ಕಾನ್ಪುರ: ಬಿ.ಟೆಕ್ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದ ಯುವಕನೊಬ್ಬ ಸರ್ಕಾರಿ ಕೆಲಸ ಸಿಗಲಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಮೃತನನ್ನು 23 ವರ್ಷದ ಆನಂದ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಕಾನ್ಪುರದ ಪ್ರಸಿದ್ಧ ಪ್ರಣವೀರ್ ಸಿಂಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ 2024ನೇ ಸಾಲಿನ ಬಿಟೆಕ್ ವಿಭಾಗದಲ್ಲಿ ಟಾಪರ್ ಆಗಿದ್ದ ಹಾಗೂ ಇಡೀ ಉತ್ತರ ಪ್ರದೇಶದಕ್ಕೆ 3ನೇ ರ‍್ಯಾಂಕ್ ಗಳಿಸಿದ್ದ. ಕಾಲೇಜು ಘಟಿಕೋತ್ಸವದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರ ಕೈಯಿಂದಲೇ ಈತ ಚಿನ್ನದ ಪದಕ ಪಡೆದುಕೊಂಡಿದ್ದ.
ಸರ್ಕಾಅರಿ ಕೆಲಸಕ್ಕಾಗಿ ಅಲೆದಾಅಡಿ ಸುಸ್ತಾದ ಯುವಕ ಈಗ ದುಡುಕಿನ ನಿರ್ಧಾರ ಕೈಗೊಂಡಿದ್ದಾನೆ. ಗೋವಿಂದ್ ನಗರದಲ್ಲಿರುವ ತಮ್ಮ ಮೂರು ಅಂತಸ್ತಿನ ಮನೆಯಲ್ಲಿ ಆನಂದ್ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕುಟುಂಬಸ್ಥರು ಅಣ್ಣನ ಮದುವೆ ಮಾತುಕತೆಗಾಗಿ ಬಿಹಾರಕ್ಕೆ ಹೋಗಿದ್ದರು. ಈ ವೇಳೆ ಆನಂದ್ ಕುಮಾರ್ ಆತ್ಮಹತ್ಯೆ ಮಾಡಿಕೊಂದಿದ್ದಾನೆ. ಘಟನಾ ಸ್ಥಳದಲ್ಲಿ ಪೊಲೀಸರಿಗೆ 5 ಸಾಲುಗಳ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ಕ್ಷಮಿಸಿ ಅಪ್ಪಾ, ನಾನು ಸರ್ಕಾರಿ ಕೆಲಸ ಪಡೆಯಲು ಸುಮಾರು 50 ಬಾರಿ ಪರೀಕ್ಷೆ ಬರೆದು ಪ್ರಯತ್ನಿಸಿದೆ, ಆದರೆ ನನಗೆ ಯಶಸ್ಸು ಸಿಗಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ಎಂದು ಬರೆದಿದ್ದಾನೆ.
ಆನಂದ್ ಅವರ ತಂದೆ ರಾಜಕುಮಾರ್ ಸರ್ಕಾರಿ ಉದ್ಯೋಗದಿಂದ ನಿವೃತ್ತರಾದವರು. ಬಿಟೆಕ್ ಪದವಿ ಮುಗಿಸಿದ ನಂತರ ಆನಂದ್ ‘ಪವರ್ ಗ್ರಿಡ್’ ಸಂಸ್ಥೆಯಲ್ಲಿ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ಪೂರ್ಣಗೊಳಿಸಿದ್ದ. ನಂತರ ರೈಲ್ವೇಸ್, ಎಸ್‌ಎಸ್‌ಸಿ (SSC), ಬ್ಯಾಂಕಿಂಗ್ ಮತ್ತು ಶಿಕ್ಷಣ ಇಲಾಖೆಯ ಸರಣಿ ನೇಮಕಾತಿ ಪರೀಕ್ಷೆಗಳಿಗೆ ಹಗಲಿರುಳು ಸಿದ್ಧತೆ ನಡೆಸಿದ್ದ. 50 ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದರೂ ಹುದ್ದೆ ಸಿಗದಿದ್ದಕ್ಕೆ ಕಳೆದ ಕೆಲವು ತಿಂಗಳುಗಳಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ರಾಜ್ ಕುಮಾರ್ ಅಳಲು ತೋಡಿಕೊಂಡಿದ್ದಾರೆ.
ಖಾಸಗಿ ಕಾಲೇಜಿನಲ್ಲಿ ಟಾಪರ್ ಆಗಿ, ರಾಜ್ಯಪಾಲರಿಂದಲೇ ಚಿನ್ನದ ಪದಕ ಪಡೆದಿದ್ದರೂ ಸರ್ಕಾರಿ ಉದ್ಯೋಗಗಳಿಸಬೇಕು ಎಂಬ ಮಹದಾಸೆ ಯುವಕನನ್ನು ದುಡುಕಿನ ನಿರ್ಧಾರ ಕೈಗೊಳ್ಳುವಂತೆ ಮಾಡಿದೆ.

