ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಸರ್ಕಾರಿ ಕಾಲೇಜಿನ ಉಪನ್ಯಾಸಕರೊಬ್ಬರಿಂದ ಆನ್ಲೈನ್ ಮೂಲಕ 13.92 ಲಕ್ಷ ರೂಪಾಯಿ ಪಡೆದು ವಂಚಿಸಲಾಗಿದೆ.
ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ದಾವಣಗೆರೆಯ ಭೂಮಿಕಾ ನಗರದ 52 ವರ್ಷದ ಉಪನ್ಯಾಸಕ ವಂಚನೆಗೆ ಒಳಗಾಗಿ ದೂರು ನೀಡಿದ್ದಾರೆ. ಉಪನ್ಯಾಸಕರ ಮೊಬೈಲ್ ಸಂಖ್ಯೆಯನ್ನು ಟೆಲಿಗ್ರಾಂ ಗ್ರೂಪ್ ಗೆ ಅಪರಿಚಿತರು ಸೇರಿಸಿದ್ದು, ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂದು ಮೆಸೇಜ್ ಹಾಕುವ ಮೂಲಕ ನಂಬಿಸಿದ್ದರು. ಗ್ರೂಪ್ ನಲ್ಲಿ ಕಳುಹಿಸಿದ್ದ ಲಿಂಕ್ ಬಳಸಿಕೊಂಡು ಅವರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 13.92 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾರೆ.
ನಂತರ ಮತ್ತೆ ಮತ್ತೆ ಹಣ ಹೂಡಿಕೆ ಮಾಡುವಂತೆ ವಂಚಕರು ಒತ್ತಾಯಿಸಿದ್ದು, ಹೂಡಿಕೆ ಮಾಡಿದ ಯಾವುದೇ ಹಣವನ್ನು ವಾಪಸ್ ನೀಡಿಲ್ಲ. ಇದು ಮೋಸದ ಜಾಲ ಎಂದು ವಂಚನೆಗೊಳಗಾದ ಉಪನ್ಯಾಸಕರಿಗೆ ಗೊತ್ತಾಗಿದೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.

