ಸಂಜೆಯಾಗುತ್ತಿದ್ದಂತೆ ಏನಾದರೂ ಚಟಪಟ ಅಂತ ಇರುವ ಖಾರ ಹಾಗೂ ಚಾಟ್ಸ್ ತಿನ್ನಬೇಕು ಅನ್ನಿಸುವುದು ಸಹಜ. ಪ್ರತಿದಿನ ಮಾಡುವ ಸಾಮಾನ್ಯ ಚಾಟ್ಸ್‌ಗಳಿಗಿಂತ ಭಿನ್ನವಾಗಿ, ಮಹಾರಾಷ್ಟ್ರದ ಪ್ರಸಿದ್ಧ ತಿಂಡಿ ಭಾಕರ್ವಡಿಯನ್ನು ಬಳಸಿ ಕೇವಲ ಹತ್ತು ನಿಮಿಷಗಳಲ್ಲಿ ಒಂದು ಅದ್ಭುತವಾದ ಚಾಟ್ ತಯಾರಿಸಬಹುದು. ಅತಿ ಕಡಿಮೆ ಶ್ರಮದಲ್ಲಿ ತಯಾರಾಗುವ ಈ ವಿಭಿನ್ನ ಭಾಕರ್ವಡಿ ಚಾಟ್ ರುಚಿ ನೋಡಿದರೆ ಖಂಡಿತ ನೀವು ಮತ್ತೆ ಮತ್ತೆ ಮಾಡಿಕೊಂಡು ತಿನ್ನುತ್ತೀರಾ. ಇದನ್ನು ಮಾಡುವ ಸುಲಭ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು
ಒಂದು ಕಪ್ ಸಣ್ಣ ಗಾತ್ರದ ಭಾಕರ್ವಡಿ, ಒಂದು ಕಪ್ ಕುರ್ಮುರ (ಪುರಿ), ಒಂದು ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಎರಡು ಹಸಿರು ಮೆಣಸಿನಕಾಯಿ, ಒಂದು ಸಣ್ಣದಾಗಿ ಹೆಚ್ಚಿದ ಟೊಮೆಟೊ, ಒಂದು ಸಣ್ಣದಾಗಿ ಹೆಚ್ಚಿದ ಸೌತೆಕಾಯಿ, ಒಂದು ಬೇಯಿಸಿ ಸಣ್ಣದಾಗಿ ಹೆಚ್ಚಿದ ಆಲೂಗಡ್ಡೆ, ಒಂದು ದೊಡ್ಡ ಚಮಚ ನಿಂಬೆ ರಸ, ಒಂದು ಚಮಚ ಚಾಟ್ ಮಸಾಲಾ, ಅರ್ಧ ಚಮಚ ಅಚ್ಚಖಾರದ ಪುಡಿ, ಒಂದು ದೊಡ್ಡ ಚಮಚ ಜೇನುತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಕಪ್ ಸೇವ್ (ಕಾರದ ಕಡ್ಡಿ) ಹಾಗೂ ಅರ್ಧ ಕಪ್ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು.
ತಯಾರಿಸುವ ವಿಧಾನ
ಮೊದಲಿಗೆ ಒಂದು ದೊಡ್ಡ ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದಕ್ಕೆ ಸಣ್ಣ ಗಾತ್ರದ ಭಾಕರ್ವಡಿಗಳನ್ನು ಹಾಕಿಕೊಳ್ಳಬೇಕು. ನಂತರ ಅದಕ್ಕೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಟೊಮೆಟೊ, ಸೌತೆಕಾಯಿ ಹಾಗೂ ಬೇಯಿಸಿದ ಆಲೂಗಡ್ಡೆ ತುಂಡುಗಳನ್ನು ಸೇರಿಸಬೇಕು.
ಈ ಮಿಶ್ರಣಕ್ಕೆ ಅಚ್ಚಖಾರದ ಪುಡಿ ಮತ್ತು ಚಾಟ್ ಮಸಾಲಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಮಸಾಲೆ ಎಲ್ಲಾ ತರಕಾರಿ ಮತ್ತು ಭಾಕರ್ವಡಿಗೆ ಚೆನ್ನಾಗಿ ಹಿಡಿದ ನಂತರ, ಅದಕ್ಕೆ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಬೇಕು. ಜೇನುತುಪ್ಪವು ಚಾಟ್‌ಗೆ ಒಂದು ವಿಶಿಷ್ಟವಾದ ಸಿಹಿ ಮತ್ತು ಹುಳಿ ರುಚಿಯನ್ನು ನೀಡುತ್ತದೆ. ಇದರ ಜೊತೆಗೆ ಕುರ್ಮುರ (ಪುರಿ) ಕೂಡ ಸೇರಿಸಿ ಕೈ ಆಡಿಸಬೇಕು.
ಕೊನೆಯಲ್ಲಿ ಕಾಲು ಕಪ್ ಸೇವ್ ಹಾಗೂ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಈ ಮಿಶ್ರಣಕ್ಕೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಒಟ್ಟಿಗೆ ಬೆರೆಸಬೇಕು. ಪುರಿ ಮತ್ತು ಭಾಕರ್ವಡಿ ಮೆತ್ತಗಾಗುವ ಮುನ್ನವೇ ಇದನ್ನು ಒಂದು ಸರ್ವಿಂಗ್ ಬೌಲ್‌ಗೆ ವರ್ಗಾಯಿಸಿ, ಮೇಲಿಂದ ಉಳಿದ ಸೇವ್ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬಾಯಲ್ಲಿ ನೀರೂರಿಸುವ ಭಾಕರ್ವಡಿ ಚಾಟ್ ಸವಿಯಲು ಸಿದ್ಧವಾಗುತ್ತದೆ.

