ ಸಂಖ್ಯೆ ಹೆಚ್ಚಳ
ಪ್ರಸ್ತುತ ಕರ್ನಾಟಕ ವಿಧಾನಸಭೆಯು 224 ಕ್ಷೇತ್ರಗಳನ್ನು ಹೊಂದಿದೆ. ಮೀಸಲಾತಿ ಜಾರಿಯಾದಾಗ, ಒಟ್ಟು ಕ್ಷೇತ್ರಗಳ ಸಂಖ್ಯೆಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ (ಮುಂಬರುವ ಕ್ಷೇತ್ರ ಮರುವಿಂಗಡಣೆ ಅಥವಾ ಡಿಲಿಮಿಟೇಶನ್ ಆಧಾರದ ಮೇಲೆ). ಪ್ರಸ್ತುತ 224 ಕ್ಷೇತ್ರಗಳ ಪೈಕಿ 33% ಲೆಕ್ಕ ಹಾಕಿದರೆ, ಸುಮಾರು 74 ರಿಂದ 75 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ.
ಈ ಮೀಸಲಾತಿಯು ಜನಗಣತಿ ಮತ್ತು ಕ್ಷೇತ್ರ ಮರುಹೊಂದಾಣಿಕೆ (Delimitation) ಪ್ರಕ್ರಿಯೆಯ ನಂತರ ಜಾರಿಗೆ ಬರುತ್ತದೆ. ಈ ಸಂದರ್ಭದಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು, ಇದು ರಾಜ್ಯದ ರಾಜಕೀಯ
ಚಿತ್ರಣವನ್ನು ಸಂಪೂರ್ಣವಾಗಿ ಬದಲಾಯಿಸಲಿದೆ.
ರಾಜಕೀಯ ಸಮೀಕರಣಗಳಲ್ಲಿ ಆಗಲಿರುವ ಬದಲಾವಣೆ
ರಾಜಕೀಯ ಸಮೀಕರಣಗಳ ಬದಲಾವಣೆ:
ಈ ಮೀಸಲಾತಿಯು ಜಾರಿಗೆ ಬಂದ ನಂತರ, ರಾಜ್ಯದ ರಾಜಕೀಯ ಪಕ್ಷಗಳಿಗೆ ಮಹಿಳಾ ಅಭ್ಯರ್ಥಿಗಳನ್ನು ಕಡ್ಡಾಯವಾಗಿ ಕಣಕ್ಕಿಳಿಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಇದುವರೆಗೂ ಪುರುಷ ಪ್ರಾಬಲ್ಯವಿದ್ದ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರವೇಶದಿಂದ ಸ್ಥಳೀಯ ರಾಜಕೀಯ ಸಮೀಕರಣಗಳು ಬದಲಾಗಲಿವೆ. ಪಕ್ಷಗಳು ತಮ್ಮ ಸಾಂಪ್ರದಾಯಿಕ ಮತಬ್ಯಾಂಕ್ಗಳನ್ನು ಉಳಿಸಿಕೊಳ್ಳಲು ಹೊಸದಾಗಿ ಮಹಿಳಾ ನಾಯಕತ್ವವನ್ನು ರೂಪಿಸಬೇಕಾಗುತ್ತದೆ.
ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಈಗಾಗಲೇ ಮಹಿಳಾ ಮೀಸಲಾತಿಯು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದು ವಿಧಾನಸಭೆಯ ಹಂತದಲ್ಲಿ ಮತ್ತಷ್ಟು ಬಲಗೊಳ್ಳಲಿದೆ. ರಾಜಕೀಯದಲ್ಲಿ ಆಸಕ್ತಿ ಹೊಂದಿರುವ ಆದರೆ ಅವಕಾಶ ಸಿಗದ ಬುದ್ಧಿವಂತ ಮತ್ತು ಸಕ್ರಿಯ ಮಹಿಳೆಯರಿಗೆ ಇದು ಒಂದು ದೊಡ್ಡ ವೇದಿಕೆಯಾಗಿ ಪರಿಣಮಿಸುತ್ತದೆ.
