ಜಾಗತಿಕವಾಗಿ ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಆರ್ಥಿಕ ಅಸ್ಥಿರತೆ ತಲೆದೂರಿರುವ ಬೆನ್ನಲ್ಲೇ, ಭಾರತದ ಆರ್ಥಿಕತೆಯನ್ನು ಸುಸ್ಥಿತಿಯಲ್ಲಿಡಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ವಿಶೇಷ ಕರೆ ನೀಡಿದ್ದಾರೆ. ಹೈದರಾಬಾದ್‌ನ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಚ್ಚಾ ತೈಲ ಬೆಲೆ ಏರಿಕೆಯಂತಹ ಸವಾಲುಗಳನ್ನು ಎದುರಿಸಲು ಪ್ರತಿಯೊಬ್ಬ ಭಾರತೀಯನು ಜವಾಬ್ದಾರಿಯುತವಾಗಿ ಬದುಕುವ ಮೂಲಕ ವಿದೇಶಿ ವಿನಿಮಯವನ್ನು ಉಳಿಸುವುದು ಇಂದಿನ ‘ರಾಷ್ಟ್ರೀಯ ಕರ್ತವ್ಯ’ ಎಂದು ಪ್ರತಿಪಾದಿಸಿದರು. ದೇಶದ ಆರ್ಥಿಕ ಭದ್ರತೆಗಾಗಿ ನಾಗರಿಕರು ಸಂಕಲ್ಪ ಮಾಡಬೇಕಾದ ಅನಿವಾರ್ಯತೆಯನ್ನು ಪ್ರಧಾನಿ ಈ ಸಂದರ್ಭದಲ್ಲಿ ಒತ್ತಿ ಹೇಳಿದರು.
ಪಶ್ಚಿಮ ಏಷ್ಯಾ ಯುದ್ಧದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಪ್ರಧಾನಿ ಮೋದಿ ಅವರು ದೇಶದ ಜನತೆ ಮುಂದೆ 5 ಪ್ರಮುಖ ಪ್ರಸ್ತಾವನೆಗಳನ್ನು ಇಟ್ಟಿದ್ದಾರೆ. ಅವುಗಳ ವಿವರ ಇಲ್ಲಿದೆ:
1.ಇಂಧನ ಉಳಿತಾಯಕ್ಕೆ ಮೊದಲ ಆದ್ಯತೆ
ಭಾರತ ತನ್ನ ಅಗತ್ಯದ ಶೇ. 88ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ತೈಲ ಬೆಲೆ ಏರಿಕೆ ತಡೆಯಲು ಸಾಧ್ಯವಾದಷ್ಟು ಮೆಟ್ರೋ ಮತ್ತು ಸಾರ್ವಜನಿಕ ಸಾರಿಗೆ ಬಳಸಿ.ಖಾಸಗಿ ವಾಹನ ಬಳಸುವವರು ಕಾರ್ ಪೂಲಿಂಗ್ (ವಾಹನ ಹಂಚಿಕೆ) ರೂಢಿಸಿಕೊಳ್ಳಿ.
ಎಲೆಕ್ಟ್ರಿಕ್ ವಾಹನಗಳ (EV) ಬಳಕೆಗೆ ಹೆಚ್ಚಿನ ಒತ್ತು ನೀಡಿ.
2.ವರ್ಕ್ ಫ್ರಮ್ ಹೋಮ್ ಮತ್ತೆ ಶುರುಮಾಡಿ
ಕೊರೊನಾ ಕಾಲದ ಮನೆಯಿಂದಲೇ ಕೆಲಸ (WFH) ಮತ್ತು ಆನ್‌ಲೈನ್ ಸಭೆಗಳನ್ನು ಮತ್ತೆ ಜಾರಿಗೆ ತರುವುದು ಇಂದಿನ ಅನಿವಾರ್ಯತೆ. ಇದರಿಂದ ಕಚೇರಿ ಪ್ರಯಾಣದ ವೆಚ್ಚ ಮತ್ತು ಇಂಧನದ ವ್ಯರ್ಥ ಬಳಕೆ ಗಣನೀಯವಾಗಿ ತಗ್ಗಲಿದೆ.
