ಬೀದರ್: ಸರ್ಕಾರಿ ಬಸ್ ಡಿಕ್ಕಿ ಹೊಡೆದು ಬೈಕ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಕಬಿರಾಬಾದ್ ವಾಡಿ ಕ್ರಾಸ್ ಬಳಿ ನಡೆದಿದೆ.
ಸರ್ಕಾರಿ ಬಸ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಮಗ ಮತ್ತು ಚಿಕ್ಕಮ್ಮ ಮೃತಪಟ್ಟಿದ್ದಾರೆ. ದುಬಲಗುಂಡಿ ಗ್ರಾಮದ ಬೈಕ್ ಸವಾರ ಪವನ್(22) ಅವರ ಚಿಕ್ಕಮ್ಮ ನರಸಮ್ಮ ಮೃತಪಟ್ಟವರು ಎಂದು ಹೇಳಲಾಗಿದೆ. ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಅಪಘಾತ ಸಂಭವಿಸಿದೆ.
ಕಾಮಾಲೆ ರೋಗಕ್ಕೆ ಮನ್ನಾಏಖೇಳ್ಳಿ ಗ್ರಾಮಕ್ಕೆ ಮಗ, ಚಿಕ್ಕಮ್ಮ ಹೋಗಿದ್ದು, ನಾಟಿ ಮದ್ದು ಹಾಕಿಸಿಕೊಂಡು ಹಿಂತಿರುಗುವಾಗ ಅಪಘಾತ ಸಂಭವಿಸಿದೆ. ಬೀದರ್ -ಕಲಬುರಗಿ ಮಾರ್ಗದ ತಡೆರಹಿತ ಸಾರಿಗೆ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಪವನ್ ತಲೆ ಸಂಪೂರ್ಣ ನಜ್ಜುಗುಜ್ಜಾಗಿದೆ. ಹಿಂದೆ ಕುಳಿತಿದ್ದ ನರಸಮ್ಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹಳ್ಳಿಖೇಡ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹಳ್ಳಿಖೇಡ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