ಮಹಿಳಾ ಪ್ರಾತಿನಿಧ್ಯ ಮತ್ತು ಸಮಾನತೆ
ಲಿಂಗ ಸಮಾನತೆ ಮತ್ತು ಪ್ರಾತಿನಿಧ್ಯ:
ಶಾಸನಸಭೆಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗುವುದರಿಂದ ಮಹಿಳಾ ಸಬಲೀಕರಣ, ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆಯಂತಹ ವಿಷಯಗಳು ಹೆಚ್ಚು ಪ್ರಭಾವಶಾಲಿ ಚರ್ಚೆಗಳಿಗೆ ವೇದಿಕೆ ಪಡೆಯಲಿವೆ.
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಮೀಸಲಾತಿ ಈಗಾಗಲೇ ಯಶಸ್ವಿಯಾಗಿರುವುದರಿಂದ, ಶಾಸನಸಭೆಯ ಮಟ್ಟದಲ್ಲಿಯೂ ಇದು ತಳಮಟ್ಟದ ಅಭಿವೃದ್ಧಿಗೆ ಪೂರಕವಾಗಲಿದೆ.ಮಹಿಳಾ ಮೀಸಲಾತಿಯು ಕೇವಲ ಒಂದು ಕಾಯ್ದೆಯಲ್ಲ, ಬದಲಾಗಿ ಪ್ರಜಾಪ್ರಭುತ್ವದ ಹರಿವಿನಲ್ಲಿ ಬದಲಾವಣೆಯ ಸಂಕೇತವಾಗಿದೆ.
ಮೀಸಲಾತಿಯ ಪ್ರಮಾಣ
106ನೇ ಸಾಂವಿಧಾನಿಕ ತಿದ್ದುಪಡಿಯ ಅನ್ವಯ, ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು (ಮೂರನೇ ಒಂದು ಭಾಗ) ಸ್ಥಾನಗಳನ್ನು ಮೀಸಲಿಡಲಾಗುತ್ತದೆ.ಈ ಮೀಸಲಾತಿಯು ಮುಂಬರುವ ಜನಗಣತಿ ಮತ್ತು ಅದರ ನಂತರ ನಡೆಯಲಿರುವ ಕ್ಷೇತ್ರ ಮರುವಿಂಗಡಣೆಯ (Delimitation) ಪ್ರಕ್ರಿಯೆಯ ನಂತರವಷ್ಟೇ ಜಾರಿಗೆ ಬರಲಿದೆ.
ಈ ಮೀಸಲಾತಿಯು ಮಹಿಳೆಯರನ್ನು ರಾಜಕೀಯದ ‘ಅಂಚಿನಿಂದ ಕೇಂದ್ರಕ್ಕೆ’ ತರುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಕರ್ನಾಟಕದ ರಾಜಕೀಯದಲ್ಲಿ ಮಹಿಳೆಯರ ಧ್ವನಿ ಬಲಗೊಳ್ಳುವುದು ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಸ್ವಾಗತಾರ್ಹ ಬೆಳವಣಿಗೆಯಾಗಿದೆ. ರಾಜಕೀಯ ಪಕ್ಷಗಳು ಇದನ್ನು ಕೇವಲ ಮತಬ್ಯಾಂಕ್ ಆಗಿ ನೋಡದೆ, ಸಮಾನ ಪ್ರಾತಿನಿಧ್ಯದ ಅವಕಾಶವಾಗಿ ಬಳಸಿಕೊಂಡಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ.
ಮಸೂದೆಯ ಭವಿಷ್ಯ ಮತ್ತು ಸವಾಲುಗಳು
ಆದರೆ, ಸಂಸತ್ತಿನಲ್ಲಿ ಮಸೂದೆಯ ಸೋಲು ಮತ್ತು ರಾಜಕೀಯ ಪಕ್ಷಗಳ ಭಿನ್ನಾಭಿಪ್ರಾಯಗಳು ಈ ಪ್ರಕ್ರಿಯೆಯನ್ನು ವಿಳಂಬಗೊಳಿಸಿವೆ. ರಾಜ್ಯದ ಜನತೆ ಮತ್ತು ಮಹಿಳಾ ಸಂಘಟನೆಗಳು ಈ ಮೀಸಲಾತಿಯನ್ನು ಎದುರು ನೋಡುತ್ತಿದ್ದು, ಭವಿಷ್ಯದ ದಿನಗಳಲ್ಲಿ ರಾಜಕೀಯ ಇಚ್ಛಾಶಕ್ತಿಯು ಈ ಮಸೂದೆಯನ್ನು ಹೇಗೆ ಸಾಕಾರಗೊಳಿಸಲಿದೆ ಎಂಬುದು ಕಾದು ನೋಡಬೇಕಿದೆ.