3.ವಿದೇಶಿ ಪ್ರವಾಸ ಹಾಗೂ ಮದುವೆಗಳಿಗೆ ಬ್ರೇಕ್
ದೇಶದ ವಿದೇಶಿ ವಿನಿಮಯವನ್ನು ಉಳಿಸಲು ಕನಿಷ್ಠ ಒಂದು ವರ್ಷದವರೆಗೆ ವಿದೇಶಿ ಪ್ರವಾಸಗಳನ್ನು ಮುಂದೂಡಿ.ವಿದೇಶಗಳಲ್ಲಿ ಮದುವೆ (Destination Wedding) ಮಾಡಿಕೊಳ್ಳುವ ಬದಲು ಭಾರತದ ಪ್ರವಾಸಿ ತಾಣಗಳಲ್ಲೇ ಸಮಾರಂಭ ಆಯೋಜಿಸಿ. ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ಬೆಂಬಲ ನೀಡಿ.
4.ಚಿನ್ನದ ವ್ಯಾಮೋಹಕ್ಕೆ ಒಂದು ವರ್ಷ ವಿರಾಮ
ಚಿನ್ನದ ಆಮದು ದೇಶದ ಬೊಕ್ಕಸಕ್ಕೆ ಭಾರಿ ಹೊರೆಯಾಗುತ್ತಿದೆ. ಆದ್ದರಿಂದ ಮನೆಯಲ್ಲಿ ಎಷ್ಟೇ ಶುಭ ಸಮಾರಂಭಗಳಿದ್ದರೂ, ರಾಷ್ಟ್ರದ ಹಿತದೃಷ್ಟಿಯಿಂದ ಮುಂದಿನ ಒಂದು ವರ್ಷ ಚಿನ್ನ ಖರೀದಿಸದಿರಲು ಸಂಕಲ್ಪ ಮಾಡಿ ಎಂದು ಪ್ರಧಾನಿ ಕೋರಿದ್ದಾರೆ.
5.ಅಡುಗೆ ಎಣ್ಣೆ ಮತ್ತು ಗೊಬ್ಬರ ಬಳಕೆಯಲ್ಲಿ ಮಿತಿ
ಅಡುಗೆ ಎಣ್ಣೆಯ ಆಮದಿಗೂ ಭಾರತ ಭಾರಿ ಹಣ ವ್ಯಯಿಸುತ್ತಿದೆ. ಆದ್ದರಿಂದ ಪ್ರತಿ ಮನೆಯಲ್ಲೂ ಅಡುಗೆ ಎಣ್ಣೆಯ ಬಳಕೆಯನ್ನು ಮಿತಿಗೊಳಿಸಬೇಕು. ಹಾಗೆಯೇ ರೈತರು ಆಮದು ಮಾಡಿದ ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ ನೈಸರ್ಗಿಕ ಕೃಷಿಯತ್ತ ಗಮನ ಹರಿಸಬೇಕು ಎಂದು ತಿಳಿಸಿದರು.
ಆರ್ಥಿಕತೆ ಮೇಲೆ ಯುದ್ಧದ ಪ್ರಭಾವ:
ಫೆಬ್ರವರಿ 28ರಂದು ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾದಾಗಿನಿಂದ, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $70 ರಿಂದ $120 ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಡಾಲರ್ ಎದುರು ರೂಪಾಯಿ ಮೌಲ್ಯವು ₹91 ರಿಂದ ₹95 ಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಅನಿವಾರ್ಯವಾಗಿ ಇಂಧನ ಬೆಲೆ ಏರಿಕೆ ಮಾಡುವ ಮುನ್ಸೂಚನೆಯನ್ನು ಈ ಭಾಷಣದ ಮೂಲಕ ನೀಡಲಾಗಿದೆ.

