ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಕೇಂದ್ರ ತನಿಖಾ ದಳ (NIA) ಹಾಗೂ ‘ರಾ’ ಅಧಿಕಾರಿಗಳು ಎಂಟ್ರಿಕೊಟ್ಟಿದ್ದಾರೆ.
ಪ್ರಧಾನಿ ಮೋದಿ ಬೆಂಗಳೂರು ಹೊರವಲಯದ ಕಗ್ಗಲೀಪುರ ಸಮೀಪದ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾದ ಧ್ಯಾನ ಮಂದಿರ ಉದ್ಘಾಟನೆ ಹಾಗೂ ಸಂಸ್ಥೆಯ 45ನೇ ವಾರ್ಷಿಕೋತ್ಸವ ಹಾಗೂ ಶ್ರೀ ರವಿಶಂಕರ ಗುರೂಜಿ ಅವರ 70ನೇ ವರ್ಷದ ಜನ್ಮದಿನ ಹಿನ್ನೆಲೆ ಆರ್ಟ್ ಆಫ್ ಲಿವಿಂಗ್ ನ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಪ್ರಧಾನಿ ಮೋದಿ ಸಂಚರಿಸುವ ರಸ್ತೆ ಮಾರ್ಗದಲ್ಲಿ ಸ್ಫೋಟಕ ವಸ್ತುಗಳಾದ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿತ್ತು. ಕಗ್ಗಲಿಪುರ-ತಾತಗುಣಿ ಬಳಿಯ ವಡೇರಹಳ್ಳಿ ಗೇಟ್ ಬಳಿಯ ರಸ್ತೆ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದವು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ತನಿಖೆಗೆ ಮುಂದಾಗಿದೆ. ತನಿಖಾ ಸಂಸ್ಥೆಗಳಾದ ಎನ್ಐಎ, ರಾ (RAW) ಮತ್ತು ಕೇಂದ್ರ ಗುಪ್ತಚರ ಇಲಾಖೆ (IB) ಅಧಿಕಾರಿಗಳು ಈಗ ತನಿಖೆಗೆ ಇಳಿದಿದ್ದಾರೆ.
ರಾಷ್ಟ್ರೀಯ ತನಿಖಾ ದಳದ ಡಿವೈಎಸ್‌ಪಿ ನೇತೃತ್ವದ ತಂಡವು ಸ್ಫೋಟಕ ಪತ್ತೆಯಾದ ವಡೇರಹಳ್ಳಿ ಗೇಟ್ ಸಮೀಪದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಅವರಿಂದ ಎನ್ಐಎ ಅಧಿಕಾರಿಗಳು ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.
ಪ್ರಧಾನಿಯವರ ಭದ್ರತೆಯ ಜವಾಬ್ದಾರಿ ಹೊರುವ ಎನ್‌ಎಸ್‌ಜಿ ಪಡೆಯ ಮುಖ್ಯಸ್ಥರು ಕೂಡ ರಾಜ್ಯ ಪೊಲೀಸ್ ಇಲಾಖೆಯಿಂದ ತನಿಖಾ ಪ್ರಗತಿಯ ವರದಿಯನ್ನು ತರಿಸಿಕೊಂಡಿದ್ದಾರೆ. ಮತ್ತೊಂದೆಡೆ ರಾಜ್ಯದ ವಿಶೇಷ ಪೊಲೀಸ್ ತಂಡದಿಂದಲೂ ತನಿಖೆ ನಡೆಯುತ್ತಿದೆ.
ರಾಮನಗರ ಡಿವೈಎಸ್‌ಪಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಾಥಮಿಕ ತನಿಖೆಯಲ್ಲಿ ಕೆಲವು ಆಘಾತಕಾರಿ ಅಂಶಗಳು ಹೊರಬಂದಿವೆ. ಜಿಲೆಟಿನ್ ಕಡ್ಡಿಗಳಿದ್ದ ಬಾಕ್ಸ್‌ಗಳನ್ನು ಯಾರೋ ಉದ್ದೇಶಪೂರ್ವಕವಾಗಿಯೇ ಅಲ್ಲಿ ಇಟ್ಟಿದ್ದಾರೆ ಎಂಬುದು ತನಿಖೆ ವೇಳೆ ದೃಢಪಟ್ಟಿದೆ. ಆದರೆ, ಸ್ಫೋಟಕಗಳನ್ನು ಯಾವ ನಿಖರ ಸಮಯದಲ್ಲಿ ತಂದು ಇರಿಸಲಾಗಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸ್ಫೋಟಕ ಪತ್ತೆಯಾದ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇಲ್ಲದಿರುವುದು ತನಿಖಾ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕಗ್ಗಲಿಪುರ ಠಾಣೆ ಪೊಲೀಸರು ಮತ್ತು ಎನ್ಐಎ ತಂಡ ಜಂಟಿಯಾಗಿ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನದ ಮೇಲೆ ನಿಗಾ ಇಟ್ಟಿವೆ. ಅಂತರರಾಜ್ಯ ಅಥವಾ ಅಂತರಜಿಲ್ಲಾ ನಂಟು ಈ ಕೃತ್ಯದ ಹಿಂದೆ ಇದೆಯೇ ಎಂಬ ನಿಟ್ಟಿನಲ್ಲಿ ‘ರಾ’ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

