ಬೆಳಗಾವಿ: ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಕೊಲೆಯಾಗಿರುವ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ, ಯುವಕನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಬಳಿಕ ಆತನನ್ನು ಕೊಲೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಇದೀಗ ಈ ಪ್ರಕರಣದಲ್ಲಿ ಬೆಳಗಾವಿ ನಗರ ಪೊಲಿಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತ ಯುವಕನನ್ನು ಗಾಂಧಿನಗರದ ಸರ್ವೇಶ ಕಂಗ್ರಾಳಕರ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿ ಜಾಲಗಾರ, ರಾಹುಲ್ ಜಾಲಗಾರ, ದಶರತ ರಜಪೂತ ಹಾಗೂ ಅರುಣ ಹುಲ್ಲೋಳಿ ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕಮ್ ಅವರ ಮಾರ್ಗದರ್ಶನದಲ್ಲಿ, ಮಾಳಮಾರುತಿ ಠಾಣೆ ಸಿಪಿಐ ಬಿ.ಆರ್. ಗಡೇಕರ್ ನೇತೃತ್ವದ ತಂಡ ತನಿಖೆ ನಡೆಸಿ ಪ್ರಕರಣವನ್ನು ಭೇದಿಸಲಾಗಿದೆ.
2025ರಲ್ಲಿ ನಡೆದ ಹಣಕಾಸಿನ ವಿಚಾರದ ಜಗಳವೇ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಈ ವೇಳೆ ಸರ್ವೇಶ ಹಾಗೂ ಶಶಿ ಜಾಲಗಾರ ನಡುವೆ ಗಲಾಟೆ ನಡೆದಿದ್ದು, ಸರ್ವೇಶನಿಂದ ಶಶಿ ಮೇಲೆ ಹಲ್ಲೆ ನಡೆದಿತ್ತು ಎನ್ನಲಾಗಿದೆ. ಇದರಿಂದ ಇಬ್ಬರ ನಡುವೆ ವೈಷಮ್ಯ, ದ್ವೇಷ ಬೆಳೆದಿತ್ತು.
ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ಶಶಿ ಜಾಲಗಾರ ತನ್ನ ಸಹಚರರೊಂದಿಗೆ ಸೇರಿ ಸರ್ವೇಶನನ್ನು ಹನಿಟ್ರಾಪ್ ಗೆ ಬೀಳಿಸಿ ಕೊಲೆಗೆ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೆ ಆರೋಪಿಗಳು ಇನ್‌ಸ್ಟಾಗ್ರಾಂ ಅನ್ನು ಬಳಸಿಕೊಂಡಿದ್ದಾ. ಸುಂದರ ಯುವತಿಯ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಇನ್‌ಸ್ಟಾಗ್ರಾಂ ಖಾತೆಯಿಂದ ಸರ್ವೇಶನಿಗೆ ಸಂದೇಶ ಕಳುಹಿಸಿ ಆತನೊಂದಿಗೆ ಆತ್ಮೀಯತೆ ಬೆಳೆಸಲಾಗಿತ್ತು.
ಬಳಿಕ ಮನೆಯಲ್ಲೇ ಯಾರೂ ಇಲ್ಲ ಎಂದು ಹೇಳಿ ಸರ್ವೇಶನನ್ನು ನಿರ್ದಿಷ್ಟ ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು. ಅಲ್ಲಿಗೆ ಬಂದ ಸರ್ವೇಶನನ್ನು ಆರೋಪಿಗಳು ಅಪಹರಿಸಿ ನಾನಾವಾಡಿ ಪ್ರದೇಶದಲ್ಲಿ ಕೊಲೆ ಮಾಡಿ
ಮೃತದೇಹವನ್ನು ಖಾನಾಪುರ ತಾಲೂಕಿನ ಜಾಂಬೋಟಿ ಬಳಿ ಎಸೆದು ಪರಾರಿಯಾಗಿದ್ದರು.
ಸರ್ವೇಶ ನಾಪತ್ತೆಯಾಗಿರುವ ಕುರಿತು ಕುಟುಂಬಸ್ಥರು ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಜಂಬೋಟಿ ಬಳಿ ಸರ್ವೇಶನ ಶವ ಪತ್ತೆಯಾಗಿತ್ತು.
ತನಿಖೆ ನಡೆಸಿದಾಗ ಇನ್‌ಸ್ಟಾಗ್ರಾಂ ಸಂಭಾಷಣೆ ಹಾಗೂ ಸರ್ವೇಶ ಮತ್ತು ಶಶಿ ಜಾಲಗಾರ ನಡುವಿನ ಹಳೆಯ ವೈಷಮ್ಯದ ಬಗ್ಗೆ ಪೊಲೀಸರಿಗೆ ಸುಳಿವು ದೊರೆತಿದ್ದು, ಈ ಮೂಲಕ ಆರೋಪಿಗಳನ್ನು ಬಂಧಿಸಿದ್ದಾರೆ.
ಸದ್ಯ ನಾಲ್ವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಹನಿಟ್ರ್ಯಾಪ್‌ಗೆ ಬಳಸಲಾಗಿದ್ದ ಯುವತಿ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಉಳಿದ ಆರೋಪಿಗಳನ್ನೂ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕಮ್ ಮಾಹಿತಿ ನೀಡಿದ್ದಾರೆ.

