ಯಾವಾಗಲೂ ನಿದ್ರೆ ಮಂಪರಿನಲ್ಲಿ ಇರುವುದು ಅನೇಕರಲ್ಲಿ ಆತಂಕ ಮೂಡಿಸುತ್ತಿದೆ. ಇದು ಕೇವಲ ಸಾಮಾನ್ಯ ಸುಸ್ತಲ್ಲ, ಬದಲಿಗೆ ದೇಹದಲ್ಲಿ ಅಡಗಿರುವ ಕೆಲವು ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು ಎಂದು ವೈದ್ಯಕೀಯ ತಜ್ಞರು ಎಚ್ಚರಿಸುತ್ತಿದ್ದಾರೆ.ವಾರಗಟ್ಟಲೆ ಈ ಸಮಸ್ಯೆ ಮುಂದುವರಿದರೆ ಖಂಡಿತವಾಗಿಯೂ ವೈದ್ಯಕೀಯ ಸಲಹೆ ಪಡೆಯಬೇಕು ಎಂದು ಅವರು ಸೂಚಿಸುತ್ತಾರೆ.
ನಿದ್ರೆಯ ಮಂಪರು vs ಸಾಮಾನ್ಯ ಆಯಾಸ
ಸಾಮಾನ್ಯ ಆಯಾಸವು ಸ್ವಲ್ಪ ವಿಶ್ರಾಂತಿ ಪಡೆದರೆ ಕಡಿಮೆಯಾಗುತ್ತದೆ. ಆದರೆ ನಿರಂತರವಾದ ನಿದ್ರೆಯ ಮಂಪರು ಎಷ್ಟು ನಿದ್ರೆ ಮಾಡಿದರೂ ಕಡಿಮೆಯಾಗುವುದಿಲ್ಲ. ಕೆಲಸ ಮಾಡುವಾಗ, ಡ್ರೈವಿಂಗ್ ಮಾಡುವಾಗಲೂ ಕಣ್ಣುಗಳು ಮುಚ್ಚಿ ಹೋಗುವುದು ಮತ್ತು ಹಗಲಿನಲ್ಲಿ ಭಾರವೆನಿಸುವುದು ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಇದು ಅನಾರೋಗ್ಯದ ಸೂಚಕವಾಗಿದ್ದು, ಇದನ್ನು ಎಂದಿಗೂ ನಿರ್ಲಕ್ಷಿಸಬಾರದು.
ಯಾವಾಗಲೂ ನಿದ್ರೆ ಬರಲು ಪ್ರಮುಖ ಕಾರಣಗಳು
ನಿದ್ರಾಹೀನತೆ, ಥೈರಾಯ್ಡ್ ಸಮಸ್ಯೆಗಳು , ಮಧುಮೇಹ, ಮತ್ತು ಖಿನ್ನತೆಯಂತಹ(Depression) ಮಾನಸಿಕ ಸಮಸ್ಯೆಗಳು ನಿದ್ರೆಯ ಮಂಪರಿಗೆ ಪ್ರಮುಖ ಕಾರಣಗಳಾಗಿವೆ. ಕೆಲವು ಔಷಧಿಗಳು ಸಹ ಈ ಸಮಸ್ಯೆಯನ್ನು ಹೆಚ್ಚಿಸಬಹುದು. ಇದಲ್ಲದೆ, ‘ಸ್ಲೀಪ್ಅಪ್ನಿಯಾ’ ದಂತಹ ನಿದ್ರೆಯ ಅಸ್ವಸ್ಥತೆಗಳು ಗಾಢ ನಿದ್ರೆಗೆ ಭಂಗ ತರುತ್ತವೆ, ಇದರಿಂದಾಗಿ ಅಕಾಲಿಕವಾಗಿ ನಿದ್ರೆ ಬಂದಂತಾಗುತ್ತದೆ.
ಅನಾರೋಗ್ಯಕರ ನಿದ್ರೆಯ ಲಕ್ಷಣಗಳು
- ಹಗಲಿನಲ್ಲಿ ತೂಕಡಿಕೆ.
- ಬೆಳಿಗ್ಗೆ ತಲೆನೋವು.
- ಜೋರಾಗಿ ಗೊರಕೆ ಹೊಡೆಯುವುದು.
- ಇದ್ದಕ್ಕಿದ್ದಂತೆ ನಿದ್ರೆಗೆ ಜಾರುವುದು.
- ಏಕಾಗ್ರತೆಯ ಕೊರತೆ ಮತ್ತು ಆಸಕ್ತಿ ಕಡಿಮೆಯಾಗುವುದು.
ಈ ಸಂಕೇತಗಳು ಕಂಡುಬಂದರೆ ಅವುಗಳನ್ನು ನಿರ್ಲಕ್ಷಿಸಬೇಡಿ. ನಿದ್ರೆಯ ಮಂಪರು ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಡ್ರೈವಿಂಗ್ ಮಾಡುವಾಗ ತೊಂದರೆ, ಓದಿನಲ್ಲಿ ಕಡಿಮೆ ಅಂಕಗಳು, ಕೆಲಸದಲ್ಲಿ ತಪ್ಪುಗಳಾಗುವುದು ಇವೆಲ್ಲವೂ ಎಚ್ಚರಿಕೆಯ ಸಂಕೇತಗಳು.
ತಡೆಗಟ್ಟಲು ಸಲಹೆಗಳು
- ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಮತ್ತು ಏಳುವ ಅಭ್ಯಾಸ ಮಾಡಿಕೊಳ್ಳಿ.
- ರಾತ್ರಿ ವೇಳೆ ಭಾರಿ ಭೋಜನ (Heavy food), ಕಾಫಿ ಮತ್ತು ಟೀ ಸೇವನೆಯನ್ನು ಕಡಿಮೆ ಮಾಡಿ.
- ಮಲಗುವ ಒಂದು ಗಂಟೆ ಮೊದಲು ಮೊಬೈಲ್ ಮತ್ತು ಟಿವಿ ಬಳಕೆಯನ್ನು ನಿಯಂತ್ರಿಸಿ.
- ನಿಯಮಿತವಾಗಿ ವ್ಯಾಯಾಮ ಮಾಡಿ.
ವೈದ್ಯರು ರಕ್ತ ಪರೀಕ್ಷೆ, ಥೈರಾಯ್ಡ್ ಮತ್ತು ಸಕ್ಕರೆ ಮಟ್ಟವನ್ನು ಪರೀಕ್ಷಿಸುತ್ತಾರೆ. ಅಗತ್ಯವಿದ್ದರೆ ‘ಸ್ಲೀಪ್ ಲ್ಯಾಬ್’ನಲ್ಲಿ ನಿದ್ರೆಯ ಪರೀಕ್ಷೆಗಳನ್ನು ಮಾಡಬೇಕಾಗಬಹುದು. ಸಕಾಲದಲ್ಲಿ ಗುರುತಿಸಿ ಚಿಕಿತ್ಸೆ ಪಡೆದರೆ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಹೋಗಲಾಡಿಸಬಹುದು.

