ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಓಪನರ್ ಹಾಗೂ ಉಪನಾಯಕಿ ಸ್ಮೃತಿ ಮಂಧಾನಾ ಮೈದಾನದ ಹೊರಗೂ ರಾಣಿಯಂತೆ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ನೆದರ್ಲ್ಯಾಂಡ್ಸ್ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ, ಪುರುಷ ಮತ್ತು ಮಹಿಳಾ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 600 ಬೌಂಡರಿ ಬಾರಿಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಐತಿಹಾಸಿಕ ದಾಖಲೆ ಬರೆದಿದ್ದ ಸ್ಮೃತಿ ಮಂಧಾನಾ, ಈಗ ತಮ್ಮ ಹೊಸ ಕನಸಿನ ಮನೆಯ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿರುವ ಅವರ 10 ಎಕರೆಯ ಭವ್ಯ ಫಾರ್ಮ್ಹೌಸ್ ಯಾವುದೇ ಬಾಲಿವುಡ್ ಸಿನಿಮಾದ ಸೆಟ್ಗಿಂತ ಕಡಿಮೆ ಇಲ್ಲದಂತೆ ನಿರ್ಮಾಣವಾಗಿದೆ.
ಕರಣ್ ಜೋಹರ್ ಸಿನಿಮಾಗಳಿಂದ ಪ್ರೇರಣೆ
ಖ್ಯಾತ ಕ್ರೀಡಾ ನಿರೂಪಕ ಜತಿನ್ ಸಪ್ರು ಆರು ತಿಂಗಳ ಹಿಂದೆ ಈ ಫಾರ್ಮ್ಹೌಸ್ಗೆ ಭೇಟಿ ನೀಡಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ದೊಡ್ಡ ಮನೆಯ ವಿನ್ಯಾಸದ ಬಗ್ಗೆ ಮಾತನಾಡಿರುವ ಸ್ಮೃತಿ, ತಾವು ಬಾಲ್ಯದಿಂದಲೂ ನಿರ್ದೇಶಕರಾದ ಕರಣ್ ಜೋಹರ್ ಮತ್ತು ಸೂರಜ್ ಬರ್ಜಾತ್ಯ ಅವರ ಸಿನಿಮಾಗಳ ದೊಡ್ಡ ಅಭಿಮಾನಿಯಾಗಿದ್ದಾಗಿ ಹೇಳಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ತಮ್ಮ ಮನೆಯ ಮುಂಭಾಗದ ಪ್ರವೇಶ ದ್ವಾರವು ಕರಣ್ ಜೋಹರ್ ಸಿನಿಮಾಗಳಲ್ಲಿ ತೋರಿಸುವ ಶ್ರೀಮಂತ ಮನೆಗಳ ಗೇಟ್ನಂತೆಯೇ ಇರಬೇಕು ಎಂದು ಆಶಿಸಿ, ಅದರಂತೆ ವಿನ್ಯಾಸಗೊಳಿಸಿದ್ದಾರೆ. ಇತ್ತೀಚೆಗೆ ಏಪ್ರಿಲ್ ತಿಂಗಳಲ್ಲಿ ಈ ಮನೆಯ ಭವ್ಯ ಪ್ರವೇಶ ದ್ವಾರದ ಮುಂದೆ ಸ್ಮೃತಿ ನಿಂತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹೆಮ್ಮೆಯ ಕಮೆಂಟ್ ಮಾಡುತ್ತಿದ್ದಾರೆ.
ಕ್ರಿಕೆಟ್ ನೆಟ್ಸ್ ಮತ್ತು ಪಿಕಲ್ಬಾಲ್ ಕೋರ್ಟ್
ಈ ಫಾರ್ಮ್ಹೌಸ್ ಕೇವಲ ವಿಶ್ರಾಂತಿ ಪಡೆಯುವ ತಾಣ ಮಾತ್ರವಲ್ಲ, ಸ್ಮೃತಿ ಮಂಧಾನಾ ಅವರ ಕ್ರಿಕೆಟ್ ಅಭ್ಯಾಸಕ್ಕೂ ಇಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮನೆಯ ಹಿಂಭಾಗದಲ್ಲಿ ಸುಸಜ್ಜಿತ ಕ್ರಿಕೆಟ್ ಪಿಚ್ ಮತ್ತು ಪ್ರಾಕ್ಟೀಸ್ ನೆಟ್ಸ್ ನಿರ್ಮಿಸಲಾಗಿದ್ದು, ಸರಣಿಗಳಿಂದ ಬಿಡುವು ಸಿಕ್ಕಾಗ ಅವರು ಇಲ್ಲೇ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಾರೆ. ಇದರೊಂದಿಗೆ ಮನೆಯ ಆವರಣದಲ್ಲಿ ಒಂದು ಆಧುನಿಕ ಪಿಕಲ್ಬಾಲ್ ಕೋರ್ಟ್ ಕೂಡ ಇದ್ದು, ಅದರ ಗೋಡೆಗಳ ಮೇಲೆ ಸ್ಮೃತಿ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಜರ್ನಿಯ ಅಪರೂಪದ ಚಿತ್ರಗಳನ್ನು ಪ್ರದರ್ಶಿಸಲಾಗಿದೆ.
ಮನೆಯ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಸುಂದರವಾದ ಸ್ವಿಮ್ಮಿಂಗ್ ಪೂಲ್. ಕೃತಕ ಜಲಪಾತದ ಮಾದರಿಯನ್ನು ಹೊಂದಿರುವ ಈ ಪೂಲ್ ಪಕ್ಕದಲ್ಲೇ ಮೇಲಿನ ಮಹಡಿಗೆ ಹೋಗಲು ಸುರುಳಿಯಾಕಾರದ ಮೆಟ್ಟಿಲುಗಳನ್ನು ವಿನ್ಯಾಸಗೊಳಿಸಲಾಗಿದೆ. ಬಿಡುವಿನ ವೇಳೆಯಲ್ಲಿ ತಮ್ಮ ಸಹೋದರನ ಮಕ್ಕಳು ಈ ಪೂಲ್ನಲ್ಲಿ ಆಟವಾಡಲು ಇಷ್ಟಪಡುತ್ತಾರೆ ಎಂದು ಸ್ಮೃತಿ ಹಂಚಿಕೊಂಡಿದ್ದಾರೆ. ಕಡು ಬಡತನ ಮತ್ತು ಕಠಿಣ ಪರಿಶ್ರಮದಿಂದ ಬೆಳೆದು ಬಂದಿರುವ ಮಂಧಾನಾ, ಇಂದು ಭಾರತೀಯ ಮಹಿಳೆಯರಿಗೆ ದೊಡ್ಡ ಪ್ರೇರಣೆಯಾಗಿದ್ದಾರೆ.

