ಮುಂಬೈ: ಹಿರಿಯ ನಟಿ ನೀತು ಕಪೂರ್ ಅವರು ತಮ್ಮ ಪತಿ ರಿಷಿ ಕಪೂರ್ ಅವರ ನಿಧನದ ನಂತರ ಮತ್ತೆ ಸಿನಿಮಾರಂಗಕ್ಕೆ ಮರಳಿ, ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ರೀತಿ ಎಲ್ಲರಿಗೂ ಮಾದರಿಯಾಗಿದೆ. ಇದೀಗ ಕಿರುತೆರೆಯ ಜನಪ್ರಿಯ ನಟಿ ರುಬೀನಾ ದಿಲೈಕ್ ಅವರು ನೀತು ಕಪೂರ್ ಅವರ ಈ ಕಮ್‌ಬ್ಯಾಕ್ ಜರ್ನಿ ತಮಗೆ ವೈಯಕ್ತಿಕವಾಗಿ ತುಂಬಾ ಕನೆಕ್ಟ್ ಆಗಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ರುಬೀನಾ, ಒಬ್ಬ ಮಹಿಳೆಯಾಗಿ, ತಾಯಿಯಾಗಿ ಮತ್ತು ವರ್ಕಿಂಗ್ ಪ್ರೊಫೆಷನಲ್ ಆಗಿ ನೀತು ಕಪೂರ್ ಅವರ ಧೈರ್ಯ ಮತ್ತು ಜರ್ನಿಯನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ ಎಂದಿದ್ದಾರೆ. “ನೀತು ಕಪೂರ್ ಅವರು ಸದಾ ಸೌಂದರ್ಯ ಮತ್ತು ಶಕ್ತಿಯ ಸಂಕೇತ. ದಶಕಗಳ ಕಾಲ ಚಿತ್ರರಂಗದಿಂದ ದೂರವಿದ್ದು, ವೈಯಕ್ತಿಕ ಬದುಕಿನಲ್ಲಿ ದೊಡ್ಡ ನೋವುಂಡ ಮೇಲೂ ಅವರು ಕ್ಯಾಮೆರಾ ಎದುರಿಸಲು ಧೈರ್ಯ ಮಾಡಿದ್ದು ಸಣ್ಣ ವಿಷಯವಲ್ಲ. ತಾಯಿಯಾದ ನಂತರ ಅಥವಾ ಜೀವನದಲ್ಲಿ ಕಷ್ಟ ಬಂದಾಗ ಕೆಲಸಕ್ಕೆ ಮರಳಲು ಹಿಂಜರಿಯುವ ಪ್ರತಿಯೊಬ್ಬ ಮಹಿಳೆಗೂ ನೀತು ಕಪೂರ್ ಅವರೇ ಹಾದಿ ದೀಪ” ಎಂದು ರುಬೀನಾ ಶ್ಲಾಘಿಸಿದ್ದಾರೆ.
ಪತಿಯ ತ್ಯಾಗವನ್ನು ಕೊಂಡಾಡಿದ ನಟಿ: ಇದೇ ವೇಳೆ ತಮ್ಮ ಯಶಸ್ಸಿನ ಹಿಂದಿರುವ ಪತಿ ಅಭಿನವ್ ಶುಕ್ಲಾ ಅವರ ದೊಡ್ಡ ಬೆಂಬಲದ ಬಗ್ಗೆಯೂ ರುಬೀನಾ ಮುಕ್ತವಾಗಿ ಮಾತನಾಡಿದ್ದಾರೆ. ತಾವು ತಮ್ಮ ಕನಸುಗಳನ್ನು ಬೆನ್ನಟ್ಟಲು ಪತಿಯೇ ದೊಡ್ಡ ಬೆನ್ನೆಲುಬು ಎಂದಿದ್ದಾರೆ. “ನಾನು ಶೂಟಿಂಗ್‌ಗಾಗಿ ಹೊರಗೆ ಹೋದಾಗ, ನನ್ನ ಪತಿ ತನ್ನ ಹಠ, ಇಗೋ ಎಲ್ಲವನ್ನೂ ಬದಿಗಿಟ್ಟು ‘ನೀನು ಹೋಗಿ ನಿನ್ನ ಕನಸನ್ನು ನನಸು ಮಾಡಿಕೊ, ನಾನು ಮನೆಯಲ್ಲಿದ್ದು ನಮ್ಮ ಹೆಣ್ಣುಮಕ್ಕಳನ್ನು ನೋಡಿಕೊಳ್ಳುತ್ತೇನೆ’ ಎಂದು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಒಬ್ಬ ಪುರುಷನಿಗೆ ಇಂತಹ ನಿರ್ಧಾರ ತೆಗೆದುಕೊಳ್ಳಲು ಅಪಾರವಾದ ಮಾನಸಿಕ ಶಕ್ತಿ ಬೇಕು. ನನ್ನ ಕೆಲಸದ ಮೇಲಿನ ಪ್ರೀತಿಯನ್ನು ಗೌರವಿಸುವ ಅವರೇ ನಿಜವಾದ ಗಂಡಸು” ಎಂದು ಪತಿಯನ್ನು ಕೊಂಡಾಡಿದ್ದಾರೆ.
ಸಮಾಜದ ನಿಯಮಗಳನ್ನು ಮುರಿದ ದಂಪತಿ: ಹೆಣ್ಣುಮಕ್ಕಳನ್ನು ಬೆಳೆಸುವಲ್ಲಿ ಸಮಾಜದ ಹಳೆಯ ರೂಢಿಗಳನ್ನು ನಾವು ಪಾಲಿಸುತ್ತಿಲ್ಲ ಎಂದು ರುಬೀನಾ ಸ್ಪಷ್ಟಪಡಿಸಿದ್ದಾರೆ. “ಗಂಡಸು ಹೀಗೇ ಇರಬೇಕು, ಹೆಂಗಸು ಹೀಗೇ ಬದುಕಬೇಕು ಎಂಬ ಸಮಾಜದ ಹಳೇ ನಿಯಮಗಳನ್ನು ಸಾಕು ಮಾಡಿ, ನಮ್ಮ ಮಗಳಿಗೆ ಹೊಸ ಮೌಲ್ಯಗಳನ್ನು ಕಲಿಸಿಕೊಡುತ್ತಿದ್ದೇವೆ. ಇಂತಹ ಸಿದ್ಧಸೂತ್ರಗಳನ್ನು ಬದಿಗೊತ್ತಿ ಬದುಕುತ್ತಿರುವುದು ನಮ್ಮ ಪುಣ್ಯ” ಎಂದು ಅವರು ಹೇಳಿದ್ದಾರೆ.
ಅಂದಹಾಗೆ, ಅವಳಿ ಹೆಣ್ಣುಮಕ್ಕಳ ತಾಯಿಯಾಗಿರುವ ರುಬೀನಾ ದಿಲೈಕ್ ಅವರು ಪ್ರಸ್ತುತ ರಿಯಾಲಿಟಿ ಶೋ ‘ಖತ್ರೋನ್ ಕೆ ಖಿಲಾಡಿ’ಯಲ್ಲಿ ಭಾಗವಹಿಸುತ್ತಿದ್ದು, ಇದಕ್ಕಾಗಿ 40 ದಿನಗಳ ಕಾಲ ದಕ್ಷಿಣ ಆಫ್ರಿಕಾದಲ್ಲಿದ್ದಾರೆ.

